ಸಾರಾಂಶ
ತಾಲೂಕು ಮಟ್ಟದ ಜನತಾ ದರ್ಶನದಲ್ಲಿ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ವೈಶಾಲಿ
ಗಜೇಂದ್ರಗಡ:ಶಾಲೆಗಳಲ್ಲಿ ಶೌಚಾಲಯ ಹಾಗೂ ನೀರಿನ ಸಮಸ್ಯೆಗಳಿದ್ದರೂ ಸಹ ಶಾಲೆಗಳನ್ನು ಹೇಗೆ ನಡೆಸುತ್ತಿದ್ದೀರಿ, ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಪರಿಹಾರವನ್ನು ಏಕೆ ಕಂಡುಕೊಂಡಿಲ್ಲ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು. ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜನತೆಯ ಅಹವಾಲು ಆಲಿಸಿ ಮಾತನಾಡಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ ನಂ.೨ ಹಾಗೂ ೩ರಲ್ಲಿ ಶೌಚಾಲಯ, ಗೇಟ್ ಹಾಗೂ ನೀರಿನ ಸೌಲಭ್ಯ ಕಲ್ಪಿಸುವಂತೆ ಶಾಲಾ ಶಿಕ್ಷಕಿಯರು ಹಾಗೂ ಎಸ್‌ಡಿಎಂಸಿ ಸದಸ್ಯ ನೀಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಶಾಲೆಯಲ್ಲಿ ಶೌಚಾಲಯ ಹಾಗೂ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತಲ್ಲವೇ, ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾಳಿ ರುದ್ರಪ್ಪ ಹುರಳಿ ಅವರಿಗೆ ಸೂಚಿಸಿದರು. ಇತ್ತ ಉಣಚಗೇರಿ ಗ್ರಾಮದಲ್ಲಿ ಕೋಳಿ ಫಾರ್ಮಹೌಸ್‌ನಿಂದ ಆಗುತ್ತಿರುವ ತೊಂದರೆ ಕುರಿತು ಗ್ರಾಮಸ್ಥರು ನೀಡಿದ ದೂರಿಗೆ ಫಾರ್ಮಹೌಸ್‌ನ್ನು ವಾರದೊಳಗೆ ಬಂದ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಕಿರಾಣಿ ಅಂಗಡಿಗಳಲ್ಲಿ ಟೆಸ್ಟಿಂಗ್ ಪೌಡರ್ ಮಾರಾಟ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.ಸಾರ್ವಜನಿಕರ ಅಹವಾಲು ಆಲಿಸಲು ಜಿಲ್ಲಾಧಿಕಾರಿಗಳು ಮುಂದಾಗುತ್ತಿದ್ದಂತೆ, ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಕಚೇರಿಗೆ ಅಲೆದು ಸುಸ್ತಾಗಿದ್ದೇನೆ, ಇಂದು ಪುರಸಭೆಗೆ ನೀವು ಬಂದಿರುವುದು ನಮ್ಮ ಸೌಭಾಗ್ಯ. ದಯಮಾಡಿ ನಮ್ಮ ಹೊಲದ ರಸ್ತೆಯ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಅರ್ಜಿ, ಉತಾರದಲ್ಲಿ ತಂದೆಯವರ ಹೆಸರಿಲ್ಲದ್ದರಿಂದ ಅವರ ಮಗಳಾದ ನನ್ನ ಹೆಸರು ಸಹ ಉತಾರದಲ್ಲಿಲ್ಲ ಅದಕ್ಕೆ ಪರಿಹಾರ ಒದಗಿಸುವಂತೆ, ಗೃಹಲಕ್ಷ್ಮಿ ಹಾಗೂ ಪಡಿತರ ಹಣ ನನ್ನ ಖಾತೆಗೆ ಜಮೆ ಮಾಡಿಸಿ ಎಂದು, ಬಡಾವಣೆಯಲ್ಲಿ ರಸ್ತೆ ಕಾಮಗಾರಿ ಆರಂಭಿಸಿ ೬ ತಿಂಗಳು ಗತಿಸಿದ್ದರೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ, ಒಂದು ಮನೆ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂಬ ಮನವಿಗಳು ಒಂದೆಡೆಯಾದರೆ ಕಳಕಾಪೂರ ಗ್ರಾಮಕ್ಕೆ ಬಸ್ ಸೌಲಭ್ಯ, ವಿದ್ಯಾಭ್ಯಾಸಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ಕಂಪ್ಯೂಟರ್ ನೀಡಿ ಎನ್ನುವ ಬೇಡಿಕೆಗಳ ಜತೆಗೆ ಪಿಂಚಣಿ, ವಿದ್ಯುತ್ ಸಮಸ್ಯೆ, ನೀರಿನ ಸಮಸ್ಯೆ ಹಾಗೂ ಜಮೀನಿನಲ್ಲಿ ವಿದ್ಯುತ್ ಪ್ರಹಿಸುತ್ತಿರುವ ಪರಿಣಾಮ ಜೀವನ ನಡೆಸುವುದು ಕಷ್ಟವಾಗಿದೆ ಸೇರಿ ೧೨೯ ಅರ್ಜಿಗಳನ್ನು ೧೧೮ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿದ ಜಿಲ್ಲಾಧಿಕಾರಿಗಳು, ತಾಂತ್ರಿಕ ತೊಂದರೆಯ ೧೧ ಅರ್ಜಿಗಳನ್ನು ಬಗೆಹರಿಸಿ ವರದಿ ನೀಡುವಂತೆ ಸಂಬಂಧಿಸಿದ ಇಲಾಖೆ
ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಬಯಲು ಬಹಿರ್ದೆಸೆ ಜೀವಂತ: "ಪಟ್ಟಣದಲ್ಲಿ ಪುರಸಭೆ ಆಡಳಿತ ಮಂಡಳಿ ಇಲ್ಲದ ಪರಿಣಾಮ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಅದರಲ್ಲೂ ಮಹಿಳಾ ಶೌಚಾಲಯಗಳ ನಿರ್ವಹಣೆ ಕೊರತೆಯಿಂದ ಬಯಲು ಬಹಿರ್ದೆಸೆ ಜೀವಂತವಾಗಿದೆ. ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದರು ಸಹ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಪುರಸಭೆ ಸದಸ್ಯ ವಾಯ್.ಬಿ. ತಿಕರೋಜಿ ದೂರಿದರೆ ಪುರಸಭೆಯಲ್ಲಿ ಅಧಿಕಾರಿಗಳ ಕೊರತೆಯಿದೆ. ಅದರಲ್ಲೂ ಅಭಿಯಂತರರು ಜಿಲ್ಲೆಯ ನಾಲ್ಕು ಕಚೇರಿಗಳನ್ನು ಸುತ್ತು ಹಾಕುತ್ತಿದ್ದಾರೆ. ಹೀಗಾಗಿ ಪುರಸಭೆಗೆ ಕಾಯಂ ಅಭಿಯಂತರರನ್ನು ನೇಮಿಸಿ ಎಂದು ಪುರಸಭೆ ಹಂಗಾಮಿ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಸ್ಥಾಯಿ ಸಮಿತಿ ಚೇರಮನ ಕನಕಪ್ಪ ಅರಳಿಗಿಡದ, ಸದಸ್ಯ ಸುಭಾಸ ಮ್ಯಾಗೇರಿ ಒತ್ತಾಯಿಸಿದರು.
"ಚೀಲ್‌ಝರಿ ಗ್ರಾಮದ ಸ್ಮಶಾನ ಜಾಗದ ಸಮಸ್ಯೆ, ಜೀಗೇರಿ ಕೇರೆಯಿಂದ ಸಾಗಿಸುತ್ತಿರುವ ಗರಸು ಸಾಗಾಟ ಪರಿಶೀಲಿಸುವಂತೆ ತಹಸೀಲ್ದಾರ್ ಕಿರಣಕುಮಾರ ಅವರಿಗೆ, ಮನೆಗಳ ಬೇಡಿಕೆಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸಲು ಪುರಸಭೆ ಹಾಗೂ ೨ ಪ್ರಕರಣಗಳನ್ನು ಸಿಪಿಐ ಅವರಿಗೆ ಪರಿಶೀಲಿಸುವಂತೆ ಸೂಚಿಸಿದರು. "ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ತಾಪಂ ಇಒ ಡಾ.ಡಿ.ಮೋಹನ್, ಸಿಪಿಐ ಸುನೀಲ್ ಬೀಳಗಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಉಪನೋಂದಣಾಧಿಕಾರಿ ವಿರೂಪಾಕ್ಷಯ್ಯ ಚೌಕಿಮಠ, ಬಿಇಒ ರುದ್ರಪ್ಪ ಹುರಳಿ, ಪಿಎಸ್‌ಐ ಸೋಮನಗೌಡ ಗೌಡ್ರ, ಹೆಸ್ಕಾಂನ ವೀರೇಶ ರಾಜೂರ, ಅಹ್ಮದಅಲಿ ನಧಾಪ, ಮಂಜುನಾಥ ತಳ್ಳಿಹಾಳ, ರುದ್ರಗೌಡ ಪಾಟೀಲ, ಎಸ್.ಬಿ.ನರೇಗಲ್, ಮಹೇಶ ರಾಠೋಡ, ಬಸವರಾಜ ಅಂಗಡಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.