ಸಾರಾಂಶ
- ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ದೊಡ್ಡಘಟ್ಟ ರಂಗಸ್ವಾಮಿ ಪ್ರಶ್ನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದಿಂದ ಚನ್ನಗಿರಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ನೂತನ ಬಸ್ ಘಟಕ ಆ.30ರಂದು ಉದ್ಘಾಟನೆಗೊಳ್ಳುವ ಆಹ್ವಾನ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೀಗಿದ್ದರೂ, ನಿಗಮದ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಮಾಹಿತಿ ಬಹಿರಂಗಗೊಳಿಸದೇ ರಹಸ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಗೌಪ್ಯತೆ ಕಾಪಾಡುವಂಥದ್ದು ಏನಿದೆ ಎಂದು ಚನ್ನಗಿರಿ ಸಮಾಜ ಸೇವಕ ದೊಡ್ಡಘಟ್ಟ ಎಸ್.ರಂಗಸ್ವಾಮಿ ಪ್ರಶ್ನಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.30ರಂದು ಮಧ್ಯಾಹ್ನ 3 ಗಂಟೆಗೆ ಚನ್ನಗಿರಿ ನೂತನ ಬಸ್ ಘಟಕ ಉದ್ಘಾಟನೆಯ ಆಹ್ವಾನ ಪತ್ರಿಕೆ ಲಭಿಸಿದೆ. 3 ಎಕರೆ 32.08 ಗುಂಟೆ ವಿಸ್ತೀರ್ಣದಲ್ಲಿ ₹8 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ. ಇದರ ಉದ್ಘಾಟನೆ ವಿಚಾರದಲ್ಲಿ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಗೌಪ್ಯತೆ ಕಾಪಾಡುತ್ತಿದ್ದಾರೆ. ಇದು ಸಾಕಷ್ಟು ಪ್ರಶ್ನೆಗಳಿಗೆ ಆಸ್ಪದ ಮಾಡಿದೆ ಎಂದರು.
ಆಡಳಿತ ಕಚೇರಿ, ಪುರುಷ ಸಿಬ್ಬಂದಿ ವಿಶ್ರಾಂತಿ ಗೃಹ, ಬಸ್ಸುಗಳ ನಿರ್ವಹಣೆ ಅಂಕಣ, ಬಸ್ಸುಗಳ ಪರಿವೀಕ್ಷಣಾ ಅಂಕಣ, ಭದ್ರತಾ ಮತ್ತು ಸಂಚಾರ ಶಾಖೆ, ಮಹಿಳಾ ಸಿಬ್ಬಂದಿ ವಿಶ್ರಾಂತಿ ಗೃಹ, ಶೌಚಾಲಯ, ಇಂಧನ ಕೊಠಡಿ, ವಾಷಿಂಗ್ ರ್ಯಾಂಪ್, ಪಾರ್ಕಿಂಗ್ ವ್ಯವಸ್ಥೆ, ಜನರೇಟರ್ ಕೊಠಡಿ ಹೀಗೆ ಎಲ್ಲವೂ ಘಟಕ ಹೊಂದಿದೆ. ಹೋರಾಟಗಳ ಫಲವಾಗಿ ಘಟಕ ಉದ್ಘಾಟನೆಗೆ ಸಿದ್ಧವಾಗಿದೆ. ಘಟಕ ಉದ್ಘಾಟಿಸುವ ವಿಚಾರದಲ್ಲಿ ಚನ್ನಗಿರಿ ಜನರನ್ನೂ ಕತ್ತಲಲ್ಲಿಟ್ಟಿರೋದು ಏಕೆ ಎಂದರು.ಡಿಪೋ ಉದ್ಘಾಟಿಸದ ಬಗ್ಗೆ ಏ.24ರಂದು ದಾವಣಗೆರೆಗೆ ಉಪ ಲೋಕಾಯುಕ್ತರು ಭೇಟಿ ನೀಡಿದ್ದ ವೇಳೆ ಮನವಿ ಮಾಡಿದ್ದೆವು. ಜೂ.16ರಂದು ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿದ್ದಾಗಲೂ ಮನವಿ ನೀಡಿದ್ದೆವು. ಜು.1ರಂದು ಕೇಂದ್ರ ಕಚೇರಿ ಸಾರಿಗೆ ಅಧಿಕಾರಿಗಳು ಚನ್ನಗಿರಿಗೆ ಭೇಟಿ ನೀಡಿ, ಡಿಪೋ ಕಾಮಗಾರಿಗಳ ವೀಕ್ಷಿಸಿದ್ದರು. ಈಗಾಗಲೇ ಕಾಮಗಾರಿ ಪೂರ್ಣವಾಗಿ 11 ತಿಂಗಳಾದರೂ ಡಿಪೋ ಉದ್ಘಾಟಿಸಿರಲಿಲ್ಲ. ಶ್ರಾವಣ ಮುಗಿದ ನಂತರ ಉದ್ಘಾಟಿಸುವುದಾಗಿ ಸಾರಿಗೆ ಸಚಿವರು ಹೇಳಿದ್ದರು. ಆದರೆ, ನಿಗಮದ ಅಧಿಕಾರಿಗಳು ಯಾಕೆ ಸಮರ್ಪಕವಾಗಿ ಜನರಿಗೆ ಮಾಹಿತಿ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಚನ್ನಗಿರಿ ಘಟಕಕ್ಕೆ ತಾತ್ಕಾಲಿಕ ಸಿಬ್ಬಂದಿ ಮಂಜೂರಾತಿ ನೀಡುವ ಬಗ್ಗೆ ಒಟ್ಟು 207 ಸಿಬ್ಬಂದಿಗೆ ನಿಯೋಜನೆ ಮಾಡಿದ್ದಾರೆ. ಆ.30ರಂದು ಮಧ್ಯಾಹ್ನ 3 ಗಂಟೆಗೆ ಡಿಪೋ ಉದ್ಘಾಟನೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಅದನ್ನು ಯಾಕೆ ಅಧಿಕೃತವಾಗಿ ಹೇಳುತ್ತಿಲ್ಲ. ಒಂದುವೇಳೆ ಆ.30ಕ್ಕೆ ಡಿಪೋ ಉದ್ಘಾಟಿಸುತ್ತಿಲ್ಲ ಎಂದಾದರೆ ಅದನ್ನಾದರೂ ಜನರ ಮುಂದಿಡಲಿ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ, ಸತ್ಯಾಸತ್ಯತೆ ಏನೆಂದು ಜನರಿಗೆ ತಿಳಿಸಲಿ ರಂಗಸ್ವಾಮಿ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ನಲ್ಲೂರು ಕನ್ನಡ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಆರ್.ಮಂಜಪ್ಪ, ಸಮಾಜ ಸೇವಕ ನವಿಲೇಹಾಳ್‌ನ ಟಿ.ಬಿ. ಹರೀಶಕುಮಾರ, ತ್ಯಾವಣಿಗೆ ಟಿ.ಎನ್.ವೀರೇಂದ್ರಕುಮಾರ, ಖಡ್ಗ ಸಂಘದ ಲಿಂಗದಹಳ್ಳಿ ಬಿ.ಚಂದ್ರಹಾಸ ಇದ್ದರು.
- - -(ಟಾಪ್ ಕೋಟ್) ಚನ್ನಗಿರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಇಲ್ಲವೆಂಬ ಕಾರಣಕ್ಕೆ 2.10.2014ರಿಂದ 8.2.2024 ರವರೆಗೆ ಸಚಿವರು, ಶಾಸಕರಿಗೆ, ಮುಖ್ಯಮಂತ್ರಿಗಳಿಗೆ ನಿರಂತರ ಬಸ್ ಡಿಪೋ ಸ್ಥಾಪಿಸುವಂತೆ ಒತ್ತಾಯಿಸಿಕೊಂಡೇ ಬಂದಿದ್ದೇವೆ. ಕಡೆಗೆ ಬಸ್ ಡಿಪೋ ಆರಂಭಿಸುವಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ ನಂತರ 16.3.2017ರಂದು ಬಸ್ ಡಿಪೋ ಸ್ಥಾಪಿಸಲು ನ್ಯಾಯಾಲಯದ ಆದೇಶವಾಗಿತ್ತು. ಆದೇಶದಂತೆ ಈಗ ಡಿಪೋ ನಿರ್ಮಾಣವಾಗಿದೆ.
- ದೊಡ್ಡಘಟ್ಟ ಎಸ್.ರಂಗಸ್ವಾಮಿ, ಸಮಾಜ ಸೇವಕ.- - -
-28ಕೆಡಿವಿಜಿ2.ಜೆಪಿಜಿ:ದಾವಣಗೆರೆಯಲ್ಲಿ ಗುರುವಾರ ಚನ್ನಗಿರಿ ತಾಲೂಕಿನ ಸಮಾಜ ಸೇವಕ ದೊಡ್ಡಘಟ್ಟ ಎಸ್.ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.