ಸಾರಾಂಶ
ಕೊಪ್ಪಳ: ಅಕ್ರಮ ಮರಳು ದಂಧೆಯ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಎತ್ತಂಗಡಿ ಮಾಡುವಂತೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪತ್ರ ಬರೆದ ಬೆನ್ನಲ್ಲೆ ಅದಕ್ಕೆ ವಿರುದ್ಧವಾಗಿ 20 ಪ್ರಶ್ನೆ ಮಾಡಿದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಇದು ಯಾರದು ?
ಇಂಥದೊಂದು ಪ್ರಶ್ನೆ ಜಿಲ್ಲೆಯ ಜನತೆಯನ್ನು ಕಾಡುತ್ತಿದೆ.ಇದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೇ ಬರೆದಿರುವ ಪತ್ರ ಎನ್ನುವ ಅರ್ಥದಲ್ಲಿದ್ದ ಪತ್ರದ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲಿಖಿತ ಸ್ಪಷ್ಟನೆ ನೀಡಿದೆ. ಅಷ್ಟೇ ಅಲ್ಲ, ಪತ್ರಕ್ಕೂ ನಮಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾದರೆ ರಾಯರಡ್ಡಿ ಅವರ ಪತ್ರಕ್ಕೆ ಪ್ರತಿಯಾಗಿ ಪತ್ರ ಬರೆದವರು ಯಾರು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಹೌದು, ಸರ್ಕಾರಿ ನೌಕರರ ವಲಯದಲ್ಲಿ ಭಾರಿ ಸದ್ದು ಮಾಡಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪತ್ರಕ್ಕೆ ಪ್ರತಿಯಾಗಿ ಬರೆದಿರುವ ಪತ್ರದಲ್ಲಿ ಇಲಾಖೆಯ ಅಧಿಕಾರಿಗಳ ವಿವರಣೆ ಇಲ್ಲದೆಯೇ ಪತ್ರ ಬರೆಯಲು ಸಾಧ್ಯವೇ ಇಲ್ಲ. ಪ್ರತಿಯೊಂದನ್ನು ಸಹ ಸಮಗ್ರ ಮಾಹಿತಿಯೊಂದಿಗೆ ಕೇಳಲಾಗಿದೆ. ಹೀಗಾಗಿಯೇ ಇದು ಇಲಾಖೆಯ ಅಧಿಕಾರಿಗಳೇ ಬರೆಸಿರುವ ಪತ್ರವಾಗಿದೆ ಎಂದೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಯಿತು. ಇದಕ್ಕಿಂತ ಮಿಗಿಲಾಗಿ ಪೊಲೀಸರ ಕಾರ್ಯವೈಖರಿ ಪ್ರಶ್ನೆ ಮಾಡುತ್ತಲೇ ಅವರ ಕುರಿತು ಪ್ರಸ್ತಾಪ ಮಾಡಿರುವುದು, ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿ ವಿವರ ಹಾಗೂ ಅದಕ್ಕೆ ರಾಜಸ್ವ ಪಾವತಿ ಮಾಡದೆ ಇರುವ ಮತ್ತು ಮಾಡುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಶ್ನೆ ಮಾಡಿರುವ ಮಾಹಿತಿಯನ್ನೊಳಗೊಂಡ ಪ್ರಶ್ನೆ ಕೇಳಲಾಗಿದೆ. ಆದರೆ,ಈಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪತ್ರಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ಉತ್ತರಿಸಿರುವುದು ಇಡೀ ವಿವಾದಕ್ಕೆ ತಿರುವು ನೀಡಿದ್ದು, ಈಗ ಪತ್ರ ಬರೆದವರು ಯಾರು ಎನ್ನುವುದುದು ಮುಖ್ಯಪ್ರಶ್ನೆ.ಬೆನ್ನತ್ತಿದ ಪೊಲೀಸರು:
ಬಸವರಾಜ ರಾಯರಡ್ಡಿ ಪತ್ರಕ್ಕೆ ಪ್ರತಿಯಾಗಿ ಬರೆದಿರುವ ಪತ್ರದ ಮೂಲ ಪೊಲೀಸ್ ಇಲಾಖೆ ಕೆದಕಲು ಶುರು ಮಾಡಿದೆ. ಇದರ ಮೂಲ ಪ್ರತಿ ಎಲ್ಲಿಂದ ಹರಿದಾಡಲು ಶುರುವಾಯಿತು ಎನ್ನುವುದನ್ನು ರಿವರ್ಸ್ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವ ಕಾರ್ಯ ಸದ್ದಿಲ್ಲದೆ ಮಾಡಲಾಗುತ್ತಿದ್ದು, ಇದನ್ನು ಪತ್ತೆ ಮಾಡಿದರೆ ನಿಜವಾಗಿ ಪತ್ರ ಬಂದಿದ್ದು ಎಲ್ಲಿಂದ ಎನ್ನುವುದು ಗೊತ್ತಾಗುತ್ತದೆ.ಕೊಪ್ಪಳ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎಲ್ಲ 10 ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಕುರಿತು ವಿವಿಧ ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡ ವಿಷಯಕ್ಕೆ ಪೂರಕವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವರ್ಗದಿಂದ ಬಂದಿದೆ ಎನ್ನಲಾದ ಸಹಿ ಇಲ್ಲದ ಅನಾಮಧೇಯ ಪತ್ರದ ಕುರಿತಂತೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಕವಲೂರ ಸ್ಪಷ್ಟೀಕರಣ ನೀಡಿದ್ದಾರೆ.
ಅ.18 ರಂದು ಶಾಸಕ ಬಸವರಾಜ ರಾಯರೆಡ್ಡಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯ ಎಲ್ಲ 10 ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಬಗ್ಗೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಬಿತ್ತರಗೊಂಡಿದ್ದು. ಅದಕ್ಕೆ ವಿಮುಖವಾಗಿ ಇಲಾಖೆಯ ಅಧಿಕಾರಿ ವರ್ಗದಿಂದ ಬಂದಿದೆ ಎನ್ನಲಾದ ಹಾಗೂ ಸಹಿ ಇಲ್ಲದ ಅನಾಮಧೇಯ ಮನವಿ ಪತ್ರದಲ್ಲಿ 20 ಅಂಶಗಳ ಕುರಿತು ಪ್ರಶ್ನೆ ನಮೂದಿಸಿದ್ದು, ಈ ಬಗ್ಗೆಯೂ ವಿವಿಧ ಸುದ್ದಿ ಮಾಧ್ಯಮ,ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು.ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಬಂದಿದೆ ಎನ್ನಲಾದ ಹಾಗೂ ಸಹಿ ಇಲ್ಲದ ಅನಾಮಧೇಯ ಮನವಿ ಪತ್ರಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಮತ್ತು ಈ ವಿಷಯ ಜಿಲ್ಲಾ ಕಚೇರಿಯಿಂದ ಹೊರಡಿಸಿರುವುದಿಲ್ಲ ಎಂದು ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
;Resize=(128,128))
;Resize=(128,128))
;Resize=(128,128))