ಸಾರಾಂಶ
ಶಿಗ್ಗಾಂವಿ: "ಅಧಿಕಾರ ಇದ್ದಾಗ ಕ್ಷೇತ್ರದ ಬಡ ಜನರಿಗೆ ನೆರವಾಗದ ಬಸವರಾಜ ಬೊಮ್ಮಾಯಿ ಅವರೇ, ಈಗ ಯಾಕೆ ಮತ್ತೆ ಮತ ಕೇಳುತ್ತಿದ್ದೀರಿ " ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಾಪ್ರಹಾರ ನಡೆಸಿದರು.
ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಮೈದಾನದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ. ಇಲ್ಲಿ ಯಾರೂ ಶಾಶ್ವತವಲ್ಲ. ಸೂರ್ಯ ಹುಟ್ಟಿದ ನಂತರ ಮುಳುಗುತ್ತಾನೆ. ಅನೇಕ ಚಕ್ರವರ್ತಿಗಳು ಮೇಲೆ, ಕೆಳಗೆ ಆಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ನಶ್ವರ, ಸಾಧನೆಗಳು ಅಜರಾಮರ. ಮತದಾರನೇ ಈಶ್ವರ ಎಂಬ ಮಾತಿದೆ. ಅದರಂತೆ ಇಡೀ ಸರ್ಕಾರ ನಿಮ್ಮ ಮುಂದೆ ನಿಂತು ಸಾಷ್ಟಾಂಗ ನಮಸ್ಕಾರ ತಿಳಿಸುತ್ತಿದೆ ಎಂದು ಹೇಳಿದರು.೧೩೬ ಶಾಸಕರ ಬಲಿಷ್ಠ ಸರ್ಕಾರವನ್ನು ನೀವು ಆಯ್ಕೆ ಮಾಡಿದ್ದು, ಮುಂದಿನ ಮೂರೂವರೆ ವರ್ಷಗಳ ಕಾಲ ಈ ಸರ್ಕಾರ ಪಠಾಣ್ ಅವರ ಬೆನ್ನಿಗೆ ನಿಂತು ನಿಮ್ಮ ಸೇವೆ ಮಾಡಲಿದೆ. ಈ ಕ್ಷೇತ್ರದ ಜನ ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದ್ದೀರಿ. ಪಕ್ಕದ ಕ್ಷೇತ್ರದಿಂದ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯ, ವೀರೇಂದ್ರ ಪಾಟೀಲ್, ದೇವರಾಜ ಅರಸು, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಮುಂದೆ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ. ಉಳುವವನೆ ಭೂಮಿಯ ಒಡೆಯ, ಆರಾಧನಾ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, ಸ್ತ್ರೀ ಶಕ್ತಿ, ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರಭಾಗ್ಯ, ಅಕ್ಷರ ದಾಸೋಹ ಸೇರಿದಂತೆ ಹತ್ತು ಹಲವು ಯೋಜನೆ ಜಾರಿಗೆ ತರಲಾಗಿದೆ. ಇಂದಿರಾ ಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ, ಪಿಂಚಣಿ ಯೋಜನೆ ತಂದರು. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆಮೂಲಕ ಜನ ಸಾಮಾನ್ಯರ ಬದುಕಿನಲ್ಲಿ ಆರ್ಥಿಕ ಶಕ್ತಿ ತುಂಬಿ ಬದಲಾವಣೆ ತರಲಾಗಿದೆ ಎಂದು ಹೇಳಿದರು.
ಭಾರತ ಜೋಡೋ ಯಾತ್ರೆ ವೇಳೆ ಹಿರಿಯ ವೃದ್ಧೆ ಸೌತೆಕಾಯಿ ತಂದು ರಾಹುಲ್ ಗಾಂಧಿ ಅವರಿಗೆ ಕೊಟ್ಟರು. ಕೊಡುವಾಗ ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೆಕಾಯಿ. ಹೀಗಾಗಿ ನಿಮಗೆ ನೀಡುತ್ತಿದ್ದೇನೆ ಎಂದು ಹೇಳಿ ಆಶೀರ್ವಾದ ಮಾಡಿದರು. ಕಾಂಗ್ರೆಸ್ ಯೋಜನೆಗಳು ಜನರ ಬದುಕಿನಲ್ಲಿ ಹೇಗೆ ಬೆಳಕಾಗಿದೆ ಎಂಬುದಕ್ಕೆ ಸಾಕ್ಷಿ ಎಂದರು.ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಇಂತಹ ಯಾವುದಾದರೂ ಒಂದು ಯೋಜನೆ ನೀಡಿದ್ದಾರಾ? ಇಲ್ಲ. ಈಗ ಅವರು ನಿಮ್ಮನ್ನು ಬಿಟ್ಟು ಪಕ್ಕದ ಕ್ಷೇತ್ರಕ್ಕೆ ಹೋಗಿದ್ದಾರೆ. ಬೊಮ್ಮಾಯಿ ಅವರು ರಾಜಕೀಯ ನಿವೃತ್ತಿ ಪಡೆಯಲಿ ಎಂದು ನಾನು ಹೇಳುವುದಿಲ್ಲ. ಆದರೆ ಅವರಿಂದ ನಿಮಗೆ ಸಹಾಯ ಮಾಡಲು ಆಗಿಲ್ಲ. ನಾನು ಇಂಧನ ಸಚಿವನಾಗಿದ್ದಾಗ ರೈತರ ಪಂಪ್‌ಸೆಟ್‌ಗೆ ನೀಡುವ ವಿದ್ಯುತ್ ಅನ್ನು ೬ ಗಂಟೆಯಿಂದ ೭ ಗಂಟೆಗೆ ಏರಿಸಿದೆ. ಪಾವಗಡದಲ್ಲಿ ದೊಡ್ಡ ಸೋಲಾರ್ ಸರ್ಕಾರ ಮಾಡಿದೆ ಎಂಬ ಸಮಾಧಾನ ನನಗಿದೆ. ಹಳ್ಳಿಗಳಲ್ಲಿ ಅನೇಕ ಭಾಗ್ಯಗಳನ್ನು ಕೊಟ್ಟ ಆತ್ಮತೃಪ್ತಿ ಸಿದ್ದರಾಮಯ್ಯ ಅವರಿಗಿದೆ ಎಂದು ಶಿವಕುಮಾರ ಹೇಳಿದರು.
ಬೊಮ್ಮಾಯಿ ಅವರೇ, ಜನರಿಗೆ ಇಂತಹ ಒಂದು ಕಾರ‍್ಯಕ್ರಮ ನೀಡದಿದ್ದರೆ ಮತ್ಯಾಕೆ ಹಣದ ರಾಜಕಾರಣ ಮಾಡುತ್ತೀರಿ? ನಿಮ್ಮ ಮಗ ಕಾರ್ಖಾನೆ ನಡೆಸುತ್ತಿದ್ದಾರೆ, ಬಹಳ ಸಂತೋಷ. ನೀವು ಈ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ದಿರಿ. ಆದರೆ ಕೊನೆಗೆ ನಿಮ್ಮ ಮಗನಿಗೆ ಕೊಡಿಸಿದಿರಿ. ಅದನ್ನು ನಾನು ಪ್ರಶ್ನೆ ಮಾಡುವುದಿಲ್ಲ. ಆದರೆ, ಈ ಕ್ಷೇತ್ರದ ಕಾರ್ಯಕರ್ತರು ಬೊಮ್ಮಾಯಿ ಅವರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಿಲ್ಲವಂತೆ. ಅಜೆಂಟ್ ಮೂಲಕ ಭೇಟಿ ಮಾಡುವ ಪರಿಸ್ಥಿತಿ ಇದೆ ಎಂದು ಅವರ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಆದರೆ ನಮ್ಮ ಯಾಸೀರಖಾನ್ ಪಠಾಣ್ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸೇವೆ ಮಾಡುತ್ತಾರೆ. ಇಡೀ ಸರ್ಕಾರ ಅವರಿಗೆ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.ಕಿತ್ತುಹಾಕಲು ಸರ್ಕಾರ ಕಡಲೆಕಾಯಿ ಗಿಡವಲ್ಲ: ನಮ್ಮ ಗ್ಯಾರಂಟಿ ಯೋಜನೆ ಕಿತ್ತುಹಾಕಲು ಸಂಚು ರೂಪಿಸುತ್ತಿದ್ದಾರೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಈ ಸರ್ಕಾರ ಕಿತ್ತೊಗೆಯುವುದಾಗಿ ಹೇಳುತ್ತಿದ್ದಾರೆ. ಅವರು ಕಿತ್ತು ಹಾಕಲು ಈ ಸರ್ಕಾರ ಕಡಲೆಕಾಯಿ ಗಿಡವಲ್ಲ. ರಾಜ್ಯದ ಜನ ೧೩೬ ಶಾಸಕರನ್ನು ಆಯ್ಕೆ ಮಾಡಿ ಬಲಿಷ್ಠ ಸರ್ಕಾರ ಆರಿಸಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ ಹಾಗೂ ಮಿಸ್ಟರ್ ವಿಜಯೇಂದ್ರ ಈ ಸರ್ಕಾರ ಕಿತ್ತುಹಾಕುವುದು ನಿಮ್ಮ ಹಣೆಬರಹದಲ್ಲಿ ಬರೆದಿಲ್ಲ. ಮುಂದಿನ ಮೂರೂವರೆ ಸರ್ಕಾರ ನಂತರವೂ ಈ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಬಡ ಜನ ನಮ್ಮ ಕೈ ಹಿಡಿಯಲಿದ್ದಾರೆ ಎಂದರು.