ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪಂಚಪೀಠಗಳು ಹಾಗೂ ಬಸವಣ್ಣವನರ ಅನುಯಾಯಿಗಳು ಸಮೀಪವಾಗುವಾಗ ನಾವು ಪಂಚಮಸಾಲಿಗಳು, ಗಾಣಿಗರು, ರೆಡ್ಡಿಗಳು, ಕುರುಬರು ಎಲ್ಲರೂ ಯಾಕೆ ಒಂದಾಗಬಾರದು. ದೇಶ, ಹಿಂದೂ ಧರ್ಮ, ಮಠ ಮಂದಿರಗಳು, ರೈತರ ಆಸ್ತಿ ಹಾಗೂ ನಮ್ಮತನ ಉಳಿಯಬೇಕಾದರೆ ನಾವೆಲ್ಲಾ ಒಂದಾಗಬೇಕಾದ ಅನಿವಾರ್ಯತೆ ಇದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯ ಪಟ್ಟರು.ಗಾಣಿಗ ಗುರುಪೀಠದ ಪ್ರಥಮ ಜಗದ್ಗುರು ವನಶ್ರೀ ಸಂಸ್ಥಾನ ಮಠದ ಆವರಣದಲ್ಲಿ ಜಿಪಂ ಮುಖ್ಯರಸ್ತೆಯಲ್ಲಿ ನೂತನ ಜಯದೇವ ಜಗದ್ಗುರುಗಳ ವೃತ್ತದಲ್ಲಿನ ಕಂಚಿನ ಮೂರ್ತಿ ಅನಾವರಣ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಗಾಣಿಗ ಸಮಾಜ ಈ ಸಮಾರಂಭಕ್ಕೆ ಎಲ್ಲಾ ಸಮಾಜಗಳ ಪೂಜ್ಯರನ್ನು ಕರೆದು ಎಲ್ಲಾ ಸಮುದಾಯದವರನ್ನು ಪ್ರೀತಿಯಿಂದ ಕಂಡಿದೆ. ವನಶ್ರೀ ಮಠದ ಗುರುಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ತಾನು ₹ 11,01,111 ನೀಡುವುದಾಗಿ ಯತ್ನಾಳ ವಾಗ್ದಾನ ಮಾಡಿದರು.ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಜಯದೇವ ಜಗದ್ಗುರುಗಳು ಸಮಾಜದಿಂದಾಗಲಿ, ಸರ್ಕಾರದಿಂದಾಗಲಿ ಯಾವುದೇ ಅನುದಾನ, ದೇಣಿಗೆ ಪಡೆಯದೇ ತಮ್ಮ ಕಾಯಕದಿಂದಲೇ ಸಮಾಜಕ್ಕೆ ದೊಡ್ಡ ಆಸ್ತಿ ಮಾಡಿಕೊಟ್ಟು ಹೋಗಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಶ್ರೀಮಠದಲ್ಲಿ ಗುರುಭವನ ನಿರ್ಮಾಣಕ್ಕೆ ಸಮಾಜದ ಶ್ರೀಮಂತರು, ಧುರೀಣರು ಮುಂದಾಗಬೇಕು. ಆರಂಭಿಕವಾಗಿ ತಾನು ₹ 21 ಲಕ್ಷ ನೀಡುತ್ತೇನೆ. ಕಡಿಮೆಯಾದರೆ ಮುಂದೆ ಸರ್ಕಾರದ ಮೊರೆ ಹೋಗುವ ಕೆಲಸ ಮಾಡೋಣ ಎಂದರು.ಸಚಿವ ಶಿವಾನಂದ ಪಾಟೀಲ ಮಾತನಾಡಿ, ವನಶ್ರೀ ಸಂಸ್ಥಾನಮಠದಲ್ಲಿ ಅನೇಕ ಧಾರ್ಮಿಕ ಸಭೆಗಳ ಜೊತೆಗೆ ಪೂಜ್ಯ ಸಿದ್ದೇಶ್ವರ ಅಪ್ಪರವರು ಆಗ ಬಿ.ಎಸ್.ಪಾಟೀಲ ಸಾಸನೂರ, ನನ್ನನ್ನು ಹಾಗೂ ಅನೇಕ ರಾಜಕಾರಣಿಗಳನ್ನು ಇಲ್ಲಿ ಕರೆದು ರಾಜಕೀಯ ಮಾರ್ಗದರ್ಶನ ಮಾಡಿದ್ದಾರೆ. ಜಿಲ್ಲೆಯಲ್ಲಿ ಸಾಮರಸ್ಯ ಸೃಷ್ಠಿಸುವಲ್ಲಿ ಜಯದೇವ ಅಪ್ಪರವರ ಆಶೀರ್ವಾದವಿದೆ. ಶ್ರೀಮಠದ ಅಭಿವೃದ್ಧಿ ಕಾರ್ಯಕ್ಕೆ ಸಮಾಜದ ಎಲ್ಲರೂ ತೇರು ಎಳೆಯುವ ಕೆಲಸ ಮಾಡಿ, ಅದನ್ನು ದಡ ಮುಟ್ಟಿಸುವ ಕೆಲಸ ನನ್ನನ್ನು ಸೇರಿ ಎಲ್ಲಾ ಜನಪ್ರತಿನಿಧಿಗಳು ಒಗ್ಗೂಡಿ ಮಾಡುತ್ತೇವೆ ಎಂದು ಭರವಸೆ ನೀಡಿದರು.ನಾಗಠಾಣ ಶಾಸಕ ವಿಠಲ ಕಟಕದೊಂಡ, ಅಖಿಲ ಭಾರತ ಗಾಣಿಗ ಸಮಾಜ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ನಿರ್ದೇಶಕ ಶ್ರೀಕಾಂತ ಶಿರಾಡೋಣ, ಬಿ.ಜಿ.ಪಾಟೀಲ ಹಲಸಂಗಿ ಮಾತನಾಡಿದರು. ಸಂಸದ ಪಿ.ಸಿ.ಗದ್ದಿಗೌಡರ ಅಧ್ಯಕ್ಷೀಯ ಮಾತುಗಳಾಡಿದರು.ವನಶ್ರೀ ಸಂಸ್ಥಾನಮಠದ ಡಾ.ಜಯಬಸವಕುಮಾರ ಮಹಾಸ್ವಾಮೀಜಿ, ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಮಹಾಸ್ವಾಮೀಜಿ, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ್ಯ ಮಹಾಸ್ವಾಮೀಜಿ, ಚಿತ್ತರಗಿ ಗುರುಮಹಾಂತ ಮಹಾಸ್ವಾಮಿಗಳು ಸಾನಿಧ್ಯ ನುಡಿಗಳಾಡಿದರು.
ಈ ವೇಳೆ ಜಯದೇವ ಶಿವಯೋಗೇಶ್ವರ ಟ್ರಸ್ಟ್ ಅಧ್ಯಕ್ಷರಾದ ಜಮಖಂಡಿ ಸಿದ್ದಮುತ್ಯಾ, ರೆಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮೀಜಿ, ಮಕಣಾಪುರದ ಸೋಮೇಶ್ವರ ಸ್ವಾಮೀಜಿ, ಹಿರೇರೂಗಿಯ ಸುಗಲಾದೇವಿ ಮಾತೋಶ್ರೀ, ಕನಕನಾಳದ ಗಿರೀಶಾನಂದ ಮಹಾಸ್ವಾಮೀಜಿ ಸಾನಿಧ್ಯವಹಿಸಿದ್ದರು.ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ಜಿ.ಎಸ್.ನ್ಯಾಮಗೌಡ, ರಮೇಶ ಭೂಸನೂರ, ಮುಖಂಡರಾದ ಅಮರಗುಂಡಪ್ಪ ಮೇಟಿ, ರುದ್ರಗೌಡ ಪಾಟೀಲ, ಎನ್.ಎಸ್.ಲೋಣಿ, ಶರಣಬಸಪ್ಪ ಅರಕೇರಿ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಕುಮಾರ ಗಡಗಿ, ಅಶೋಕ ನ್ಯಾಮಗೌಡ, ಸುನಂದಾ ಕುಮಸಿ, ಸಮಾಜದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಅಶೋಕ ಲಾಗಲೋಟಿ, ಕಲಬುರಗಿ ಜಿಲ್ಲಾಧ್ಯಕ್ಷ ಶರಣು ಬಿಲ್ಲಾಡ ಸೇರಿದಂತೆ ಸಮಾಜದ ಅನೇಕ ಮುಖಂಡರು, ಪ್ರಮುಖರು ಭಾಗಿಯಾಗಿದ್ದರು.
ಚಿತ್ರ: 12BIJ08ಬರಹ: ಜೋಳಿಗೆ ಇಲ್ಲದ ಜಂಗಮ ಜಯದೇವ ಜಗದ್ಗುರುಗಳ ವೃತ್ತ, ಪ್ರಣವ ಮಂಟಪ ಲೋಕಾರ್ಪಣೆ, ಗುರುಭವನದ ಭೂಮಿಪೂಜೆ
ಬಾಕ್ಸ್ಜಯದೇವ ಶ್ರೀಗಳ ಪ್ರಣವ ಮಂಟಪ ಲೋಕಾರ್ಪಣೆಜೋಳಿಗೆ ಇಲ್ಲದ ಜಂಗಮ ಎಂದೇ ಖ್ಯಾತರಾಗಿರುವ ಗಾಣಿಗ ಗುರುಪೀಠದ ಪ್ರಥಮ ಜಗದ್ಗುರು ವನಶ್ರೀ ಸಂಸ್ಥಾನ ಮಠದ ಆವರಣದಲ್ಲಿ ಜಯದೇವ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ, ವೃತ್ತದ ಕಂಚಿನ ಮೂರ್ತಿ ಉದ್ಘಾಟನೆ, ಗುರುಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು.ಜಯದೇವ ಜಗದ್ಗುರುಗಳ ಭಾವಚಿತ್ರದೊಂದಿಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ವನಶ್ರೀ ಸಂಸ್ಥಾನ ಮಠದವರೆಗೂ 1,501 ಕುಂಭ ಹೊತ್ತ ಸುಮಂಗಲೆಯರಿಂದ ವಚನ ಕುಂಭಮೇಳ ಸಕಲ ವಾದ್ಯ ವೈಭವಗಳೊಂದಿಗೆ ನಡೆಯಿತು.ನಂತರ ಶ್ರೀಮಠದ ಆವರಣದಲ್ಲಿ ಪ್ರಣವ ಮಂಟಪವನ್ನು ವಿವಿಧ ಪರಮಪೂಜ್ಯರ ಸಾನಿಧ್ಯದಲ್ಲಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಲೋಕಾರ್ಪಣೆಗೊಳಿಸಿದರು. ನೂತನ ಗುರುಭವನ ಕಟ್ಟಡ ನಿರ್ಮಾಣಕ್ಕೆ ಸಕ್ಕರೆ, ಜವಳಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಜಿಪಂ ಮುಖ್ಯರಸ್ತೆಯಲ್ಲಿ ನೂತನ ಜಯದೇವ ಜಗದ್ಗುರುಗಳ ವೃತ್ತದಲ್ಲಿನ ಕಂಚಿನ ಮೂರ್ತಿಯನ್ನು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅನಾವರಣಗೊಳಿಸಿದರು.