ಮಾಂಜಾದಾರಕ್ಕೆ ಮಹಿಳೆ ಬಲಿಯಾಗುತ್ತಿದ್ದಂತೆ ನಿಷೇಧಿತ ಮಾಂಜಾದಾರ ಮಾರಾಟ ಹಾಗೂ ಬಳಕೆಗೆ ಕಡಿವಾಣ ಹಾಕುವುದು ಯಾರ ಜವಾಬ್ದಾರಿ? ಬರೀ ಪೊಲೀಸ್‌ ಇಲಾಖೆಗಷ್ಟೇ ಸಂಬಂಧವೇ? ಅಥವಾ ಸ್ಥಳೀಯ ಸಂಸ್ಥೆಯ ಜವಾಬ್ದಾರಿಯೂ ಇದೆಯೇ?

ಹುಬ್ಬಳ್ಳಿ:

ಮಾಂಜಾದಾರಕ್ಕೆ ಮಹಿಳೆ ಬಲಿಯಾಗುತ್ತಿದ್ದಂತೆ ನಿಷೇಧಿತ ಮಾಂಜಾದಾರ ಮಾರಾಟ ಹಾಗೂ ಬಳಕೆಗೆ ಕಡಿವಾಣ ಹಾಕುವುದು ಯಾರ ಜವಾಬ್ದಾರಿ? ಬರೀ ಪೊಲೀಸ್‌ ಇಲಾಖೆಗಷ್ಟೇ ಸಂಬಂಧವೇ? ಅಥವಾ ಸ್ಥಳೀಯ ಸಂಸ್ಥೆಯ ಜವಾಬ್ದಾರಿಯೂ ಇದೆಯೇ?

ಇಂಥ ಪ್ರಶ್ನೆಗಳೀಗ ಹುಬ್ಬಳ್ಳಿ-ಧಾರವಾಡ ಮಹಾನಗರದ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮಾಂಜಾದಾರಕ್ಕೆ ಸಂಬಂಧಪಟ್ಟಂತೆ ಬರೀ ಪೊಲೀಸ್‌ ಆಯುಕ್ತರಷ್ಟೇ ಹೇಳಿಕೆ ನೀಡುವ ಜತೆಗೆ ಕ್ರಮದ ಎಚ್ಚರಿಕೆ ನೀಡುತ್ತಿದ್ದಾರೆ.

ಕಾನೂನು ಏನು ಹೇಳುತ್ತದೆ?

ಗಾಳಿ ಪಟಕ್ಕೆ ಬಳಸುವ ಮಾಂಜಾದಾರದಿಂದ ವರ್ಷದಿಂದ ವರ್ಷಕ್ಕೆ ಆಗುತ್ತಿದ್ದ ಅನಾಹುತಗಳಿಗೆ ಕಡಿವಾಣ ಹಾಕಲೆಂದು 2016ರಲ್ಲಿ ಕರ್ನಾಟಕ ಸರ್ಕಾರ ಕಾಯ್ದೆ ಮಾಡಿ ಸಂಪೂರ್ಣ ನಿಷೇಧಿಸಿತು. ಇದರೊಂದಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವೂ 2017ರಲ್ಲಿ ನೈಲಾನ್‌ ಹಾಗೂ ಕೃತಕ ವಸ್ತು ಹಾಗೂ ಗಾಜಿನ ಪುಡಿ ಲೇಪಿತ ಮಾಂಜಾದಾರಗಳ ಮೇಲೆ ನಿಷೇಧ ಹೇರಿ ಆದೇಶಿಸಿದೆ. ಪಕ್ಷಿ ಹಾಗೂ ಮನುಷ್ಯರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರವೇನೂ ಈ ಕಾಯ್ದೆಯನ್ನು ಘೋಷಿಸಿತು.

ಘೋಷಣೆಗಷ್ಟೇ ಸೀಮಿತ:

ಮಾಂಜಾದಾರ ನಿಷೇಧದ ಕುರಿತಂತೆ ಸರ್ಕಾರ ಘೋಷಿಸಿದೆ ಹೊರತು ಅನುಷ್ಠಾನಗೊಳಿಸಿಲ್ಲ. ಹೀಗಾಗಿ ಗಲ್ಲಿ-ಗಲ್ಲಿಯ ಅಂಗಡಿಗಳಲ್ಲಿ ಯಥೇಚ್ಛವಾಗಿ ಮಾಂಜಾದಾರ ದೊರೆಯುತ್ತಿದೆ. ಸರ್ಕಾರ ಹೇಳಿರುವ ಕಾಯ್ದೆ ಅನುಷ್ಠಾನದ ಜವಾಬ್ದಾರಿ ಅರಣ್ಯ ಇಲಾಖೆ (ಪಕ್ಷಿ, ಪ್ರಾಣಿಗಳ ಜೀವಕ್ಕೆ ಕುತ್ತು ಇರುವುದರಿಂದ ಅರಣ್ಯ ಇಲಾಖೆಯನ್ನು ಸೇರಿಸಲಾಗಿದೆ), ಪೊಲೀಸ್‌ ಇಲಾಖೆ ಹಾಗೂ ಆಯಾ ಸ್ಥಳೀಯ ಸಂಸ್ಥೆಗಳದ್ದು.

ಆದರೆ, ಯಾವ ಇಲಾಖೆಗಳು ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಹುಬ್ಬಳ್ಳಿಯಲ್ಲಿ ಗುರುವಾರ ಮಹಿಳೆ ಬಲಿಯಾಗಿದ್ದರೆ, ಯುವಕನೊಬ್ಬನ ಮೂಗು ಕತ್ತರಿಸಿದೆ. ಬೆಳಗಾವಿಯಲ್ಲಿ ಇದೇ ತಿಂಗಳು ಪರೀಕ್ಷೆ ಮುಗಿಸಿ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದ ವಿದ್ಯಾರ್ಥಿ ಬಲಿಯಾಗಿದ್ದ. ಈ ತರಹದ ಘಟನೆಗಳು ನಡೆದಾಗ ಅಲ್ಲಿನ ಪೊಲೀಸ್‌ ಕಮಿಷನರ್‌ ಆಗಲಿ, ಎಸ್ಪಿ ಆಗಲಿ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ. ಉಳಿದಂತೆ ಸ್ಥಳೀಯ ಸಂಸ್ಥೆ ಹಾಗೂ ಅರಣ್ಯ ಇಲಾಖೆ ಕನಿಷ್ಠ ಪಕ್ಷ ಪರಿಶೀಲಿಸುವ ಗೋಜಿಗೂ ಹೋಗುವುದಿಲ್ಲ.

ಏನು ಮಾಡಬೇಕು?

ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆ, ಪೊಲೀಸ್‌ ಇಲಾಖೆ ಹಾಗೂ ಅರಣ್ಯ ಇಲಾಖೆ ಸಮನ್ವಯ ಸಾಧಿಸಿ ಸಮಿತಿ ರಚಿಸಿ ಜಂಟಿ ಕಾರ್ಯಾಚರಣೆ ನಡೆಸಬೇಕು. ನಿಷೇಧಿತ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಅಂಗಡಿಗಳ ಮೇಲೆ ದಾಳಿ ಮಾಡಿದಂತೆ ಇದು ಕೂಡ ಆಗಬೇಕು. ಗಾಳಿಪಟ ಹಾರಿಸಲೆಂದೇ ದಾರ ತಯಾರಿಸುವ ಉದ್ಯಮಗಳ ಮೇಲೂ ದಾಳಿ ನಡೆಸಿ ಪರಿಶೀಲಿಸಬೇಕು.

ಮನುಷ್ಯರಿಗೆ, ಪಕ್ಷಿಗಳ ಜೀವಕ್ಕೆ ಕುತ್ತು ಆಗದಂತೆ ಗಾಳಿಪಟ ಹಾರಿಸಲು ಯಾವ ದಾರ ಬಳಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಬೇಕು. ರಸ್ತೆ ಅಕ್ಕ-ಪಕ್ಕ ಗಾಳಿ ಪಟ ಹಾರಿಸದಂತೆ ನಿಯಮ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಮೂರು ಇಲಾಖೆಗಳು ಈ ನಿಟ್ಟಿನಲ್ಲಿ ಸಮನ್ವಯ ಸಾಧಿಸಿ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ. ಮಾಂಜಾದಾರವನ್ನು ಸರ್ಕಾರ ನಿಷೇಧಿಸಿದರೂ ಕಾಯ್ದೆಯ ಅನುಷ್ಠಾನವಾಗಿಲ್ಲ. ಸ್ಥಳೀಯ ಸಂಸ್ಥೆ, ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಆದರೆ, ಇಲ್ಲಿ ಅದು ಆಗುತ್ತಿಲ್ಲ. ಹೀಗಾಗಿ ಅಮಾಯಕರು ಜೀವು ತೆರಬೇಕಾಗಿದೆ.

ವಿರೂಪಾಕ್ಷಪ್ಪ ಪಾಟೀಲ, ಪರಿಸರವಾದಿ, ಹುಬ್ಬಳ್ಳಿ