ದಸರಾ ರಜೆಯಲ್ಲೂ ಕ್ರಿಶ್ಚಿಯನ್ ಶಾಲೆಗಳೇಕೆ ಆರಂಭ?

| Published : Sep 24 2025, 01:00 AM IST

ದಸರಾ ರಜೆಯಲ್ಲೂ ಕ್ರಿಶ್ಚಿಯನ್ ಶಾಲೆಗಳೇಕೆ ಆರಂಭ?
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ಹಬ್ಬಕ್ಕೆ ಸರ್ಕಾರವೇ ಶಾಲಾ- ಕಾಲೇಜುಗಳಿಗೆ ಮಧ್ಯಂತರ ರಜೆ ಘೋಷಣೆ ಮಾಡಿದೆ. ಈ ಅವಧಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಶಾಲೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ರಜಾ ಅವಧಿಯಲ್ಲೂ ಶಾಲೆ ನಡೆಸಲು ಹಾಗೂ ಪರೀಕ್ಷೆಗಳನ್ನು ನಡೆಸಲು ಕ್ರಿಶ್ಚಿಯನ್ ಸಮುದಾಯದವರಿಗೆ ಅನುಮತಿ ಕೊಟ್ಟವರಾರು?

ಧಾರವಾಡ:

ದಸರಾ ಹಬ್ಬದ ನಿಮಿತ್ತ ಎಲ್ಲ ಸರ್ಕಾರಿ, ಅನುದಾನಿತ ಸೇರಿದಂತೆ ಎಲ್ಲ ಶಾಲೆಗಳು ಸೆ. 20ರಿಂದ ಅ. 7ರ ವರೆಗೆ ರಜೆ ಘೋಷಿಸಿದ್ದು, ಕ್ರಿಶ್ಚಿಯನ್‌ ಶಾಲೆಗಳು ರಜೆ ಘೋಷಿಸಿದೇ ಶಾಲೆ ನಡೆಸುತ್ತಿವೆ ಎಂದು ಆರೋಪಿಸಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಮಂಗಳವಾರ ಡಿಡಿಪಿಐ ಕಚೇರಿ ಎದುರು ಧರಣಿ ನಡೆಸಿದರು. ಇದಕ್ಕೆ ಮಣಿದ ಡಿಡಿಪಿಐ ಸೆ. 25ರಿಂದ ಕ್ರಿಶ್ಚಿಯನ್‌ ಶಾಲೆಗಳಿಗೂ ಸಹ ರಜೆ ಘೋಷಿಸಲು ಆದೇಶ ಮಾಡುವುದಾಗಿ ತಿಳಿಸಿದರು.

ದಸರಾ ಹಬ್ಬಕ್ಕೆ ಸರ್ಕಾರವೇ ಶಾಲಾ- ಕಾಲೇಜುಗಳಿಗೆ ಮಧ್ಯಂತರ ರಜೆ ಘೋಷಣೆ ಮಾಡಿದೆ. ಈ ಅವಧಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಶಾಲೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ರಜಾ ಅವಧಿಯಲ್ಲೂ ಶಾಲೆ ನಡೆಸಲು ಹಾಗೂ ಪರೀಕ್ಷೆಗಳನ್ನು ನಡೆಸಲು ಕ್ರಿಶ್ಚಿಯನ್ ಸಮುದಾಯದವರಿಗೆ ಅನುಮತಿ ಕೊಟ್ಟವರಾರು? ಎಂದು ಮುತಾಲಿಕ್ ಶಿಕ್ಷಣ ಇಲಾಖೆಗೆ ಪ್ರಶ್ನಿಸಿದರು.

ಧಾರವಾಡದ ಬಾಸೆಲ್ ಮಿಷನ್ ಶಾಲೆ ಸೇರಿದಂತೆ ಕ್ರಿಶ್ಚಿಯನ್‌ ಶಾಲೆಗಳು ತರಗತಿಗಳು ಎಂದಿನಂತೆ ನಡೆಯುತ್ತಿದ್ದು, ಆ ಶಾಲೆಗಳ ಪ್ರಾಚಾರ್ಯರನ್ನು ಸ್ಥಳಕ್ಕೆ ಕರೆಯಿಸಬೇಕು. ಅವುಗಳ ಆಡಳಿತ ಮಂಡಳಿ ಮೇಲೆ ಕ್ರಮವಾಗಬೇಕೆಂದು ಮುತಾಲಿಕ್‌ ಆಗ್ರಹಿಸಿದರು.

ಪ್ರತಿಭಟನೆಗೆ ಮಣಿದ ಡಿಡಿಪಿಐ ಎಸ್‌.ಎಸ್‌. ಕೆಳದಿಮಠ, ದಸರಾ ರಜೆಯಲ್ಲಿ ಕ್ರಿಶ್ಚಿಯನ್ ಶಾಲೆಗಳು ನಡೆಸುತ್ತಿರುವ ಪರೀಕ್ಷೆಗಳನ್ನು ಮುಂದೂಡಿ ಸೆ. 25ರಿಂದ ಕ್ರಿಶ್ಚಿಯನ್‌ ಶಾಲೆಗಳಿಗೂ ಸಹ ರಜೆ ಘೋಷಿಸಲು ಆದೇಶ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಈ ವೇಳೆ ಶ್ರೀರಾಮಸೇನೆ ಮುಖಂಡರಾದ ಅಣ್ಣಪ್ಪ ದೀವಟಗಿ, ಬಸು ದುರ್ಗದ, ಮಂಜುನಾಥ ಕಾಟ್ಕರ್‌, ಮೈಲಾರ ಗುಡ್ಡಪ್ಪನವರ, ಸೋಮು ಕಮತಿ, ಪಾಂಡು ಯಮೋಜಿ, ಆನಂದ, ಮಲ್ಲಿಕಾರ್ಜುನ, ನಿಜಗುಣಿ, ರಾಜಗೋಪಾಲ, ಪೂರ್ಣಿಮಾ ಕಾಡಮ್ಮನವರ ಇದ್ದರು.