ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷ ಪಟ್ಟ ಯಾರಿಗೆ?

| Published : Jul 18 2025, 12:45 AM IST

ಸಾರಾಂಶ

ರಾಬಕೋ ಅಧ್ಯಕ್ಷರಾಗಲು ರಾಜಕೀಯವಾಗಿ ನಡೆಯುತ್ತಿರುವ ಪ್ರಯತ್ನದ ಜತೆಗೆ ತೆರೆಮರೆಯಲ್ಲಿ ನಿರ್ದೇಶಕರ ಕುದುರೆ ವ್ಯಾಪಾರಕ್ಕೂ ಯತ್ನ ನಡೆದಿದೆ. ಕೆಎಂಎಫ್ ಚುನಾವಣೆಯಲ್ಲಿ ಭಾಗವಹಿಸಲು ಪ್ರತಿನಿಧಿ ಕಳುಹಿಸಬೇಕಾಗಿರುವುದರಿಂದ ಅದಕ್ಕೂ ಸಹ ದೊಡ್ಡ ಹೈಡ್ರಾಮಾವೇ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕಾಗಿ ಮೆಗಾ ಫೈಟ್ ನಡೆದಿದ್ದು, ಅಧ್ಯಕ್ಷರು ಯಾರಾಗುತ್ತಾರೆ ಎನ್ನುವ ಕುತೂಹಲ ಕೆರಳಿದೆ.

ಕಳೆದ ಬಾರಿ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಭೀಮಾನಾಯ್ಕ ಮತ್ತೊಮ್ಮೆ ಅಧ್ಯಕ್ಷರಾಗಲೇಬೇಕು ಎಂದು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ರಾಬಕೋ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಕಳೆದ ಬಾರಿ ಬಳ್ಳಾರಿ ಜಿಲ್ಲೆಯವರೇ ಆಗಿದ್ದು, ಈ ಬಾರಿ ಕೊಪ್ಪಳಕ್ಕೆ ಬಿಟ್ಟುಕೊಡಬೇಕು ಎನ್ನುವ ಫೈಟ್ ನಡೆದಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಪ್ರತಿನಿಧಿಗಳು ಒಗ್ಗಟ್ಟಾಗಿ ಪಟ್ಟು ಹಿಡಿದಿದ್ದಾರೆ.

ಬಲಾಬಲ:

ರಾಬಕೋದಲ್ಲಿ 12 ನಿರ್ದೇಶಕರು ಚುನಾಯಿತರಾಗಿದ್ದು, ಒಂದು ನಾಮನಿರ್ದೇಶನ ಮಾಡಲಾಗಿದೆ. ಮೂವರು ಅಧಿಕಾರಿಗಳು ಪದನಿಮಿತ್ತ ಮತದಾನದ ಹಕ್ಕು ಹೊಂದಿರುತ್ತಾರೆ. ಒಟ್ಟು 16 ಸದಸ್ಯರ ಬಲ ಇದ್ದು, 9 ಮತ ಪಡೆದವರು ವಿಜಯಶಾಲಿಯಾಗಲಿದ್ದಾರೆ. ಆದರೆ, ಬಳ್ಳಾರಿ ಜಿಲ್ಲೆಯ (ವಿಜಯನಗರ ಸೇರಿ) ನಾಲ್ವರು ನಿರ್ದೇಶಕರಿದ್ದರೆ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ತಲಾ ನಾಲ್ವರು ಸದಸ್ಯರಿದ್ದಾರೆ. ಈಗಿರುವ ಮಾಹಿತಿಯ ಪ್ರಕಾರ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಏಳು ನಿರ್ದೇಶಕರು ಒಗ್ಗಟ್ಟಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಸರ್ಕಾರದ ಬೆಂಬಲ ದೊರೆತರೆ ಅಧ್ಯಕ್ಷ ಪಟ್ಟ ಕೊಪ್ಪಳ ಜಿಲ್ಲೆಗೆ ಲಭಿಸಲಿದೆ ಎನ್ನಲಾಗುತ್ತಿದೆ. ಆದರೆ, ಭೀಮಾನಾಯ್ಕ ಸಿಎಂ ಸಿದ್ದರಾಮಯ್ಯ ಅವರ ಬಳಿ ಬಿಗಿಪಟ್ಟು ಹಿಡಿದು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರು ಬೆಂಬಲಿಸಿದ ಪೆನಲ್ ವಿರುದ್ಧ ಇದ್ದವರನ್ನು ಭೀಮ ನಾಯ್ಕ ಚುನಾವಣೆಯಲ್ಲಿ ಬೆಂಬಲಿಸಿರುವುದರಿಂದ ರಾಘವೇಂದ್ರ ಹಿಟ್ನಾಳ ರೊಚ್ಚಿಗೆದ್ದು ಅಖಾಡಕ್ಕೆ ಇಳಿದಿದ್ದಾರೆ. ಈಗ ರಾಬಕೋ ಹಾಲು ಒಕ್ಕೂಟ ಪ್ರವೇಶ ಮಾಡಲು ಪ್ರಯತ್ನಿಸಿದ್ದಾರೆ.

ಹಾಲ ಒಕ್ಕೂಟದಲ್ಲಿ ನಾಮನಿರ್ದೇಶನಗೊಳ್ಳುವ ಸದಸ್ಯರು ಸಹ ಅಧ್ಯಕ್ಷರಾಗುವುದಕ್ಕೆ ಅವಕಾಶ ಇರುವುದರಿಂದ ಈಗಾಗಲೇ ಆಗಿರುವ ನಾಮ ನಿರ್ದೇಶನ ರದ್ದು ಮಾಡಿ, ಶಾಸಕ ರಾಘವೇಂದ್ರ ಹಿಟ್ನಾಳ ನಾಮನಿರ್ದೇಶನಗೊಂಡು, ಅಧ್ಯಕ್ಷ ಸ್ಥಾನಕ್ಕೆ ಫೈಟ್ ಮಾಡುವ ಯತ್ನ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ಈ ಮೂಲಕ ಹಿಟ್ನಾಳ ಕುಟುಂಬ ಹಾಲು ಒಕ್ಕೂಟಕ್ಕೂ ಪ್ರವೇಶ ಪಡೆಯುವ ತಯಾರಿ ನಡೆಸಿದೆ ಎನ್ನುವ ಚರ್ಚೆಯಾಗುತ್ತಿದೆ.

ಸಿಎಂ ಅಂಗಳದಲ್ಲಿ ಚೆಂಡು:

ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿಯಲ್ಲಿ ಈ ಕುರಿತು ಗುರುವಾರ ಎರಡು ಸಭೆ ನಡೆದಿವೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಬೆಂಬಲಿಸಿ ಒಂದು ಗುಂಪು ಹಾಗೂ ಭೀಮಾನಾಯ್ಕ ನೇತೃತ್ವದಲ್ಲಿ ಮತ್ತೊಂದು ಗುಂಪು ಭಾಗಿಯಾಗಿದೆ. ಆದರೆ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಭಯ್ಯಾಪುರ ಅವರು ಮಾತ್ರ ಈ ಬೆಳವಣಿಗೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕುದುರೆ ವ್ಯಾಪಾರ:

ರಾಬಕೋ ಅಧ್ಯಕ್ಷರಾಗಲು ರಾಜಕೀಯವಾಗಿ ನಡೆಯುತ್ತಿರುವ ಪ್ರಯತ್ನದ ಜತೆಗೆ ತೆರೆಮರೆಯಲ್ಲಿ ನಿರ್ದೇಶಕರ ಕುದುರೆ ವ್ಯಾಪಾರಕ್ಕೂ ಯತ್ನ ನಡೆದಿದೆ. ಕೆಎಂಎಫ್ ಚುನಾವಣೆಯಲ್ಲಿ ಭಾಗವಹಿಸಲು ಪ್ರತಿನಿಧಿ ಕಳುಹಿಸಬೇಕಾಗಿರುವುದರಿಂದ ಅದಕ್ಕೂ ಸಹ ದೊಡ್ಡ ಹೈಡ್ರಾಮಾವೇ ನಡೆಯುತ್ತಿದೆ ಎಂದು ತಿಳಿದು ಬಂದಿದೆ.