ಸಾರಾಂಶ
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಎಲ್ಲರೂ ಖಂಡಿಸಬೇಕು. ಆದರೆ ಅದಕ್ಕಾಗಿ ಮಂಗಳೂರಿನಲ್ಲಿ ಪ್ರತಿಭಟನೆ, ರಸ್ತೆ ತಡೆ ಮಾಡಿ ಜನರಿಗೆ ತೊಂದರೆ ಕೊಡುವುದರಲ್ಲಿ ಅರ್ಥವಿಲ್ಲ. ಪ್ರತಿಭಟನೆ ಹೆಸರಲ್ಲಿ ದ್ವೇಷ ರಾಜಕೀಯ ಮಾಡುವುದು ಸಲ್ಲದು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಆಕ್ಷೇಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಎಲ್ಲರೂ ಖಂಡಿಸಬೇಕು. ಆದರೆ ಅದಕ್ಕಾಗಿ ಮಂಗಳೂರಿನಲ್ಲಿ ಪ್ರತಿಭಟನೆ, ರಸ್ತೆ ತಡೆ ಮಾಡಿ ಜನರಿಗೆ ತೊಂದರೆ ಕೊಡುವುದರಲ್ಲಿ ಅರ್ಥವಿಲ್ಲ. ಪ್ರತಿಭಟನೆ ಹೆಸರಲ್ಲಿ ದ್ವೇಷ ರಾಜಕೀಯ ಮಾಡುವುದು ಸಲ್ಲದು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಆಕ್ಷೇಪಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಇತ್ತೀಚೆಗೆ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರಸ್ತೆ ತಡೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಯಾವುದೇ ಬಹುಸಂಖ್ಯಾತ ಸರ್ಕಾರ ಆ ದೇಶದ ಅಲ್ಪಸಂಖ್ಯಾತರ ರಕ್ಷಣೆ ಮಾಡಬೇಕು. ಇದನ್ನು ಮೀರಿ ವರ್ತಿಸುತ್ತಿರುವ ಬಾಂಗ್ಲಾ ದೇಶದ ಸರ್ಕಾರದ ತಪ್ಪಿನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರ ಧ್ವನಿ ಎತ್ತಬೇಕು. ಕೇಂದ್ರ ಸರ್ಕಾರ ಈ ಕೆಲಸ ಮಾಡುವಂತೆ ಬಿಜೆಪಿ ನಾಯಕರು ಒತ್ತಡ ಹಾಕಬೇಕು. ಬಾಂಗ್ಲಾ ದೂತವಾಸ ಎದುರು ಪ್ರತಿಭಟನೆ ನಡೆಸಬೇಕು. ಮಂಗಳೂರಿನಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸೋದು ಸರಿಯಲ್ಲ ಎಂದು ರಮಾನಾಥ ರೈ ಹೇಳಿದರು.ಬಾಂಗ್ಲಾ ದೇಶದ ಹಿಂದೂಗಳ ಸಮಸ್ಯೆಗೆ ಮಂಗಳೂರಿನಲ್ಲಿ ಪ್ರತಿಭಟನೆ ಮಾಡಿದರೆ ಸಿದ್ದರಾಮಯ್ಯ ಸರ್ಕಾರ, ಜಿಲ್ಲಾಡಳಿತದಿಂದ ಪರಿಹಾರ ಸಿಗುತ್ತದಾ ಎಂದು ಪ್ರಶ್ನಿಸಿದ ಅವರು, ಕರಾವಳಿಯ ಬಿಜೆಪಿಯವರು ಕೆಸರು ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದ್ದು, ಕೋಮು ಭಾವನೆ ಕೆರಳಿಸುವ ಕೆಲಸ ಇದರಲ್ಲಿ ಅಡಗಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಸುಹಾನ್ ಆಳ್ವ, ಪೃಥ್ವಿರಾಜ್, ದುರ್ಗಾದಾಸ್, ಡಿಕೆ ಅಶೋಕ್, ಅಬ್ಬಾಸ್ ಅಲಿ ಇದ್ದರು.