ಪ್ರಜ್ವಲ್‌ ರೇವಣ್ಣ ಕೇಸಲ್ಲಿ ಮೋದಿ ಮೌನ ಏಕೆ: ಪುಷ್ಪಾ ಅಮರನಾಥ್‌

| Published : May 05 2024, 02:03 AM IST

ಸಾರಾಂಶ

ಮಹಿಳಾ ಕುಸ್ತಿಪಟುಗಳು, ಮಣಿಪುರ ಪ್ರಕರಣದಲ್ಲೂ ಬಿಜೆಪಿ ಇದೇ ರೀತಿ ಮೌನ ವಹಿಸಿತ್ತು. ಬ್ರಿಜ್‌ ಭೂಷಣ್‌ ಮಗನಿಗೆ ಬಿಜೆಪಿ ಈ ಬಾರಿ ಟಿಕೆಟ್‌ ನೀಡಿದೆ.

ಬಳ್ಳಾರಿ/ಹೊಸಪೇಟೆ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ. ಪ್ರಜ್ವಲ್‌ ರೇವಣ್ಣಗೆ ಶಿಕ್ಷೆಯಾಗಲಿದ್ದು, ರಾಜ್ಯ ಸರ್ಕಾರ ಸಂತ್ರಸ್ತೆಯರಿಗೆ ಖಂಡಿತ ನ್ಯಾಯ ಒದಗಿಸಲಿದೆ. ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರೂ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನ ವಹಿಸಿದ್ದಾರೆ. ಬಿಜೆಪಿ ಯಾವತ್ತೂ ಮಹಿಳೆಯರ ಪರ ನಿಲ್ಲುವುದಿಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್‌ ಆರೋಪಿಸಿದರು.

ನಗರದ ಶಾಸಕರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ಕುಸ್ತಿಪಟುಗಳು, ಮಣಿಪುರ ಪ್ರಕರಣದಲ್ಲೂ ಬಿಜೆಪಿ ಇದೇ ರೀತಿ ಮೌನ ವಹಿಸಿತ್ತು. ಬ್ರಿಜ್‌ ಭೂಷಣ್‌ ಮಗನಿಗೆ ಬಿಜೆಪಿ ಈ ಬಾರಿ ಟಿಕೆಟ್‌ ನೀಡಿದೆ. ಸ್ವತಃ ಬಿಜೆಪಿ ನಾಯಕ ದೇವರಾಜೇಗೌಡರು ಬಿಜೆಪಿ ನಾಯಕರಿಗೆ ಪತ್ರ ಬರೆದು, ಪ್ರಜ್ವಲ್‌ ರೇವಣ್ಣ ಬಗ್ಗೆ ತಿಳಿಸಿದ್ದರು. ಮೋದಿ, ಅಮಿತ್‌ ಶಾ ಎನ್‌ಡಿಎ ಅಭ್ಯರ್ಥಿಯಾಗಿ ಪ್ರಜ್ವಲ್‌ ರೇವಣ್ಣನನ್ನು ಕಣಕ್ಕಿಳಿಸಿದ್ದಾರೆ. ಮೋದಿ ಕೂಡ ಪ್ರಚಾರ ನಡೆಸಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ಗೆದ್ದರೂ ಅನರ್ಹಗೊಳಿಸಲು ಕಾಂಗ್ರೆಸ್‌ ಹೋರಾಟ ನಡೆಸಲಿದೆ ಎಂದರು.

ಬಿಜೆಪಿಯಲ್ಲಿರುವ ಮಹಿಳಾ ನಾಯಕಿಯರೂ ಈ ಪ್ರಕರಣ ಖಂಡಿಸಬೇಕು. ಬೀದಿಗೆ ಇಳಿದು ಹೋರಾಟ ನಡೆಸಬೇಕು. ಬಿಜೆಪಿ ಈ ಪ್ರಕರಣದಲ್ಲಿ ಇಷ್ಟೊಂದು ಮೌನ ವಹಿಸುತ್ತಿರುವುದು ಸರಿಯಲ್ಲ ಎಂದರು.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಬಿಜೆಪಿಯ ಶೋಭಾ ಕರಂದ್ಲಾಜೆ, ಶ್ರುತಿ, ತಾರಾ ಅನುರಾಧಾ ಸೇರಿದಂತೆ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಯಾಗಿದೆ ಎಂಬ ಕಾರಣಕ್ಕಾಗಿಯೇ ಬಿಜೆಪಿ ನಾಯಕಿಯರು ಮೌನ ವಹಿಸಿದ್ದು ಬಿಜೆಪಿಗೆ ಈ ಚುನಾವಣೆಯಲ್ಲಿ ಮಹಿಳೆಯರ ಮತಗಳನ್ನು ಕೇಳುವ ಯಾವುದೇ ನೈತಿಕತೆ ಇಲ್ಲವಾಗಿದೆ ಎಂದು ಹೇಳಿದರು. ಇಷ್ಟು ದಿನ ಮಹಿಳೆಯರು ಮನೆಯಲ್ಲಿ ‌ಬಂಧಿಯಾಗಿದ್ದರು.‌ ಶಕ್ತಿ ಯೋಜನೆ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದೆ. ಕೂಲಿ‌, ಕಟ್ಟಡ ಕೆಲಸ ಹೋಗುವ ಮಹಿಳೆಯರಿಗೆ ಅನುಕೂಲವಾಗಿದೆ. ಎಸಿ ರೂಮ್ ನಲ್ಲಿ ಕುಳಿತು ಎರಡು ‌ಕೋಟಿ ಕಾರಿನಲ್ಲಿ ಓಡಾಡುವವರಿಗೆ ಶಕ್ತಿ‌ ಯೋಜನೆ ಬೆಲೆ ಗೊತ್ತಾಗುವುದಿಲ್ಲ ಎಂದು ಪರೋಕ್ಷವಾಗಿ ಭವಾನಿ ರೇವಣ್ಣನ ವಿರುದ್ಧ ಗುಡುಗಿದರು.

ರಾಜ್ಯ ಮಹಿಳಾ ಕಾಂಗ್ರೆಸ್‌ ನೇಹಾ ಹತ್ಯಾ ಪ್ರಕರಣ ಖಂಡಿಸಿದೆ. ಕೊಲೆ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದೆ. ಸಿಎಂ ಕೂಡ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ನೇಹಾ ಕುಟುಂಬಸ್ಥರಿಗೂ ಸಾಂತ್ವನ ಹೇಳಿದ್ದಾರೆ. ಆದರೆ, ಬಿಜೆಪಿಯವರು ಹಾಸನದ ಪ್ರಕರಣದಲ್ಲಿ ಮಾತ್ರ ಇನ್ನು ಮೌನಕ್ಕೆ ಶರಣಾಗಿದ್ದಾರೆ. ಮಹಿಳೆಯರ ಮೇಲಿನ ಪೈಶಾಚಿಕ ಕೃತ್ಯ ಖಂಡಿಸುತ್ತಿಲ್ಲ ಎಂದು ಆರೋಪಿಸಿದರು.

ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದರು.

ಶಾಸಕ ಎಚ್.ಆರ್‌. ಗವಿಯಪ್ಪ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಖಂಡಿತ ಚುನಾವಣಾ ಬಾಂಡ್‌ ವ್ಯವಸ್ಥೆಯನ್ನೇ ರದ್ದುಗೊಳಿಸಲಾಗುವುದು ಎಂದರು.

ಮುಖಂಡರಾದ ಸಂಗೀತಾ ಸಿಂಗ್‌, ಜಯಲಕ್ಷ್ಮೀ, ಜಯಲಕ್ಷ್ಮೀ ನಾಯಕ. ಮುನ್ನಿಕಾಸಿಂ, ಯೋಗಲಕ್ಷ್ಮೀ, ಗುಜ್ಜಲ ನಾಗರಾಜ, ಗುಜ್ಜಲ ನಿಂಗಪ್ಪ, ಕಾಂಗ್ರೆಸ್ ರಾಜ್ಯ ಘಟಕ ಕಾರ್ಯದರ್ಶಿ ಜ್ಯೋತಿ, ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ, ಪದ್ಮಾ, ಶೋಭಾ ಕಾಳಿಂಗ ಮತ್ತಿತರರಿದ್ದರು.