ಸಾರಾಂಶ
ಹಿರಿಯೂರು: ಬಳ್ಳಾರಿ ಜಿಲ್ಲೆಯಲ್ಲಿನ ಬಾಣಂತಿಯರ ಸಾವು ಪ್ರಕರಣದ ಪರಿಹಾರ ವಿತರಣೆಯಲ್ಲಿ ಮೊದಲು ಎರಡು ಲಕ್ಷ ಘೋಷಿಸಿ ಆನಂತರ ಪರಿಹಾರ ಮೊತ್ತವನ್ನು ₹5 ಲಕ್ಷಕ್ಕೆ ಏರಿಸಿ ಜನರ ಸಿಂಪತಿ ಪಡೆಯುವ ಹೈಡ್ರಾಮ ಕಾಂಗ್ರೆಸ್ ನದ್ದು ಎಂದು ಬಿಜೆಪಿ ಮುಖಂಡ ಕೇಶವಮೂರ್ತಿ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ಬಾಣಂತಿಯರ ಹಾಗೂ ನವಜಾತ ಶಿಶುಗಳ ಸರಣಿ ಸಾವು ಸಂಭವಿಸಿದ್ದು, ಈ ಬಗ್ಗೆ ಅಸಮರ್ಥ ಸರ್ಕಾರ ಮೊದಲು ಎರಡು ಲಕ್ಷ ಪರಿಹಾರ ಘೋಷಿಸಿ, ಆನಂತರ ಪರಿಹಾರ ಮೊತ್ತ ಹೆಚ್ಚಿಸಿದ್ದು ನಾಟಕವಲ್ಲವೇ? ಕೇರಳದ ವಯನಾಡುವಿನಲ್ಲಿ ಸತ್ತ ಆನೆಗಿಂತ ನಮ್ಮ ರಾಜ್ಯದ ಬಾಣಂತಿಯರ ಸಾವು ನಿಕೃಷ್ಟವೇ? ಎಂದು ಪ್ರಶ್ನಿಸಿದ್ದಾರೆ.
ನಿಗಮಗಳಲ್ಲಿ, ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಚುನಾವಣೆಗಳಿಗೆ ಅಪಾರ ಹಣ ವ್ಯಯ ಮಾಡಲು ದುಡ್ಡಿದೆ. ಆದರೆ ರೈತರ, ಬಾಣಂತಿಯರ, ಮಕ್ಕಳ ಸಾವಿನ ಪರಿಹಾರಕ್ಕೆ ದುಡ್ಡಿಲ್ಲವೇ? ಈ ವಿಚಾರದಲ್ಲಿ ಮೀನಾಮೇಷ ಎಣಿಸುವ ಕೆಲಸ ಏಕೆ? ಎಂದು ಪ್ರಶ್ನಿಸಿದ ಅವರು, ಸ್ವತಃ ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿರುವುದರಿಂದ ಈ ಸರ್ಕಾರ ಅಭಿವೃದ್ಧಿ ಮರೆತ ಮರೆತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.