ಯಾರಿಗೇ ಒಲಿಯಲಿದೆ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಪಟ್ಟ

| Published : Nov 08 2023, 01:00 AM IST / Updated: Nov 08 2023, 01:01 AM IST

ಸಾರಾಂಶ

ಸಹಕಾರ ಧುರೀಣ ಚೊಕ್ಕಬಸವನಗೌಡರು ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದು, ಹಿರಿತನ ಪರಿಗಣಿಸಿ ಅವಕಾಶ ನೀಡಬೇಕು ಎಂದು ಸರ್ಕಾರ ಮಟ್ಟದಲ್ಲೂ ಲಾಬಿ ನಡೆಸಿದ್ದಾರೆ.

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ನ. 8ರಂದು ನಡೆಯಲಿದ್ದು, ಈ ಬಾರಿ ಯಾರಿಗೆ ಅಧ್ಯಕ್ಷ ಪಟ್ಟ ದೊರೆಯಲಿದೆ ಎಂಬುದು ಭಾರೀ ಕುತೂಹಲಕ್ಕೆಡೆ ಮಾಡಿದೆ.

ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಅವರು ಅಧ್ಯಕ್ಷ ಗಾದಿಯ ಕಣದಲ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಳೆದ 15 ದಿನಗಳ ಹಿಂದಿನಿಂದಲೇ ಬ್ಯಾಂಕ್‌ನ ನಿರ್ದೇಶಕರ ಸಂಪರ್ಕದಲ್ಲಿರುವ ಅವರು, ಈ ಪದವಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಸಹಕಾರ ಧುರೀಣ ಸಿರುಗುಪ್ಪದ ಚೊಕ್ಕಬಸವನಗೌಡರು ಕೂಡ ಈ ಬಾರಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ ಈ ಚುನಾವಣೆ ಈಗ ಕುತೂಹಲಕ್ಕೆಡೆ ಮಾಡಿದೆ.

ಈ ಮಧ್ಯೆ ಕೂಡ್ಲಿಗಿಯ ಕೆ. ತಿಪ್ಪೇಸ್ವಾಮಿ ಮತ್ತು ಹೂವಿನಹಡಗಲಿಯ ಐಗೋಳ್‌ ಚಿದಾನಂದ್‌ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕೆ. ತಿಪ್ಪೇಸ್ವಾಮಿ ಮತ್ತು ಹಿರಿಯ ನಿರ್ದೇಶಕ ಐಗೋಳ್‌ ಚಿದಾನಂದ್‌ ಕೂಡ ರೇಸ್‌ನಲ್ಲಿದ್ದಾರೆ. ಇವರಿಬ್ಬರು ಕೂಡ ತಮ್ಮದೇ ಆದ ಲೆಕ್ಕಾಚಾರದೊಂದಿಗೆ ಲಾಬಿ ನಡೆಸುತ್ತಿದ್ದಾರೆ. ಬಿಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರೇ ಅಧ್ಯಕ್ಷ ಗಾದಿ ಅಲಂಕರಿಸಿದರೆ, ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಯಲ್ಲಿ ಪಕ್ಷದ ವರ್ಚಸ್ಸು ಹೆಚ್ಚಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ವಲಯದಲ್ಲಿದೆ. ಹಾಗಾಗಿ ಈ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುವವರಿಗೆ ಬೆಂಬಲ ನೀಡಲು ತೆರೆಮರೆಯ ಕಸರತ್ತು ಕೂಡ ನಡೆದಿದೆ.

ಅಧ್ಯಕ್ಷ ಗಾದಿ ಮೇಲೆ ಲತಾ ಕಣ್ಣು:

ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರ ಕಾಲದಿಂದಲೂ ಬಿಡಿಸಿಸಿ ಬ್ಯಾಂಕ್‌ ಮೇಲೆ ಎಂಪಿಪಿ ಕುಟುಂಬದ ಹಿಡಿತ ಇದೆ. ಮಾಜಿ ಶಾಸಕ ದಿ. ಎಂ.ಪಿ. ರವೀಂದ್ರ ಅವರು ಕೂಡ ಬ್ಯಾಂಕ್‌ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅದೇ ಹಾದಿಯಲ್ಲಿ ಈಗ ಇತರ ಸಹಕಾರ ಸಂಘಗಳ ಕ್ಷೇತ್ರದಿಂದ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಅವರು ಭರ್ಜರಿ ಗೆಲುವು ಸಾಧಿಸಿದ್ದರು. ಗೆದ್ದ ಮಾರನೇ ದಿನದಿಂದಲೇ ಅಧ್ಯಕ್ಷ ಹುದ್ದೆಗಾಗಿ ಅವರು ಲಾಬಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಯೂ ಈ ಬಗ್ಗೆ ಚರ್ಚಿಸಿದ್ದಾರೆ. ಈಗ ಸರ್ಕಾರದ ನಡೆಯ ಮೇಲೂ ಈ ಚುನಾವಣೆ ಗಮನ ಸೆಳೆದಿದೆ.

ಸಹಕಾರ ಧುರೀಣ ಚೊಕ್ಕಬಸವನಗೌಡರು ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದು, ಹಿರಿತನ ಪರಿಗಣಿಸಿ ಅವಕಾಶ ನೀಡಬೇಕು ಎಂದು ಸರ್ಕಾರ ಮಟ್ಟದಲ್ಲೂ ಲಾಬಿ ನಡೆಸಿದ್ದಾರೆ. ಹಾಗಾಗಿ ಈ ಚುನಾವಣೆ ಈಗ ಮತ್ತಷ್ಟು ಜಟಿಲವಾಗಿದೆ. ಈ ನಡುವೆ ಕೆ. ತಿಪ್ಪೇಸ್ವಾಮಿ ಮತ್ತು ಐಗೋಳ್‌ ಚಿದಾನಂದ್‌ ಕೂಡ ತಮ್ಮದೇ ಮಾರ್ಗದಲ್ಲಿ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಮಾಜಿ ಸಚಿವ ಆನಂದ ಸಿಂಗ್‌ರ ಅಳಿಯ ಸಂದೀಪ್‌ ಸಿಂಗ್ ಮತ್ತು ಸಂಸದ ವೈ. ದೇವೇಂದ್ರಪ್ಪರ ಪುತ್ರ ವೈ. ಅಣ್ಣಪ್ಪ ಕೂಡ ಕೊನೇ ಗಳಿಗೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಬಹುದು ಎಂಬ ಲೆಕ್ಕಾಚಾರವೂ ಮೊಳೆತಿದೆ.

ಮತಗಳು 17 ಆಗಬಹುದು?:

ಈಗ ಬ್ಯಾಂಕ್‌ನ 14 ಚುನಾಯಿತ ನಿರ್ದೇಶಕರು, ಸಹಕಾರ ಇಲಾಖೆಯ ಉಪನಿಬಂಧಕರು ಮತ್ತು ಅಪೆಕ್ಸ್‌ ಬ್ಯಾಂಕ್‌ ನಾಮನಿರ್ದೇಶಿತ ಸದಸ್ಯರೊಬ್ಬರು ಕೂಡ ಚುನಾವಣೆಯಲ್ಲಿ ಮತದಾನ ಮಾಡಬಹುದು. ಇದರೊಂದಿಗೆ 16 ಜನ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಈಗ ಸರ್ಕಾರ ಇನ್ನೊಬ್ಬರನ್ನು ನಾಮನಿರ್ದೇಶನ ಮಾಡುವ ಸಾಧ್ಯತೆ ಇದೆ. ಇದು ಸರ್ಕಾರದ ಕೊನೆ ಗಳಿಗೆಯಲ್ಲಿ ಈ ನಡೆ ಅನುಸರಿಸುವ ಸಾಧ್ಯತೆ ಇದೆ. ಹಾಗಾಗಿ ಒಟ್ಟು 17 ಜನ ಮತ ಚಲಾಯಿಸಲು ಹಕ್ಕು ಪಡೆಯಲಿದ್ದಾರೆ. ಆಗ ಲೆಕ್ಕಾಚಾರವೆಲ್ಲ ಉಲ್ಟಾ ಆಗುವ ಸಾಧ್ಯತೆ ಇದೆ ಎಂದು ಹೆಸರು ಹೇಳಲಿಚ್ಛಿಸದ ನಿರ್ದೇಶಕರೊಬ್ಬರು ತಿಳಿಸಿದರು.

ಮತದಾನ ಪ್ರಕ್ರಿಯೆ ಹೇಗೆ?:

ನ. 8ರಂದು ಬೆಳಗ್ಗೆ 10ರಿಂದ 12ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮಧ್ಯಾಹ್ನ 2 ಗಂಟೆಗೆ ಸಭೆ ನಡೆಯಲಿದೆ. 2.30ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಇರುತ್ತದೆ. ಬಳಿಕ ನಿರ್ದೇಶಕರು ಗೌಪ್ಯವಾಗಿ ತಮ್ಮ ಮತಗಳನ್ನು ಚಲಾಯಿಸಲಿದ್ದಾರೆ. ತಹಸೀಲ್ದಾರ್‌ ವಿಶ್ವಜಿತ್‌ ಮೆಹ್ತಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸೇವೆಗೆ ಸಿದ್ಧ: ಸಹಕಾರ ರಂಗಕ್ಕೂ ನಮ್ಮ ಕುಟುಂಬಕ್ಕೂ ಮೊದಲಿನಿಂದಲೂ ನಂಟಿದೆ. ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಹುದ್ದೆ ಆಕಾಂಕ್ಷಿಯಾಗಿರುವೆ. ನನ್ನ ಸಹೋದರ ದಿ. ಎಂ.ಪಿ. ರವೀಂದ್ರರಂತೆ ಸಹಕಾರ ರಂಗದಲ್ಲಿ ಸೇವೆ ಮಾಡುವ ಆಶಯ ಇದೆ ಎನ್ನುತ್ತಾರೆ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ.

ಕಾದು ನೋಡೋಣ: ನಾನು ಸದ್ಯ ಅಧ್ಯಕ್ಷ ಗಾದಿಯ ಆಕಾಂಕ್ಷಿಯಲ್ಲ. ಆದರೆ, ನನ್ನ ಹೆಸರು ಕೇಳಿ ಬರುತ್ತಿದೆ ಎಂದು ಹೇಳುತ್ತೀರಿ, ಅದನ್ನು ಅಲ್ಲಗಳೆಯಲು ಕೂಡ ಆಗುವುದಿಲ್ಲ. ಕಾದು ನೋಡೋಣ ಎಂದು ಬಿಡಿಸಿಸಿ ಬ್ಯಾಂಕ್‌ನ ಹಿರಿಯ ನಿರ್ದೇಶಕ ಐಗೋಳ್ ಚಿದಾನಂದ್‌.