ಸಂವಿಧಾನ ಬದ್ಧವಾಗಿರುವ ಎಸ್‌ಐಆರ್ ಪ್ರಕ್ರಿಯೆಗೆ ಕಾಂಗ್ರೆಸ್ ವಿರೋಧಿಸುತ್ತಿರುವುದು ಏಕೆ ಎಂಬುದಕ್ಕೆ ಮೊದಲು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು.

ಹುಬ್ಬಳ್ಳಿ:

ರಾಜ್ಯದಲ್ಲಿ ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಎಂದಿನಂತೆ ಸಂವಿಧಾನ ಬದ್ಧವಾಗಿ ನಡೆಯುತ್ತಿದೆ. ಮೃತಪಟ್ಟವರ ಹೆಸರು ತೆಗೆದು ಹಾಕಲಾಗುತ್ತಿದೆ. ಅದನ್ನೇ ಕಾಂಗ್ರೆಸ್‌ನವರು ರಾಜಕೀಯ ದಾಳ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ. ಮಾ. ನಾಗರಾಜ ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಂವಿಧಾನ ಬದ್ಧವಾಗಿರುವ ಎಸ್‌ಐಆರ್ ಪ್ರಕ್ರಿಯೆಗೆ ಕಾಂಗ್ರೆಸ್ ವಿರೋಧಿಸುತ್ತಿರುವುದು ಏಕೆ ಎಂಬುದಕ್ಕೆ ಮೊದಲು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ನಾಯಕರಾಗಲೀ ಯಾರೇ ಆಗಲಿ, ದೇಶದ ಕಾನೂನು ಮತ್ತು ಸಂವಿಧಾನ ಗೌರವಿಸಬೇಕೆಂದು ಹೇಳಿದ್ದಾರೆ.

ಸಾಂವಿಧಾನಿಕ ಸಂಸ್ಥೆಯಾದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಪೊಲೀಸರು ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ನ್ಯಾಯ ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿಯಿಂದ ಕೆಲ ಸಮುದಾಯದವರ ಹೆಸರುಗಳನ್ನು ತೆಗೆದು ಹಾಕಲಾಗುತ್ತಿದೆ ಎಂಬ ಆರೋಪ ಶುದ್ದ ಸುಳ್ಳು. 25 ವರ್ಷಕ್ಕೊಮ್ಮೆ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತದೆ. ಅದರಲ್ಲಿ ದಾಖಲೆಗಳ ಆಧಾರದ‌ ಮೇಲೆ ಮೃತಪಟ್ಟವರ ಹೆಸರು ಕೈಬಿಡಲಾಗುತ್ತದೆ. ಹೆಸರು ಕೈತಪ್ಪಿದವರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವನ್ನೂ ನೀಡಲಾಗುತ್ತದೆ. ಹೀಗಿದ್ದರೂ ಇಲ್ಲಸಲ್ಲದ ಆರೋಪಗಳ ಮೂಲಕ ಕಾಂಗ್ರೆಸ್ ಸುಳ್ಳನ್ನೇ ಸತ್ಯ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಇಂತಹ ಯಾವುದೇ ಪ್ರಯತ್ನಗಳು ಕೈಗೂಡುವುದಿಲ್ಲ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಬದ್ಧ ಕೆಲಸಗಳಿಗೆ ಅಡ್ಡಿಪಡಿಸದೇ ಸಹಕಾರ ನೀಡಬೇಕು ಮಾ. ನಾಗರಾಜ ಮನವಿ ಮಾಡಿದ್ದಾರೆ.