ಮುಂಡಗೋಡ ಪಟ್ಟಣ ಪಂಚಾಯಿತಿ ಯಾರ ಕೈಗೆ?

| Published : Aug 08 2024, 01:43 AM IST

ಸಾರಾಂಶ

ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆಗೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮುಂಡಗೋಡ: ಪಟ್ಟಣ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

೧೯ ಸದಸ್ಯರ ಸಂಖ್ಯಾಬಲ ಹೊಂದಿರುವ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ೧೦ ಸದಸ್ಯರು ಹಾಗೂ ೯ ಜನ ಕಾಂಗ್ರೆಸ್ ಸದಸ್ಯರಾಗಿ ಆಯ್ಕೆಯಾಗಿದ್ದರೂ ಪಕ್ಷಾಂತರ ಪರ್ವ ಹಾಗೂ ಬದಲಾದ ವಿದ್ಯಮಾನಗಳಲ್ಲಿ ಕಾಂಗ್ರೆಸ್‌ನಿಂದ ಇಬ್ಬರು ಬಿಜೆಪಿಗೆ ಹೋಗಿದ್ದರೆ ಬಿಜೆಪಿಯಿಂದ ಇಬ್ಬರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಇದರಿಂದ ಯಾವುದೇ ಪಕ್ಷಕ್ಕೆ ಸದಸ್ಯರ ಸಂಖ್ಯಾಬಲದಲ್ಲಿ ವ್ಯತ್ಯಾಸವಾಗಿಲ್ಲ

ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆಗೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಬಂದಿರುವುದರಿಂದ ಸದ್ಯ ಬಿಜೆಪಿಯಲ್ಲಿ ೬ ಮಹಿಳಾ ಸದಸ್ಯರಿದ್ದು, ಕಾಂಗ್ರೆಸ್‌ನಲ್ಲಿ ೩ ಮಹಿಳಾ ಸದಸ್ಯರಿರುವುದರಿಂದ ಎರಡೂ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆಗೇನೂ ಕಡಿಮೆ ಇಲ್ಲ.

ಹಿಂದಿನ ಅವಧಿಯಲ್ಲಿ ಇಬ್ಬರು ಬಿಜೆಪಿ ಸದಸ್ಯೆಯರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಅವರನ್ನು ಹೊರತುಪಡಿಸಿದರೆ ಬಿಜೆಪಿಯ ಇನ್ನುಳಿದ ನಾಲ್ಕು ಜನ ಸದಸ್ಯೆಯರಿಗೆ ಈ ಸಲ ಪಕ್ಷವು ಅವಕಾಶ ನೀಡಬಹುದು ಎನ್ನಲಾಗಿದೆ. ಈ ಸಲವಾದರೂ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್‌ನ ಮೂವರು ಸದಸ್ಯೆಯರ ಪೈಕಿ ಅಲ್ಪಸಂಖ್ಯಾತ ಮಹಿಳೆಯರಿಗೆ ಆದ್ಯತೆ ನೀಡಲು ಕೆಲವು ಕಾಂಗ್ರೆಸ್ ಸದಸ್ಯರು ಒತ್ತಾಯಿಸುತ್ತಿದ್ದಾರೆ. ಈವರೆಗೂ ಪಟ್ಟಣ ಪಂಚಾಯಿತಿಗೆ ಅಲ್ಪಸಂಖ್ಯಾತ ಮಹಿಳೆ ಅಧ್ಯಕ್ಷ ಆಗದಿರುವುದರಿಂದ ಈ ಬಾರಿಯಾದರೂ ಅವಕಾಶ ನೀಡುವಂತೆ ಕೆಲವು ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ.ಮೀಸಲಿಗೆ ಅಸಮಾಧಾನ

ಹಿಂದಿನ ಅವಧಿಗೂ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ಇತ್ತು. ಈಗ ಮತ್ತೆ ಸಾಮಾನ್ಯ ಮಹಿಳೆ ಅಂತ ಮೀಸಲಾತಿ ಪ್ರಕಟವಾಗಿರುವುದರಿಂದ ಕೆಲ ಸದಸ್ಯರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಸಾಮಾನ್ಯ ಬಂದಿದ್ದರೆ ಮಹಿಳೆ ಹಾಗೂ ಪುರುಷರಿಬ್ಬರಿಗೂ ಸ್ಪರ್ಧಿಸಲು ಅವಕಾಶ ಇರುತ್ತಿತ್ತು ಎಂಬ ಅಭಿಪ್ರಾಯ ಹೊಂದಿರುವ ಕೆಲ ಸದಸ್ಯರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಕೂಡ ಇದೆ.