ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪ್ರಗತಿ ಪರಿಶೀಲನಾ ಸಭೆಯನ್ನು ನಾನು ಕಾಟಾಚಾರಕ್ಕಾಗಿ ಮಾಡುತ್ತಿಲ್ಲ. ಸಮರ್ಪಕ ಅಂಕಿ-ಅಂಶಗಳನ್ನು ನೀಡದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಶಾಸಕ ಎಚ್.ಟಿ.ಮಂಜು ಎಚ್ಚರಿಕೆ ನೀಡಿದರು.ತಾಲೂಕಿನ ಮೈಸೂರು-ಚನ್ನರಾಯಪಟ್ಟಣ ರಸ್ತೆಯ ಹೊರವಲಯದ ಚಿಕ್ಕೋನಹಳ್ಳಿ ರೇಷ್ಮೆ ಫಾರಂನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಮೂರು ತಿಂಗಳಿಗೊಮ್ಮೆ ಸರ್ಕಾರಿ ಇಲಾಖೆಗಳ ಸಭೆ ನಡೆಸುತ್ತಿದ್ದರೂ ಅಧಿಕಾರಿಗಳು ಎಲ್ಲಾ ಸಮಗ್ರ ಮಾಹಿತಿ, ಸಿದ್ಧತೆಯೊಂದಿಗೆ ಸಭೆಗೆ ಬರುತ್ತಿಲ್ಲ ಏಕೆ ಎಂದರು.ಪಟ್ಟಣದ ಎಪಿಎಂಸಿ ಜಾಗ ಭೂಗಳ್ಳರ ಪಾಲಾಗುತ್ತಿದೆ. ರಿಯಲ್ ಎಸ್ಟೇಟ್ ಕುಳಗಳು ಬೇಲಿ ಹಾಕಿಕೊಂಡಿದ್ದಾರೆ. ರೈತರು ಹೋರಾಟ ಮಾಡುತ್ತಿದ್ದಾರೆ. ಆದರೂ ಕೂಡಾ ಎಪಿಎಂಸಿ, ಕಂದಾಯ ಇಲಾಖೆ ಅಧಿಕಾರಿಗಳು ನಿದ್ರೆ ಮಾಡ್ತಾಯಿದ್ದೀರಾ ಎಂದು ಪ್ರಶ್ನಿಸಿದರು.
ಸರ್ಕಾರಿ ಜಮೀನು ಖಾಸಗಿಯವರ ಹೆಸರಿಗೆ ಖಾತೆಯಾಗಿದೆ. ಪಟ್ಟಣದ ಜಯನಗರ ಬಡಾವಣೆಯ ಸರ್ಕಾರಿ ಪ್ರೌಢಶಾಲೆಗೆ ಸೇರಿದ ಜಮೀನು ಏನಾಗಿದೆ ಎಂಬುದರ ಬಗ್ಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿವರವನ್ನು ಕಲೆ ಹಾಕಿ ನನಗೆ ವರದಿ ನೀಡಬೇಕು. ಅಕ್ರಮ ವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಾಕೀತು ಮಾಡಿದರು.ಪಟ್ಟಣದ ಎಪಿಎಂಸಿ ಕಾಂಪೌಂಡ್‌ನ್ನು ಹೊಡೆದರೂ ಕ್ರಮವಹಿಸದೆ ಭೂಗಳ್ಳರಿಗೆ ಮಣೆ ಹಾಕಲಾಗುತ್ತಿದೆ. ಈ ಹಿಂದೆ ಎಪಿಎಂಸಿಗಾಗಿ ಪುಣ್ಯಾತ್ಮರು ಖಾಸಗಿ ಜಮೀನು ಖರೀದಿ ಮಾಡಿದ್ದಾರೆ. ಆದರೆ, ಜಾಗ ಎಪಿಎಂಸಿಗೆ ಖಾತೆಯಾಗಿಲ್ಲ. ಜಮೀನು ಮಾರಿದವರು ಮರಣ ಹೊಂದಿದ ನಂತರ ಅವರ ಪತ್ನಿ, ಮಕ್ಕಳಿಗೆ ಖಾತೆಯಾಗಿದೆ. ಈಗ ಅವರು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ. ಕ್ರಮಕ್ಕೆ ಆಗ್ರಹಿಸಿ ಎಪಿಎಂಸಿ ಅವರು ಪೊಲೀಸರಿಗೆ ದೂರು ನೀಡಿದರೆ ಬಿ ರಿಪೋರ್ಟ್ ಹಾಕ್ತಿರಾ ಎಂದು ಕಿಡಿಕಾರಿದರು.
ಕಿಕ್ಕೇರಿ ಠಾಣೆ ಪೊಲೀಸ್ ನಿರೀಕ್ಷಕಿ ರೇವತಿ ಅವರಿಗೆ ಫೋನ್ ಕರೆ ಮಾಡಿದರೆ ಠಾಣೆ ಸಿಬ್ಬಂದಿಯನ್ನು ಬಂದೂಕು ಕೊಡಿ ಶಾಸಕರು ಕರೆ ಮಾಡಿದ್ದಾರೆ ಶೂಟ್ ಮಾಡಿಕೊಳ್ಳದಾಗಿ ಬೆದರಿಕೆ ಹಾಕುತ್ತಾರೆ. ಇಂತಹ ಧಮ್ಕಿ ಎಲ್ಲ ನನ್ನ ಬಳಿ ನಡೆಯಲ್ಲ ಎಂದು ಆ ಠಾಣೆ ಎಎಸ್‌ಐ ರಮೇಶ್ ಅವರಿಗೆ ಎಚ್ಚರಿಸಿದರು. ಅವರ ವಿರುದ್ಧ ಗೃಹ ಇಲಾಖೆಗೆ ವರದಿ ನೀಡುವಂತೆ ತಿಳಿಸಿದರು.ಪಟ್ಟಣದ ಬಸ್ ನಿಲ್ದಾಣದ ಮರು ನಿರ್ಮಾಣಕ್ಕೆ 16 ಕೋಟಿ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸಾರಿಗೆ ಇಲಾಖೆ 2 ಕೋಟಿ, ಎಸ್‌ಡಿಆರ್‌ಎಫ್ ವತಿಯಿಂದ ಎರಡು ಕೋಟಿ ರು. ಅನುದಾನ ಸಿಗಲಿದೆ. ಲಭ್ಯತೆ ಅನುದಾನದಿಂದ ನಿಲ್ದಾಣ ಮರು ನಿರ್ಮಿಸುವುದಾಗಿ ಕೆಎಸ್‌ಆರ್‌ಟಿಸಿ ಎಇಇ ಗಣೇಶ್ ತಿಳಿಸಿದರು.
ತಾಲೂಕಿನ ಒಳಕ್ರೀಡಾಂಗಣ ಜಿಮ್ ಮೆಟಿರಿಯಲ್ ದರಪಟ್ಟಿಗಿಂತ ಮೂರುಪಟ್ಟ ಹೆಚ್ಚು ಹಣಕ್ಕೆ ಖರೀದಿಸಿದ್ದಾರೆ. ಇದಕ್ಕೆ ರಾಜ್ಯ ನಿರ್ದೇಶಕರು ಅನುಮೋದನೆ ತಿರಸ್ಕರಿಸಿದರೂ ಮೆಟಿರಿಯಲ್ ಖರೀದಿಸಿ ಹಣ ದುರುಪಯೋಗ ಮಾಡಿರುವುದಾಗಿ ಶಾಸಕರು ಯುವ ಸಬಲೀಕರಣದ ಸಹಾಯಕ ನಿರ್ದೇಶಕ ಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡರು.ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ದಂಧೆ ತಡೆಯದೆ ನೀವೆ ವ್ಯಾಪಾರ ಮಾಡಿಕೊಂಡಿದ್ದೀರಿ. ಇದಕ್ಕೆ ಆಡಿಯೋ, ವೀಡಿಯೋ ಸಮೇತ ಸಾಕ್ಷಿ ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ ಎಂದು ಅಬಕಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ಗದ್ದೆಹೊಸರು ಕೆರೆ ಸರ್ವೆ ಕೆಲಸ ಮುಗಿಸುವಂತೆ ಹಾಗೂ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ 10 ಗುಂಟೆ ಸರಕಾರಿ ನಿವೇಶನವನ್ನು ಗುರುತಿಸುವಂತೆ ಎಡಿಎಲ್‌ಆರ್ ಸಿದ್ಧಯ್ಯರಿಗೆ ಸೂಚನೆ ನೀಡಿದರು. ನಬಾರ್ಡ್‌ಗೆ ಹತ್ತು ಕೋಟಿ ಯೋಜನೆ ಕಾಮಗಾರಿ ನೀಡುವಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಎಪಿಎಂಸಿ ಮತ್ತು ಮೀನುಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು. 7 ಕೋಟಿ ಅಂದಾಜು ವೆಚ್ಚದಲ್ಲಿ ಮಾದರಿ ಶಾಲೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದರು.ಆಲೇನಹಳ್ಳಿ ಡೇರಿ ಕಾರ್ಯದರ್ಶಿ ಐದಾರು ಲಕ್ಷ ಅವ್ಯವಹಾರ ಮಾಡಿರೋದಾಗಿ ತಪ್ಪೊಪ್ಪಿದ್ದಾರೆ. ಅವರಿಂದ ಹಣ ವಸೂಲಿ ಮಾಡುವಂತೆ ಸಹಕಾರ ಅಭಿವೃದ್ಧಿ ಅಧಿಕಾರಿ ಭರತಕುಮಾರ್ ಗೆ ತಿಳಿಸಿದರು.
ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಆಶಾ, ತಾಪಂ ಇಒ ಸುಷ್ಮ, ಗ್ರೇಡ್ 2 ತಹಸೀಲ್ದಾರ್ ಲೋಕೇಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.