ಸಾರಾಂಶ
ವಿಶೇಷ ವರದಿ ಕನ್ನಡಪ್ರಭ ವಾರ್ತೆ
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಬಂದೇ ಬಿಡುತ್ತದೆ. ಅದಕ್ಕೆ ತಾಲೀಮು ಎಂಬಂತೆ ಸ್ಥಳೀಯ ಸಂಸ್ಥೆಯ ಅಧಿಕಾರ ಯಾವ ಪಕ್ಷದ ಬಳಿ ಇರುತ್ತದೆಯೇ ಅವರಿಗೆ ಚುನಾವಣೆಯಲ್ಲಿ ಮತಗಳಿಕೆ ಸುಲಭ ಎಂಬ ಲೆಕ್ಕಾಚಾರ ಇದೆ. ಈಗ ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಆಗಿರುವುದು ಕೂಡ ಇದೆ ಲೆಕ್ಕಾಚಾರ.ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಆಸಕ್ತಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿದೆ. ಆದರೆ, ಈಗ ಕಾಂಗ್ರೆಸ್ ವಲಯದಲ್ಲಿ ಮೇಯರ್ ಸ್ಥಾನ ಪಡೆಯಲು ಹೆಚ್ಚು ಕ್ರಿಯಾಶೀಲತೆ ಕಂಡುಬರುತ್ತಿದೆ. ಹಾಗೆ ನೋಡಿದರೆ ಮಹಾನಗರ ಪಾಲಿಕೆಯ ಒಟ್ಟು ಸ್ಥಾನಗಳ ಪೈಕಿ ಬಿಜೆಪಿಯೇ ಹೆಚ್ಚು ಸದಸ್ಯರನ್ನು ಹೊಂದಿದೆ. ಅಧಿಕಾರದ ಹೊಸ್ತಿಲಿನಲ್ಲಿಯೇ ಇದೆ. ಸ್ವಲ್ಪ ಶ್ರಮ ಹಾಕಬೇಕು. ಆದರೆ ಆ ಶ್ರಮ ಹಾಕುವವರು ಯಾರು ಎಂಬ ನಿರ್ಣಯವೇ ಈಗ ನಿರ್ಣಾಯಕವಾಗಿ ನಿಂತಿದೆ.
ಕಾಂಗ್ರೆಸ್‌ನತ್ತ ಎಲ್ಲರ ಚಿತ್ತ:ಅಧಿಕಾರದ ಗದ್ದುಗೆ ಏರಲು ಬಿಜೆಪಿಗಿಂತ ಕಾಂಗ್ರೆಸ್ ಹೆಚ್ಚು ಆಸಕ್ತಿ ವಹಿಸಿದೆ. ಇದಕ್ಕಾಗಿ ತೆರೆಮರೆಯ ತಂತ್ರವನ್ನು ಕೂಡ ಹೆಣೆಯುತ್ತಿದ್ದು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರೊಂದಿಗೆ ಕಾಂಗ್ರೆಸ್, ಎಐಎಂಐಎಂ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ವಿಜಯಪುರ ಜಿಲ್ಲೆಯ ಬಿಜೆಪಿಯಲ್ಲಿನ ಆಂತರಿಕ ತಿಕ್ಕಾಟಗಳು ಕೂಡ ಕಾಂಗ್ರೆಸ್‌ಗೆ ಹೆಚ್ಚು ವರವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಹೇಗಿದೆ ಲೆಕ್ಕಾಚಾರ:ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ 14 ತಿಂಗಳ ನಂತರ ಈಗ ಚುನಾವಣೆ ನಡೆಸುವಂತೆ ಕೋರ್ಟ್ ಹೇಳಿದೆ. ಹೀಗಾಗಿ ಇದುವರೆಗೆ ವಾರ್ಡ್ ಸದಸ್ಯರಾಗಿ ಆಯ್ಕೆಯಾಗಿದ್ದರೂ ಅಧಿಕಾರ ಅನುಭವಿಸುವ ಯೋಗ ಸದಸ್ಯರಿಗೆ ಕೂಡಿಬಂದಿರಲಿಲ್ಲ. ಆದರೆ, ಈಗ ಈ ಸುಯೋಗ ಬಂದಿದ್ದು ಜ.9ರಂದು ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.
ವಿಜಯಪುರ ಮಹಾನಗರ ಪಾಲಿಕೆಗೆ ಒಟ್ಟು 35 ಸದಸ್ಯರ ಬಲವಿದೆ. ಈ ಪೈಕಿ 17 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಆದರೆ, ಇತ್ತೀಚೆಗೆ ಬಿಜೆಪಿ ಸದಸ್ಯ ವಿಜಯಕುಮಾರ ಬಿರಾದಾರ ಅವರು ನಿಧನರಾಗಿದ್ದರಿಂದ ಬಿಜೆಪಿ 16 ಸ್ಥಾನಗಳಿಗೆ ಕುಸಿದಿದೆ. ಅದರಂತೆ ಕಾಂಗ್ರೆಸ್ 10, ಜೆಡಿಎಸ್ 1, ಎಐಎಂಐಎಂ 2 ಮತ್ತು ಪಕ್ಷೇತರರು ಒಟ್ಟು 5 ಜನ ಸದಸ್ಯರು ಇದ್ದಾರೆ. ಮೇಯರ್ ಮತ್ತು ಉಪಮೇಯರ್ ಆಗಲು ಬೇಕಿರುವುದು 19 ಸದಸ್ಯರ ಬೆಂಬಲ.ಎರಡೂ ಪಕ್ಷಗಳಿಗಿದೆ ಅವಕಾಶ:
ವಿಜಯಪುರ ನಗರಕ್ಕೆ ಸೀಮಿತವಾಗಿ ಈ ಚುನಾವಣೆ ನಡೆಯುತ್ತಿರುವುದರಿಂದ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಕ್ಷೇತ್ರಕ್ಕೆ ಬರುತ್ತದೆ. ಸದ್ಯ ಯತ್ನಾಳ ಅವರ ಬಹುತೇಕ ಬೆಂಬಲಿಗರೇ ಮಹಾನಗರ ಪಾಲಿಕೆ ಸದಸ್ಯರಾಗಿದ್ದಾರೆ. ಹೀಗಾಗಿ ಶಾಸಕ ಯತ್ನಾಳ ಅವರು ಚುನಾವಣೆ ಅಖಾಡಕ್ಕೆ ಇಳಿದರೆ ಮಾತ್ರ ಬಿಜೆಪಿಗೂ ಇದು ವರವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 16 ಬಿಜೆಪಿ ಸದಸ್ಯರು, ಒಬ್ಬ ಶಾಸಕ, ಒಬ್ಬ ಸಂಸದ, ಹಾಗೂ ಜೆಡಿಎಸ್‌ನ ಒಬ್ಬ ಶಾಸಕ, ಒಬ್ಬ ನಗರ ಪಾಲಿಕೆ ಸದಸ್ಯ ಸೇರಿದಂತೆ ಒಟ್ಟು 20 ಸಂಖ್ಯಾಬಲವಾಗಲಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಇದು ಕೂಡ ಸುಲಭದ ಲೆಕ್ಕಾಚಾರವಾಗಿದೆ.ಆದರೆ, ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಪ್ರಾಬಲ್ಯ ಕೂಡ ಸಾಧ್ಯತೆ ಇದೆ ಎನ್ನಲಾಗಿದೆ. ಮಾತ್ರವಲ್ಲ, ಬಿಜೆಪಿಯ ಲೆಕ್ಕಾಚಾರವನ್ನು ಕಾಂಗ್ರೆಸ್‌ನ ಇವರ ತಲೆಕೆಳಗೂ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ನಾವೇ ಅಧಿಕಾರಕ್ಕೆ ಬರುವುದು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಈಗ ಶತಾಯಗತಾಯ ಖಚಿತಪಡಿಸುತ್ತಿದ್ದಾರೆ. ಮಾತ್ರವಲ್ಲ, ಇದಕ್ಕಾಗಿ ತೆರೆಮರೆಯಲ್ಲಿ ರಂಗಪ್ರವೇಶ ಕೂಡ ಮಾಡಿದ್ದಾರೆ.ಲೋಕಸಭಾ ಚುನಾವಣೆಗೆ ಇದು ವೇದಿಕೆ:
ಮುಂಬರಲಿರುವ ಲೋಕಸಭಾ ಚುನಾವಣೆಗೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಕೂಡ ವೇದಿಕೆಯಾಗುವ ಸಾಧ್ಯತೆ ಇದೆ. ಸ್ಥಳೀಯ ಸಂಸ್ಥೆಯಲ್ಲಿಯೇ ಅಧಿಕಾರ ಹಿಡಿದುಕೊಂಡರೆ ಮುಂಬರಲಿರುವ ಚುನಾವಣೆಯನ್ನು ಕೂಡ ಸುಲಭವಾಗಿ ಎದುರಿಸುವ ಲೆಕ್ಕಾಚಾರ ಕೂಡ ಇದರ ಹಿಂದೆ ಅಡಗಿದೆ.ಜ.9ರಂದು ಯಾರು ಮೇಯರ್, ಉಪಮೇಯರ್ ಆಗಲಿದ್ದಾರೆ ಎಂಬುವುದು ನಿಖರವಾಗಿ ತಿಳಿಯಲಿದೆ. ಮಾತ್ರವಲ್ಲ, ಯಾವ ಪಕ್ಷ ಅಧಿಕಾರ ಹಿಡಿಯಲಿದೆ ಎಂಬುವುದರ ಮೇಲೆಯೂ ನಾನಾ ಲೆಕ್ಕಾಚಾರಗಳು ಅಡಗಿವೆ.