ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿಯೇ ಅದನ್ನು ನಡೆಸಿರುವುದಾಗಿ ಒಪ್ಪಿಕೊಂಡಿದ್ದರೆ, ತನಿಖೆಗೆ ಮತ್ತೆ ದಾಖಲೆಗಳನ್ನು ಒದಗಿಸುವಂತೆ ಕೇಳುತ್ತಿರುವುದರ ಔಚಿತ್ಯವೇನು ಎಂಬುದು ಕುಮಾರಸ್ವಾಮಿ ಅವರ ಪ್ರಮುಖ ಪ್ರಶ್ನೆಯಾಗಿತ್ತು. “ಸ್ಟಿಂಗ್ ಆಪರೇಷನ್ ಮಾಡಿದ ವ್ಯಕ್ತಿಗೆ ನೆಟ್ಟುಬೋಲ್ಟ್ ಇಲ್ವಾ ಎಂಬುದು ನನ್ನ ಪ್ರಶ್ನೆ. ರಾಜ್ಯ ಸರ್ಕಾರ ಆ ವ್ಯಕ್ತಿಗೆ ಗುಲಾಮಗಿರಿ ಮಾಡುತ್ತಿದೆ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಸ್ಟಿಂಗ್ ಆಪರೇಷನ್ ಮಾಡಲಾಗಿದೆ ಎಂಬ ಆರೋಪವನ್ನು ಉಲ್ಲೇಖಿಸಿದ ಅವರು, ಇಂತಹ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಬದಲು ತನಿಖೆಯ ಹೆಸರಿನಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಕರಣದ ತನಿಖೆಯ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ್ದಾರೆ. ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರು ಸ್ಟಿಂಗ್ ಆಪರೇಷನ್ ನಡೆಸಿರುವುದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿರುವಾಗ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿರುವ ಅವರು, ರಾಜ್ಯದಲ್ಲಿ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.ನಗರದ ರಿಂಗ್ ರಸ್ತೆ ಬಳಿಯ ಶಾಸಕರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯಿಂದ ಹಿಡಿದು ಕೆಪಿಎಸ್ಸಿ ನೇಮಕಾತಿ ಅಕ್ರಮಗಳ ಆರೋಪದವರೆಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರ ನಡೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಒಪ್ಪಿಕೊಂಡಿದ್ದರೂ ಕ್ರಮವಿಲ್ಲವೇಕೆ?ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿಯೇ ಅದನ್ನು ನಡೆಸಿರುವುದಾಗಿ ಒಪ್ಪಿಕೊಂಡಿದ್ದರೆ, ತನಿಖೆಗೆ ಮತ್ತೆ ದಾಖಲೆಗಳನ್ನು ಒದಗಿಸುವಂತೆ ಕೇಳುತ್ತಿರುವುದರ ಔಚಿತ್ಯವೇನು ಎಂಬುದು ಕುಮಾರಸ್ವಾಮಿ ಅವರ ಪ್ರಮುಖ ಪ್ರಶ್ನೆಯಾಗಿತ್ತು. “ಸ್ಟಿಂಗ್ ಆಪರೇಷನ್ ಮಾಡಿದ ವ್ಯಕ್ತಿಗೆ ನೆಟ್ಟುಬೋಲ್ಟ್ ಇಲ್ವಾ ಎಂಬುದು ನನ್ನ ಪ್ರಶ್ನೆ. ರಾಜ್ಯ ಸರ್ಕಾರ ಆ ವ್ಯಕ್ತಿಗೆ ಗುಲಾಮಗಿರಿ ಮಾಡುತ್ತಿದೆ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಸ್ಟಿಂಗ್ ಆಪರೇಷನ್ ಮಾಡಲಾಗಿದೆ ಎಂಬ ಆರೋಪವನ್ನು ಉಲ್ಲೇಖಿಸಿದ ಅವರು, ಇಂತಹ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಬದಲು ತನಿಖೆಯ ಹೆಸರಿನಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿಯವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಸೇರಿದಂತೆ ಹಲವು ವಿಚಾರಗಳನ್ನು ಒಂದಕ್ಕೊಂದು ತಳುಕು ಹಾಕಲಾಗುತ್ತಿದೆ ಎಂದು ದೂರಿದ ಅವರು, ಸಾರ್ವಜನಿಕ ಜೀವನದಲ್ಲಿರುವವರ ಕುರಿತು ಮಾತನಾಡುವಾಗ ಜವಾಬ್ದಾರಿ ಇರಬೇಕು ಎಂದು ಹೇಳಿದರು.ಡಿಜಿಪಿ ಭೇಟಿ ಬಳಿಕವೂ ಸಮಾಧಾನವಿಲ್ಲ:ಪ್ರಕರಣದ ಕುರಿತು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದ ಕುಮಾರಸ್ವಾಮಿ, ಅಧಿಕಾರಿಗಳ ಪ್ರತಿಕ್ರಿಯೆಯಿಂದ ತಮಗೆ ನಿರೀಕ್ಷಿತ ಭರವಸೆ ದೊರೆತಿಲ್ಲ ಎಂದರು. “ನಿನ್ನೆ ಡಿಜಿಪಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ ಅಲ್ಲಿನವರ ಮುಖಭಾವ ನೋಡಿದರೆ ಸೂಕ್ತ ತನಿಖೆ ನಡೆಯುವ ಲಕ್ಷಣ ಕಾಣಿಸುತ್ತಿಲ್ಲ. ತನಿಖೆ ನಡೆಸಲು ದಾಖಲೆಗಳನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಸಂಬಂಧಪಟ್ಟ ವ್ಯಕ್ತಿಯೇ ಒಪ್ಪಿಕೊಂಡಿರುವಾಗ ಮತ್ತೆ ಯಾವ ದಾಖಲೆ ನೀಡಬೇಕು?” ಎಂದು ಪ್ರಶ್ನಿಸಿದರು.
ಪ್ರಕರಣದ ತನಿಖೆಯಲ್ಲಿ ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಅವಕಾಶ ನೀಡಬಾರದು. ಆರೋಪಗಳ ಸತ್ಯಾಸತ್ಯತೆ ಹೊರಬರಲು ಕಾನೂನುಬದ್ಧವಾಗಿ ತನಿಖೆ ನಡೆಯಬೇಕು ಎಂಬುದು ತಮ್ಮ ಆಗ್ರಹವಾಗಿದೆ ಎಂದು ಹೇಳಿದರು. ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ತನಿಖೆಯ ಪ್ರಗತಿ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಜನರಿಗೆ ವಿಶ್ವಾಸ ಮೂಡುವಂತೆ ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ನನ್ನನ್ನು ಕೆರಳಿಸಲು ಪ್ರಯತ್ನ ನಡೆಯುತ್ತಿದೆಯೇ?ಕಳೆದ ಒಂದು ವಾರದಿಂದ ಗೃಹ ಸಚಿವರು ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ತಮ್ಮನ್ನು ಉದ್ರೇಕಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸೂಚನೆ ಬಂದಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ತಮ್ಮನ್ನು ‘ಉತ್ತರ ಕುಮಾರ’ ಎಂದು ಕರೆದಿರುವುದಕ್ಕೂ ತಿರುಗೇಟು ನೀಡಿದ ಅವರು, ರಾಜಕೀಯವಾಗಿ ಟೀಕೆಗಳನ್ನು ಎದುರಿಸಲು ಸಿದ್ಧನಿದ್ದೇನೆ. ಆದರೆ ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು ಸರ್ಕಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ತಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ವೈಯಕ್ತಿಕ ಟೀಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂಬುದು ಅವರ ಅಸಮಾಧಾನವಾಗಿತ್ತು. ರಾಜ್ಯದ ಆಡಳಿತ, ತನಿಖಾ ಸಂಸ್ಥೆಗಳ ಕಾರ್ಯವೈಖರಿ ಮತ್ತು ಸಾರ್ವಜನಿಕ ನೇಮಕಾತಿಗಳಲ್ಲಿನ ಪಾರದರ್ಶಕತೆ ಕುರಿತು ಚರ್ಚೆ ನಡೆಯಬೇಕು ಎಂದು ಹೇಳಿದರು.
ಕೆಪಿಎಸ್ಸಿ ನೇಮಕಾತಿ ವಿಚಾರದಲ್ಲೂ ಸರ್ಕಾರದ ವಿರುದ್ಧ ಆರೋಪಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು. ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳ ಆರೋಪ ಕೇಳಿಬಂದಾಗ ಸರ್ಕಾರ ಅವುಗಳನ್ನು ಪರಿಶೀಲಿಸಿ ಸತ್ಯಾಸತ್ಯತೆ ಪತ್ತೆಹಚ್ಚಬೇಕು. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಆದರೆ ಈ ವಿಚಾರದಲ್ಲಿ ಕ್ರಮ ಕೈಗೊಳ್ಳುವ ಬದಲು ದಾಖಲೆಗಳನ್ನು ಕೇಳಲಾಗುತ್ತಿದೆ ಎಂದು ಅವರು ಆಕ್ಷೇಪಿಸಿದರು. ಸಾರ್ವಜನಿಕ ನೇಮಕಾತಿ ವ್ಯವಸ್ಥೆಯ ಮೇಲೆ ಯುವಜನರು ನಂಬಿಕೆ ಇಟ್ಟಿದ್ದಾರೆ. ಅಂತಹ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ಆರೋಪಗಳನ್ನು ರಾಜಕೀಯ ದೃಷ್ಟಿಯಿಂದ ನೋಡುವ ಬದಲು ವಾಸ್ತವಾಂಶಗಳ ಆಧಾರದಲ್ಲಿ ತನಿಖೆ ನಡೆಸಬೇಕು ಎಂದು ಹೇಳಿದರು.‘ನನ್ನ ರಾಜಕೀಯ ಜೀವನದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ’ತಮ್ಮ ರಾಜಕೀಯ ಜೀವನದ ಕುರಿತು ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕೊಡುಗೆ ನೀಡಿದ್ದಾರೆ ಎಂಬುದನ್ನು ಒಪ್ಪಿಕೊಂಡರು. ಸಿದ್ದರಾಮಯ್ಯ ಕಾಂಗ್ರೆಸ್ಗೆ ಸೇರಿದ ನಂತರ ಅವರ ವಿರುದ್ಧ ರಾಜಕೀಯವಾಗಿ ಹೋರಾಟ ನಡೆಸಿದ್ದೇನೆ. ಆದರೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.ತಮ್ಮ ವಿರುದ್ಧ ₹150 ಕೋಟಿ ಹಗರಣದ ಆರೋಪ ಕೇಳಿಬಂದಿದ್ದ ಸಂದರ್ಭದಲ್ಲಿಯೂ ಅಧಿಕಾರದ ಬಲವನ್ನು ಬಳಸಿಕೊಂಡು ಹೋರಾಟ ನಡೆಸಿಲ್ಲ. ಅಂದು ಏಕಾಂಗಿಯಾಗಿ ಹೋರಾಡಿದ್ದೆ, ಇಂದೂ ತಮ್ಮ ಹೋರಾಟವನ್ನು ಮುಂದುವರಿಸಿದ್ದೇನೆ ಎಂದು ಹೇಳಿದರು.
ಕಬ್ಬು ಬೆಳೆಗಾರರ ಬೇಡಿಕೆಗೆ ಸರ್ಕಾರದ ನಿರ್ಧಾರಕ್ಕಾಗಿ ಕಾಯುವಿಕೆರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆಯೇ ಕಬ್ಬು ಬೆಳೆಗಾರರ ಸಮಸ್ಯೆಯನ್ನೂ ಪ್ರಸ್ತಾಪಿಸಿದ ಕುಮಾರಸ್ವಾಮಿ, ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ಕ್ರಮ ಕೈಗೊಳ್ಳಲಿವೆ ಎಂಬುದನ್ನು ಗಮನಿಸುತ್ತಿರುವುದಾಗಿ ತಿಳಿಸಿದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೇಂದ್ರ ಕೃಷಿ ಸಚಿವರೊಂದಿಗೆ ಚರ್ಚಿಸಿ ರೈತರ ಸಭೆ ನಡೆಸಿದ್ದರು. ಆದರೆ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಜಾರಿಗೆ ಬರದ ಹಿನ್ನೆಲೆಯಲ್ಲಿ ರೈತರು ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಗೆ ತೆರಳಿ ರೈತರೊಂದಿಗೆ ಚರ್ಚಿಸಿ, ವಿಜಯದಶಮಿ ಬಳಿಕ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದಾರೆ. ರೈತರು ಪ್ರತಿ ಟನ್ ಕಬ್ಬಿಗೆ ₹1,000 ಹೆಚ್ಚುವರಿ ಬೆಂಬಲ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರಗಳು ಯಾವ ನಿರ್ಧಾರ ಕೈಗೊಳ್ಳಲಿವೆ ಎಂಬುದನ್ನು ಕಾಯುತ್ತಿರುವುದಾಗಿ ತಿಳಿಸಿದರು.ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಬಾರದು. ಕಬ್ಬು ಬೆಳೆಗಾರರ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ತಮ್ಮ ಪಕ್ಷಕ್ಕೆ ರೈತರ ಹಿತಾಸಕ್ತಿಯ ಬಗ್ಗೆ ಕಾಳಜಿ ಇದೆ. ರೈತ ಕುಟುಂಬಗಳು ತಮ್ಮ ಪಕ್ಷದ ಮೇಲೆಯಾಗಲಿ, ತಮ್ಮ ಮೇಲೆಯಾಗಲಿ ಯಾವುದೇ ಅನುಮಾನ ಇಟ್ಟುಕೊಳ್ಳಬಾರದು ಎಂದು ಕುಮಾರಸ್ವಾಮಿ ಹೇಳಿದರು.
ಇದೇ ವೇಳೆ ಶಾಸಕ ಹೆಚ್.ಪಿ. ಸ್ವರೂಪ್, ಎ. ಮಂಜು, ಬಿ.ಆರ್. ಸತ್ಯನಾರಾಯಣ್, ಸುಮುಖ ರಘು, ಪ್ರಸಾದ್ ತ್ಯಾಗಿ ಇತರರು ಉಪಸ್ಥಿತರಿದ್ದರು.