ಕಟ್ಟೋಕೆ ಅನುಮತಿ ಕೊಡುವಾಗ ಏಕೆ ಹೇಳಲಿಲ್ಲ

| Published : Jan 02 2025, 12:33 AM IST

ಸಾರಾಂಶ

ಚಿತ್ರದುರ್ಗ ನಗರದ ಎಸ್‌ಬಿಎಂ ಎದುರಿಗೆ ಸಿಗ್ನಲ್ ದೀಪದ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡ

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಹಳೇ ಕಟ್ಟಡ ಕೆಡವಿ ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸುವ ಸಂಬಂಧ ನೀಲನಕ್ಷೆ ತಯಾರಿಸಿ ಅನುಮತಿಗಾಗಿ ನಗರಸಭೆಗೆ ಅರ್ಜಿ ಸಲ್ಲಿಸಿದಾಗ ಈ ಜಾಗ ನಿಮ್ಮದಲ್ಲ, ರಸ್ತೆ ಅಗಲೀಕರಣವಾದರೆ ತೆರವು ಮಾಡಬೇಕಾಗುತ್ತದೆ ಎಂಬ ಸಂಗತಿಯ ಏಕೆ ಹೇಳಲಿಲ್ಲ. ಮೂರ್ನಾಲ್ಕು ಕೋಟಿ ರು.ವೆಚ್ಚ ಮಾಡಿ ಕಳೆದ ಒಂದು ವರ್ಷದಿಂದ ಕಟ್ಟಡ ನಿರ್ಮಿಸುತ್ತಿದ್ದು ಈಗ ಮುಕ್ತಾಯದ ಹಂತಕ್ಕೆ ಬಂದಾಗ 21 ಮೀಟರ್ ರಸ್ತೆಗೆ ಕಟ್ಟಡ ತೆರವು ಮಾಡ್ತೀವಿ ಅಂದರೆ ಮಾಲೀಕರು ಎಲ್ಲಿ ಹೋಗಬೇಕು.

ಚಿತ್ರದುರ್ಗದ ಪ್ರಮುಖ ಬಿ.ಡಿ ರಸ್ತೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಎರಡು ಕಟ್ಟಡಗಳ ಪರಿಸ್ಥಿತಿ ಬಗ್ಗೆ ನಾಗರಿಕರಿಂದ ಕೇಳಿ ಬರುತ್ತಿರುವ ಅಭಿಪ್ರಾಯಗಳಿವು.

ಎಸ್‌ಬಿಎಂ ಎದುರಿಗೆ ಮೂಲೆಯಲ್ಲಿ ಹೊಸ ಕಟ್ಟಡ ತಲೆ ಎತ್ತಿದೆ. ದರ್ಶನ್ ಬುಕ್ ಸ್ಟಾಲ್ ಅಲ್ಲಿತ್ತು. ಆರು ಮಂದಿ ಮಾಲಿಕತ್ವದ ಭಾರೀ ಕಟ್ಟಡವೊಂದು ಮೇಲೇಳುತ್ತಿದೆ. ಕಟ್ಟಡ ನಿರ್ಮಿಸುವ ಪೂರ್ವದಲ್ಲಿ ನಗರಸಭೆಗೆ ಅನುಮತಿ ಕೊಡುವಂತೆ ನಿವೇಶನದ ಮಾಲೀಕರು ನಗರಸಭಗೆ ಅರ್ಜಿ ಸಲ್ಲಿಸಿದ್ದರು. ಪೌರಸಭೆಯ ಅಧಿನಿಯಮ 1964 ರ ಕಲಂ 187 ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 15 ರ ಅನ್ವಯ ನಗರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಸೆಪ್ಟಂಬರ್,15 2023ರಲ್ಲಿ ಅನುಮತಿ ನೀಡಲಾಗಿದೆ.

ಕಟ್ಟಡದ ಎಡ ಮತ್ತು ಬಲ ಭಾಗದಲ್ಲಿ 2 ಮೀಟರ್, ಹಿಂಭಾಗದಲ್ಲಿ 3.5 ಮೀಟರ್ ಜಾಗ ಬಿಟ್ಟು ಕಟ್ಟಡ ನಿರ್ಮಿಸುವ ನಿಬಂಧನೆ ವಿಧಿಸಲಾಗಿದೆ. ಪೂರ್ವಕ್ಕೆ 9 ಮೀಟರ್ ಅಗಲದ ರಸ್ತೆ, ಪಶ್ಚಿಮಕ್ಕೆ ದುಮ್ಮಿ ಕಾಂಪ್ಲೆಕ್ಸ್, ಉತ್ತರಕ್ಕೆ 27 ಮೀಟರ್ ಅಗಲದ ಬಿ.ಡಿ.ರಸ್ತೆ, ದಕ್ಷಿಣಕ್ಕೆ 14 ಮೀಟರ್ ಅಗಲದ ಲಕ್ಷ್ಮಿ ಬಜಾರ್ ರಸ್ತೆ ಎಂದು ಚಕ್ಕುಬಂದಿ ಹಾಕಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು 2,05,851 ಹಣ ಕಟ್ಟಿಸಿಕೊಳ್ಳಲಾಗಿದೆ. ಈ ಹಣದಲ್ಲಿ ಕಟ್ಟಡ ನಿರ್ಮಾಣ ಶುಲ್ಕ ₹91700, ಸ್ಲಂ ಫೀ ₹400, ಬೆಟರ್ ಮೆಂಟ್ ಪೀ ₹70,800 ರು, ಡೆಬರಿಸ್ ಫೀ ₹30 ಸಾವಿರ, ಒಂದು ಪರ್ಸೆಂಟ್ ಲೇಬರ್ ಶುಲ್ಕ ₹1500 ರು ಹಾಗೂ ಲೇಕ್ ಡೆವಲೆಫ್‌ಮೆಂಟ್ ಫೀ 7875, ಪ್ಲಾನ್ ಕಾಪಿ ₹2000, ನೀರಿನ ಶುಲ್ಕ ₹788, ರಿಂಗ್ ರೋಡ್ ಸೆಸ್ ₹788 ಹಣ ಸೇರಿದೆ.

ಇದೇ ರೀತಿ ದೀಪಕ್ ಬುಕ್ ಹೌಸ್ ಪಕ್ಕದಲ್ಲಿ ಹೊಸ ಕಟ್ಟಡವೊಂದು ನಿರ್ಮಾಣ ಹಂತದಲ್ಲಿದೆ. 21ಮೀಟರ್ ತೆರವಿಗೆ ಮುಂದಾದಲ್ಲಿ ಈ ಕಟ್ಟಡಗಳು ಶೇ.30 ರಷ್ಟು ಮುಕ್ಕಾಗುತ್ತವೆ. ಕಟ್ಟೋಕೆ ಅನುಮತಿ ಕೊಟ್ಟು ನಂತರ ಕೆಡವಲು ಮುಂದಾದರೆ ಹೇಗೆ. ಈ ಕಟ್ಟಡಗಳಿಗೆ ಮೂಲ ದಾಖಲಾತಿ ಕೊಟ್ಟು ಬ್ಯಾಂಕಿನಿಂದ ಸಾಲ ಪಡೆಯಲಾಗಿದೆ. ಬ್ಯಾಂಕ್ ನವರು ಆಸ್ತಿಯ ಪೂರ್ಣ ಪ್ರಮಾಣದ ದಾಖಲೆಗಳ ನೋಡುತ್ತಾರೆ. ಲೀಗಲ್ ಒಪೀನಿಯನ್ ಪಡೆದು ಸಾಲ ನೀಡುತ್ತಾರೆ. ಇಷ್ಟೆಲ್ಲ ಬೆಳವಣಿಗೆ ಆಗುತ್ತವೆ ಎಂಬುದು ನಗರಸಭೆಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸುತ್ತಾರವರು.

ನಗರಸಭೆಯವರು ಡಾಕ್ಯುಮೆಂಟ್ ಮಾಡುವಾಗ ಕಟ್ಟಡ ನಿರ್ಮಾಣದಲ್ಲಿ ರಸ್ತೆ ಒತ್ತುವರಿ ಆಗಿದೆಯೇ ಅಥವಾ ಸ್ವಂತ ನಿವೇಶನದಲ್ಲಿ ಕಟ್ಟಿಕೊಂಡಿದ್ದಾರೆಯೇ ಎಂಬ ಸಂಗತಿ ಬಯಲಿಗೆ ಬರುತ್ತದೆ.