ಸಾರಾಂಶ
ಗೂಂಡಾಗಳು ಸಿ.ಟಿ.ರವಿ ಕೊಲೆ ಮಾಡಲು ಬಂದು, ಚಿಕ್ಕಮಗಳೂರಿಗೆ ಬಾಡಿ ಪಾರ್ಸೆಲ್ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. ದೂರು ನೀಡಲು ಹೋದ ನನ್ನನ್ನೇ ಖಾನಾಪುರ ಠಾಣೆಯಲ್ಲಿ 5 ಗಂಟೆ ಕಾಲ ಹೊರಗೆ ನಿಲ್ಲಿಸಿದ್ದೀರಿ ಎಂದು ಆರ್.ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ
ದಾವಣಗೆರೆ : 40 ಜನ ಗೂಂಡಾಗಳು ಸಿ.ಟಿ.ರವಿ ಕೊಲೆ ಮಾಡಲು ಬಂದು, ಚಿಕ್ಕಮಗಳೂರಿಗೆ ರವಿ ಬಾಡಿ ಪಾರ್ಸೆಲ್ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದ ನನ್ನನ್ನೇ ಖಾನಾಪುರ ಠಾಣೆಯಲ್ಲಿ 5 ಗಂಟೆ ಕಾಲ ಹೊರಗೆ ನಿಲ್ಲಿಸಿದ್ದೀರಿ. ಪೊಲೀಸ್ ಆಯುಕ್ತ ಅದೇ ಠಾಣೆಗೆ ಬರಲು ಯಾರು ಎಂದು ವಿಪಕ್ಷ ನಾಯಕ ಆರ್.ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ರಾತ್ರಿ ಬೆಳಗಾವಿ ಪೊಲೀಸರ ಬಂಧನದಿಂದ ಮುಕ್ತರಾದ ಸಿ.ಟಿ.ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜೊತೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾನೂ ಗೃಹ ಸಚಿವನಾಗಿದ್ದವನು. ಯಾವುದೇ ಪ್ರಕರಣದಲ್ಲಿ ತನಿಖಾಧಿಕಾರಿ ಇನ್‌ಸ್ಪೆಕ್ಟರ್, ಡಿವೈಎಸ್ಪಿ ಯಾರೋ ಇರಬಹುದು. ಅದೇ ಐಒ ಸುಪ್ರೀಂ. ಅದರಲ್ಲಿ ಡಿ.ಸಿ.ಗಾಗಲೀ, ಎಸ್.ಪಿ.ಗಾಗಲೀ, ಗೃಹ ಸಚಿವರಿಗೂ ಮಧ್ಯ ಪ್ರವೇಶಕ್ಕೆ ಅವಕಾಶ ಇಲ್ಲ. ಹೀಗಿದ್ದಾಗ ಖಾನಾಪುರ ಠಾಣೆಯಲ್ಲಿ ಆಯುಕ್ತನಿಗೇನು ಕೆಲಸ ಎಂದು ಪ್ರಶ್ನಿಸಿದರು.
ಬೆಳಗಾವಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಿ.ಟಿ.ರವಿ ಇದ್ದ ವಾಹನವನ್ನ ಏಕಾಏಕಿ ನಿಲ್ಲಿಸುವುದು, ಕ್ರಷರ್ ಮಾಡುವ ಕಡೆ ಒಬ್ಬಂಟಿಯಾಗಿ ರವಿಯನ್ನು ನಿಲ್ಲಿಸುತ್ತೀರಲ್ಲಾ ಇದೆಲ್ಲಾ ಏನು ಬೆದರಿಕೆ ಹಾಕುವುದಕ್ಕಾ? ಹೆದರಿಸಿ, ಮಾನಸಿಕವಾಗಿ ಕುಗ್ಗಿಸುವುದಕ್ಕಾ? ಟೆರರಿಸ್ಟ್‌ಗಳು ಬಂದರೆ, ಅಂತಹವರ ಕೇಸ್ ಹಿಂಪಡೆಯುವ ಕಾಂಗ್ರೆಸ್ ಸರ್ಕಾರ ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಯಾಕೆ ಟಾರ್ಗೆಟ್ ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು.
ನಾನೋರ್ವ ಸಂವಿಧಾನಬದ್ಧ ಹುದ್ದೆಯಲ್ಲಿದ್ದೇನೆಂಬುದನ್ನೂ ಮರೆತು ರಾಜ್ಯ ಸರ್ಕಾರ, ಅಲ್ಲಿ ಪೊಲೀಸ್ ಅಧಿಕಾರಿಗಳು ವರ್ತಿಸಿದ್ದಾರೆ. ಯಾರೋ ಟೆರರಿಸ್ಟ್‌ಗಳಿಗೆ ಕುರ್ಚಿ ಹಾಕಿ, ಕೂಡಿಸುವ ಕಾಂಗ್ರೆಸ್ ಸರ್ಕಾರವು ಇದು ವಿಪಕ್ಷ ನಾಯಕನ ಸ್ಥಾನಕ್ಕೆ ಮಾಡಿರುವ ಅವಮಾನ ಎಂದು ಕಿಡಿಕಾರಿದರು.
ಕೋರ್ಟ್, ಕಾನೂನು ಬಗ್ಗೆ ಕಾಂಗ್ರೆಸ್ಸಿನವರು ಮಾತನಾಡುತ್ತಾರೆ. ಅವುಗಳನ್ನೇ ಟೀಕಿಸುತ್ತಾರೆ. ನ್ಯಾಯಾಧೀಶರಂತೆ ಹೇಳಿಕೆ, ತೀರ್ಪನ್ನು ನೀಡಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಯಾರು? ಸಿ.ಟಿ.ರವಿ ಕ್ಷಮಾಪಣೆ ಕೇಳಬೇಕು ಅಂತಾರೆ. ತಪ್ಪು ಅಂತಾ ಮೊದಲು ಸಾಬೀತಾಗಬೇಕು. ಸಭಾಧ್ಯಕ್ಷರು ತೀರ್ಪು ನೀಡಬೇಕು, ಕೇಸ್ ಕೊಡಬೇಕು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ತೀರ್ಪು ಹೊರ ಬೀಳಬೇಕು. ಆದರೆ, ಅದ್ಯಾವುದೂ ಸಿಎಂ, ಡಿಕೆಶಿಗೆ ಮುಖ್ಯವಲ್ಲ. ಆದರೆ, ಇಂದಿನ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಅಶೋಕ್ ತಿಳಿಸಿದರು.
ಕಾನೂನು ಮೇಲೆ ಕಾಂಗ್ರಸ್ಸಿಗರಿಗೆ ಗೌರವ ಇಲ್ಲ. ನ್ಯಾಯಾಲಯಕ್ಕಿಂತ ಯಾವುದೂ ದೊಡ್ಡದಿಲ್ಲ ಅಂತಾ ಸಂವಿಧಾನವೇ ಹೇಳಿದೆ. ರಾಮಕೃಷ್ಣ ಹೆಗಡೆಯಂತಹ ನಾಯಕರಾಗಿದ್ದರೆ ರಾಜೀನಾಮೆ ಕೊಟ್ಟಿರುತ್ತಿದ್ದರು. ಆದರೆ, ಮಂತ್ರಿಗಳು ಫೋನ್ ಮೇಲೆ ಫೋನ್ ಮಾಡಿ, ಈ ಸರ್ಕಾರಕ್ಕೆ ಕಪ್ಪು ಚುಕ್ಕೆ ತಂದಿದ್ದಾರೆ ಎಂದು ಅವರು ಆರೋಪಿಸಿದರು.
ಕೋಟ್ ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಹೀಗೆ ವಿವಿಧೆಡೆಗಳ ಠಾಣೆಗಳಿಗೆ ಸಿ.ಟಿ.ರವಿ ಅವರನ್ನು ಸುತ್ತಾಡಿಸಿದ್ದೀರಿ. ಸಿದ್ದರಾಮಯ್ಯ ಸದ್ಯ ಔಟ್ ಗೋಯಿಂಗ್ ಚೀಫ್ ಮಿನಿಸ್ಟರ್. ಈಗಾಗಲೇ ಡಿ.ಕೆ.ಶಿವಕುಮಾರ ತಮಗೆ ಸಿಗಬೇಕಾಗಿದ್ದನ್ನು ಒದ್ದು ಕಸಿದುಕೊಳ್ಳುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ, ದೌರ್ಜನ್ಯಗಳು ಶಾಶ್ವತವಲ್ಲ. ರಾಜ್ಯವ್ಯಾಪಿ ಹೋರಾಟ ಮುಂದುವರಿಸುತ್ತೇವೆ
- ಆರ್.ಅಶೋಕ, ವಿಪಕ್ಷ ನಾಯಕ