ಸಾರಾಂಶ
ಸದಾನಂದ ಮಜತಿ
ಕನ್ನಡಪ್ರಭ ವಾರ್ತೆ ಬೆಳಗಾವಿನಗರದಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ ಮಾಡಿದರೂ ಅನುಷ್ಠಾನ ಮಾತ್ರ ಕಾಗದದಲ್ಲಿಯೇ ಉಳಿದುಕೊಂಡಿದೆ. ಕ್ರಮ ಕೈಗೊಳ್ಳಬೇಕಾಗಿದ್ದ ಜಿಲ್ಲಾಡಳಿತ ಇನ್ನೂ ಕ್ಯಾರೆ ಎನ್ನುತ್ತಿಲ್ಲ. ಎರಡು ದಶಕಗಳಲ್ಲಿ ನಗರದಲ್ಲಿ ಆಟೋ ಮೀಟರ್ ಜಾರಿ ಮಾಡಲು ಜಿಲ್ಲೆಗೆ ಬರುವ ಎಲ್ಲ ಜಿಲ್ಲಾಧಿಕಾರಿಗಳು ಪ್ರಯತ್ನ ನಡೆಸಿದರೂ ಆಟೋ ಚಾಲಕರ ಹಠದ ಮುಂದೆ ಜಿಲ್ಲಾಡಳಿತವೇ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತಾಗಿದೆ.
ಆಟೋ ಮೀಟರ್ ಕಡ್ಡಾಯಗೊಳಿಸಬೇಕೆಂಬುದು ಸುಮಾರು ಎರಡು ದಶಕಗಳ ಪ್ರಯತ್ನವಾಗಿದೆ. ಜಿಲ್ಲಾಧಿಕಾರಿಗಳು ಬಂದ ಹೊಸದರಲ್ಲಿ ಆಟೋ ಚಾಲಕರ ಬೇಕಾಬಿಟ್ಟಿ ಹಣದ ಸುಲಿಗೆಗೆ ಕಡಿವಾಣ ಹಾಕಲು ಮೀಟರ್ ಕಡ್ಡಾಯಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಜನರ ಹಿತಾಸಕ್ತಿ ಕಾಪಾಡಬೇಕಾದ ಜನಪ್ರತಿನಿಧಿಗಳೇ ಆಟೋ ಚಾಲಕರ ಬೆಂಬಲಕ್ಕೆ ನಿಂತು ಒತ್ತಡ ಹಾಕುತ್ತಿರುವ ಕಾರಣ ಅದು ಇಂದಿನವರೆಗೂ ಸಾಧ್ಯವಾಗುತ್ತಿಲ್ಲ.2015ರಲ್ಲಿ ಆಗಿನ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ದೃಢ ನಿರ್ಧಾರ ಮಾಡಿ ಆಟೋ ಮೀಟರ್ ಕಡ್ಡಾಯಗೊಳಿಸಿದ್ದರು. ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸ್ವತಃ ರಸ್ತೆಗಿಳಿದು ಮೀಟರ್ ಹಾಕದ ಆಟೋ ಚಾಲಕರಿಗೆ ದಂಡ ಹಾಕಿ ಬಿಸಿ ಮುಟ್ಟಿಸಿದ್ದರು. ಸಹಾಯವಾಣಿ ಸಹ ಜಾರಿ ಮಾಡಿ ಮೀಟರ್ ಇಲ್ಲದಿದ್ದರೆ ಪ್ರಯಾಣಿಕರು ಕರೆ ಮಾಡಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಿದ್ದರು. ನಗರದ ಪ್ರಮುಖ ಆಟೋ ನಿಲ್ದಾಣಗಳಲ್ಲಿ ಫ್ರಿಪೇಯ್ಡ್ ಸೆಂಟರ್ ಗಳು ಕಾರ್ಯನಿರ್ವಹಿಸಲಾರಂಭಿಸಿದ್ದವು. 7-8 ದಿನಗಳಲ್ಲಿ ನೂರಾರು ಆಟೋ ಚಾಲಕರ ಮೇಲೆ ಪ್ರಕರಣಗಳು ಕೂಡ ದಾಖಲಾದವು. ಇನ್ನೇನು ಬಹುದಿನಗಳ ಕನಸು ನನಸಾಯಿತು ಎನ್ನುವಾಗಲೇ ರಾಜಕೀಯ ಪ್ರವೇಶವಾಗಿ ಆಟೋ ಮೀಟರ್ ಓಡಲೇ ಇಲ್ಲ.
----------ಬಾಕ್ಸ್...
ಎಲ್ಲಿಗೆ ಬಂತು ಮೀಟರ್ ಅಳವಡಿಕೆ ಕಾರ್ಯ?ಈಗಿನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸಹ 2024ರ ಸೆಪ್ಟೆಂಬರ್ ತಿಂಗಳಲ್ಲಿ ಆಟೋ ಮೀಟರ್ ಜಾರಿಗೊಳಿಸುವ ನಿಟ್ಟಿನಲ್ಲಿ ಶೀಘ್ರ ಸಭೆ ನಡೆಸಿ ಆಟೋ ಮೀಟರ್ ಕಡ್ಡಾಯಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಹೇಳಿ ಐದಾರು ತಿಂಗಳು ಕಳೆದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಬೆಂಗಳೂರು ಬಳಿಕ ಮಂಗಳೂರು ಸೇರಿ ಹಲವು ಮಹಾನಗರದಲ್ಲಿ ಆಟೋ ಮೀಟರ್ ಯಶಸ್ವಿಯಾಗಿ ಜಾರಿಗೊಂಡಿದ್ದರೂ ಬೆಳಗಾವಿಯಲ್ಲಿ ಮಾತ್ರ ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹೆಜ್ಜೆ ಇಡಲು ಮುಂದಾಗಿರುವ ಜಿಲ್ಲಾಡಳಿತಕ್ಕೆ ಯಾವುದೇ ಪ್ರಭಾವಕ್ಕೆ ಒಳಗಾಗದೇ ಪ್ರಯಾಣಿಕರ ಅನುಕೂಲಕ್ಕಾಗಿ ಮುನ್ನುಗ್ಗಬೇಕಿದೆ. ನಿತ್ಯ ಶೋಷಣೆ ಆಗುತ್ತಿದ್ದರೂ ಪ್ರಯಾಣಿಕರು ಮಾತ್ರ ಹೇಳಿಕೊಳ್ಳಲಾಗದೇ ಸಂಕಟ ಅನುಭವಿಸುವಂತಾಗಿದೆ.----------------