ಸಾರಾಂಶ
ಕಬ್ಬು ಸಾಗಿಸುವ ಟ್ರ್ಯಾಕ್ಟರ್ ವಾಹನಗಳಿಗೆ ಶುಲ್ಕ ಹಾಕಿರುವುದಕ್ಕೆ ರೈತರ ವಿರೋಧ, ತೀವ್ರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ರಾಷ್ಟ್ರೀಯ ಹೆದ್ದಾರಿ-50ರಲ್ಲಿ ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ಹಿಟ್ನಳ್ಳಿ ಗ್ರಾಮದ ಬಳಿರುವ ಟೋಲನಲ್ಲಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಸೇರಿದಂತೆ ರೈತರ ವಾಹನಗಳಿಗೆ ಶುಲ್ಕ ಹಾಕಿರುವುದನ್ನು ವಿರೋಧಿ ರೈತರು ಟೋಲ್ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಮಂಗಳವಾರ ಬೆಳಗ್ಗೆ ಹಿಟ್ನಳ್ಳಿ ಗ್ರಾಮದ ರೈತರು ಟೋಲ್ ಮೂಲಕ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗೆ ಶುಲ್ಕ ಕಟ್ಟುವುದನ್ನು ವಿರೋಧಿಸಿ ಟೋಲ್ ಗೇಟ್ ಬಂದ್ ಮಾಡಿ ಪ್ರತಿಭಟನೆಗೆ ಅಣಿಯಾದರು.
ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗಳನ್ನು ಟೋಲ್ ನಾಕಾ ರಸ್ತೆಗಳಿಗೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ರೈತರು, ರೈತರ ವಾಹನಗಳಿಗೆ ಶುಲ್ಕ ರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಿಂದ ವಿಜಯಪುರ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-50ರ ಮಾರ್ಗದಲ್ಲಿ ವಾಹನಗಳಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು, ಟೋಲ್ ನಾಕಾ ಅಧಿಕಾರಿಗಳು ಹಾಗೂ ರೈತರೊಂದಿಗೆ ಜಂಟಿ ಸಭೆ ನಡೆಸಿ, ಸಮಸ್ಯೆ ಇತ್ಯರ್ಥ ಮಾಡುವ ಭರವಸೆ ನೀಡಿದರು.
ಪೊಲೀಸರು ಮಧ್ಯಸ್ಥಿಕೆ ವಹಿಸಿ ಸಮಾಧಾನಿಸಿದ್ದರಿಂದ ರೈತರು ಪ್ರತಿಭಟನೆ ಹಿಂಪಡೆದು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಘಟನೆ ನಡೆದಿದೆ.