‘ಮತದಾರರ ಪಟ್ಟಿ ಶುದ್ಧೀಕರಣವಾಗಬೇಕು ಎಂದು ರಾಹುಲ್ ಗಾಂಧಿ ಅವರೇ ಹಿಂದೆ ಹೇಳಿದ್ದರು. ಈಗ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದಂತೆ ವಿರೋಧಿಸುತ್ತಿದ್ದಾರೆ.
ಹುಬ್ಬಳ್ಳಿ:
ಚುನಾವಣೆಯಲ್ಲಿ ಸತತ ಸೋಲುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಸೋಲಿನ ಹೊಣೆಯನ್ನು ಚುನಾವಣಾ ಆಯೋಗದ ಮೇಲೆ ಹೊರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮತದಾರರ ಪಟ್ಟಿ ಶುದ್ಧೀಕರಣವಾಗಬೇಕು ಎಂದು ರಾಹುಲ್ ಗಾಂಧಿ ಅವರೇ ಹಿಂದೆ ಹೇಳಿದ್ದರು. ಈಗ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದಂತೆ ವಿರೋಧಿಸುತ್ತಿದ್ದಾರೆ. ಇದು ಸೋಲನ್ನು ಬೇರೆಯವರ ಮೇಲೆ ಹೊರಿಸುವ ಷಡ್ಯಂತ್ರ’ ಎಂದು ಕಿಡಿಕಾರಿದರು.
ದೇಶಾದ್ಯಂತ 13 ಕೋಟಿ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಜೋಶಿ, ಈ ಪೈಕಿ ಸುಮಾರು 3 ಕೋಟಿ ಮಂದಿ ಮೃತಪಟ್ಟವರು. ಉಳಿದವರು ಶಾಶ್ವತವಾಗಿ ಸ್ಥಳಾಂತರಗೊಂಡವರು, ಪತ್ತೆಯಾಗದವರು ಅಥವಾ ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವವರು ಎಂದರು.ಮೃತರ ಹೆಸರು ತೆರವು ಅನಿವಾರ್ಯ. ಪತ್ತೆಯಾಗದ ಹಾಗೂ ಸ್ಥಳಾಂತರಗೊಂಡವರನ್ನು ಪತ್ತೆ ಹಚ್ಚಲು ಮನೆ-ಮನೆಗೆ ತೆರಳಿ ಪರಿಶೀಲಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಬಿಎಲ್‌ಒ, ತಹಸೀಲ್ದಾರ್, ಎಸಿ ಹಾಗೂ ಜಿಲ್ಲಾಧಿಕಾರಿಗಳು ಈ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದ್ದಾರೆ ಎಂದು ತಿಳಿಸಿದರು.
ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವ ಮತದಾರರ ಹೆಸರುಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತಿದೆ. ಶಾಶ್ವತವಾಗಿ ಸ್ಥಳಾಂತರಗೊಂಡವರು ಹೊಸ ವಿಳಾಸದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದು ಚುನಾವಣಾ ಆಯೋಗದ ನಿಯಮಾನುಸಾರ ನಡೆಯುತ್ತಿರುವ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದ ಜೋಶಿ, ರಾಜ್ಯದ ಒಬ್ಬ ಬಿಎಲ್‌ಒ ತನ್ನ ಇಚ್ಛೆಯಂತೆ ಯಾರದ್ದೇ ಮತವನ್ನು ತೆಗೆದು ಹಾಕಲು ಸಾಧ್ಯವೇ? ರಾಜ್ಯದ ಅಧಿಕಾರಿಗಳೇ ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಿರುವಾಗ ಆಯೋಗದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಯಾರು ಬೇಕಾದರು ದೇಶದಲ್ಲಿ ಮತದಾರರಾಗಲು ಅವಕಾಶವಿಲ್ಲ. ಈ ರೀತಿ ಬುದ್ಧಿ ಇಲ್ಲದಂತೆ ಮಾತನಾಡುತ್ತಿರುವ ರಾಹುಲ್ ಗಾಂಧಿಯನ್ನು ಅನುಕರಣೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.ಸೋಲಿಗೆ ಕಾರಣ ಹುಡುಕಲಿ:
ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ದೀರ್ಘ ಕಾಲದಿಂದ ಅಧಿಕಾರದಲ್ಲಿಲ್ಲ. ಗುಜರಾತ್‌ನಲ್ಲೂ ದಶಕಗಳಿಂದ ಅಧಿಕಾರ ಕಳೆದುಕೊಂಡಿದೆ. ಪ್ರತಿ ಚುನಾವಣೆಯ ಸೋಲಿಗೂ ಚುನಾವಣಾ ಆಯೋಗವನ್ನು ಹೊಣೆ ಮಾಡುವ ಬದಲು ಕಾಂಗ್ರೆಸ್ ತನ್ನ ಸೋಲಿನ ಕಾರಣ ಹುಡುಕಿಕೊಳ್ಳಲಿ ಎಂದು ಕುಟುಕಿದರು.12ರಂದು ದೆಹಲಿಯಲ್ಲಿ ರೈತರೊಂದಿಗೆ ಸಭೆರೈತರ ಬೇಡಿಕೆಗಳ ಕುರಿತು ಬೆಳಗಾವಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸುವಂತೆ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಎಂ.ಆರ್. ಪಾಟೀಲರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ರೈತರ ಎಲ್ಲ ಸಮಸ್ಯೆಗಳನ್ನು ಒಬ್ಬರೆ ಬಗೆಹರಿಸಲು ಆಗುವುದಿಲ್ಲ. ಬೇರೆ ಬೇರೆ ಇಲಾಖೆಯವರು ಸೇರಿ ನಿರ್ಧಾರ ಕೈಗೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಒಳಗೊಂಡಿರುವುದರಿಂದ ಸಮಸ್ಯೆಗಳಿಗೆ ಸಕಾರಾತ್ಮಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅ.12ರಂದು ದೆಹಲಿಯಲ್ಲಿ ಸಭೆ ಕರೆಯಲಾಗಿದೆ. ರೈತ ಮುಖಂಡರು ಸಭೆಗೆ ಬರುವ ವಿಶ್ವಾಸವಿದೆ ಎಂದು ಜೋಶಿ ತಿಳಿಸಿದರು.