ಯಾರಿಗೆ ಲೋಕಸಮರ ಗೆಲುವು?

| Published : May 15 2024, 01:34 AM IST

ಸಾರಾಂಶ

ಕರಾವಳಿಯಲ್ಲಿ ಯಾರಿಗೆ ಲೀಡ್, ಘಟ್ಟದ ಮೇಲೆ ಯಾರಿಗೆ ಬಂಪರ್, ಇನ್ನು ಕಿತ್ತೂರು ಖಾನಾಪುರದಲ್ಲಿ ಯಾರ ಹವಾ ಹೀಗೆಲ್ಲ ಬಿಟ್ಟೂ ಬಿಡದೆ ಚರ್ಚೆಯಾಗುತ್ತಿದೆ.

ಕಾರವಾರ: ಹೋಯ್ ಯಾರ್ ಬರುರಾ? ಹೇಳುಕಾಗುದಿಲ್ವಾ, ಫಿಫ್ಟಿ ಫಿಫ್ಟಿ ಅಂತರೆ. ಇಲ್ಲಾ ಮೋದಿ ನೋಡಿ ವೋಟ್ ಹಾಕರೆ ಕಾಣ್ತದ್ಯ. ಹಂಗರೆ ಗ್ಯಾರಂಟಿ ನೋಡೂ ಹಾಕಿರುಕೆ ಸಾಕು. ಹೌದು. ಸದ್ಯಕ್ಕಂತೂ ಯಾರೇ ಎದುರಾಗಲಿ. ಇದೇ ಮಾತುಕತೆ. ಕೊನೆಗೂ ಗೆಲುವು ಸೋಲಿನ ಲೆಕ್ಕಾಚಾರ ಬಗೆಹರಿಯುತ್ತಿಲ್ಲ.

ಮತದಾನವೇನೋ ಈ ಬಾರಿ ದಾಖಲೆ ಪ್ರಮಾಣದಲ್ಲಿ ಆಗಿದೆ. ಗ್ಯಾರಂಟಿ ನೋಡಿ ಹೆಚ್ಚು ಜನರು ವೋಟ್ ಹಾಕಿದ್ದಾರೆ ಎಂದು ಕಾಂಗ್ರೆಸ್ಸಿನವರು ಲೆಕ್ಕ ಹಾಕುತ್ತಿದ್ದರೆ, ಮೋದಿಯ ಮೋಡಿಯಿಂದಾಗಿಯೇ ಇಷ್ಟೊಂದು ಜನರು ವೋಟ್ ಮಾಡಿದ್ದಾರೆ ಎನ್ನುವುದು ಬಿಜೆಪಿ ಮುಖಂಡರ ವಾದ.

ಕರಾವಳಿಯಲ್ಲಿ ಯಾರಿಗೆ ಲೀಡ್, ಘಟ್ಟದ ಮೇಲೆ ಯಾರಿಗೆ ಬಂಪರ್, ಇನ್ನು ಕಿತ್ತೂರು ಖಾನಾಪುರದಲ್ಲಿ ಯಾರ ಹವಾ ಹೀಗೆಲ್ಲ ಬಿಟ್ಟೂ ಬಿಡದೆ ಚರ್ಚೆಯಾಗುತ್ತಿದೆ.

ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಬೆಂಬಲಿಗರೊಂದಿಗೆ ಬೈಠಕ್ ನಡೆಸಿ ಎಲ್ಲ ಲೆಕ್ಕಾಚಾರ ಹಾಕಿ ಗೆಲುವು ತಮ್ಮದೆ ಎಂದು ಬೀಗುತ್ತಿದ್ದಾರೆ. ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್ ತಮ್ಮವರೊಂದಿಗೆ ಮೀಟಿಂಗ್ ನಡೆಸಿ ತಮ್ಮ ಗೆಲುವು ಪಕ್ಕಾ ಎಂದು ಹೇಳುತ್ತಿದ್ದಾರೆ. ಕಣದಲ್ಲಿರುವ ಇತರ 11 ಅಭ್ಯರ್ಥಿಗಳು ಮಾತ್ರ ಸೋಲು- ಗೆಲುವಿನ ಬಗ್ಗೆ ಏನನ್ನೂ ಹೇಳುತ್ತಿಲ್ಲ.

ಫಲಿತಾಂಶಕ್ಕೆ ಇನ್ನೂ ಸುಮಾರು 20 ದಿನಗಳು ಕಾಯಬೇಕು. ಜೂ. 4ರ ತನಕ ಹೇಗೆ ಕಾಯಬೇಕೆಂದು ಅಭ್ಯರ್ಥಿಗಳಲ್ಲಿ ಚಡಪಡಿಕೆ ಉಂಟಾಗಿದೆ. ಸತತ ಎರಡು ತಿಂಗಳ ಕಾಲ ದುಡಿದ ಕಾರ್ಯಕರ್ತರುಗಳೂ ಫಲಿತಾಂಶಕ್ಕಾಗಿ ತುದಿಗಾಲಿನ ಮೇಲೆ ನಿಂತಿದ್ದಾರೆ.

ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿ 12.56 ಲಕ್ಷ ಮತಗಳ ಚಲಾವಣೆಯಾಗಿದೆ. ಶೇ. 76.53ರಷ್ಟು ಮತದಾನವಾಗಿದೆ. ಕ್ಷೇತ್ರದ ಇತಿಹಾಸದಲ್ಲೇ ಅತಿಹೆಚ್ಚು ಮತದಾನವಾಗಿರುವುದರಿಂದ ಉಭಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಯಾರೇ ಗೆದ್ದರೂ ಈ ಹಿಂದಿನಂತೆ ಭಾರೀ ಲೀಡ್ ದೊರೆಯುವ ಸಾಧ್ಯತೆ ಕಡಿಮೆ. ಏನಿಲ್ಲವೆಂದರೂ 50ರಿಂದ 1 ಲಕ್ಷ ಲೀಡ್ ಒಳಗಡೆ ಗೆಲುವು ಸಾಧಿಸಬಹುದು ಎನ್ನುವುದು ಹಲವರ ಲೆಕ್ಕಾಚಾರ. 2019ರ ಚುನಾವಣೆಯಲ್ಲಿ ಬಿಜೆಪಿಯ ಅನಂತಕುಮಾರ ಹೆಗಡೆ 4.79 ಲಕ್ಷ ಮತಗಳ ಅಂತರದಿಂದ ಭಾರಿ ಗೆಲುವು ಸಾಧಿಸಿದ್ದರು.

ಹಲವು ಲೆಕ್ಕಾಚಾರಗಳ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು, ಮುಖಂಡರು ಈಗ ಕುತೂಹಲದಿಂದ ವಿಜಯಲಕ್ಷ್ಮಿಗಾಗಿ ಕಾದಿದ್ದಾರೆ.