ಆಪರೇಷನ ಸಿಂದೂರ ನಿಲ್ಲಿಸಿದ್ದು ಏಕೆ?

| Published : May 17 2025, 01:23 AM IST

ಸಾರಾಂಶ

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಕ್ಕೆ ಕದನ ವಿರಾಮ ಘೋಷಣೆ ಮಾಡಲಾಯಿತೇ ಎನ್ನುವುದು ಗೊಂದಲವನ್ನುಂಟು ಮಾಡಿದೆ. ಭಾರತದ ವಿದೇಶಾಂಗ ನೀತಿಯಲ್ಲಿ ಮತ್ತೊಂದು ದೇಶ ಮಧ್ಯಪ್ರವೇಶ ಮಾಡುವುದಕ್ಕೆ ಈ ವರೆಗೂ ಅವಕಾಶವಿರಲಿಲ್ಲ. ಅದರಲ್ಲೂ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮಸ್ಯೆಯನ್ನು ಎರಡು ದೇಶಗಳೇ ಇತ್ಯರ್ಥ ಮಾಡಿಕೊಳ್ಳಬೇಕಾಗಿದೆ.

ಕೊಪ್ಪಳ:

ಆಪರೆಷನ್ ಸಿಂದೂರ ನಿಲ್ಲಿಸಿದ್ದು ಏಕೆ ಎನ್ನುವ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಉತ್ತರಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಆಗ್ರಹಿಸಿದರು.

ತಾಲೂಕಿನ ಬಸಾಪುರ ಬಳಿಯ ಏರೋಡ್ರೋಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಕ್ಕೆ ಕದನ ವಿರಾಮ ಘೋಷಣೆ ಮಾಡಲಾಯಿತೇ ಎನ್ನುವುದು ಗೊಂದಲವನ್ನುಂಟು ಮಾಡಿದೆ. ಭಾರತದ ವಿದೇಶಾಂಗ ನೀತಿಯಲ್ಲಿ ಮತ್ತೊಂದು ದೇಶ ಮಧ್ಯಪ್ರವೇಶ ಮಾಡುವುದಕ್ಕೆ ಈ ವರೆಗೂ ಅವಕಾಶವಿರಲಿಲ್ಲ. ಅದರಲ್ಲೂ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮಸ್ಯೆಯನ್ನು ಎರಡು ದೇಶಗಳೇ ಇತ್ಯರ್ಥ ಮಾಡಿಕೊಳ್ಳಬೇಕಾಗಿದೆ. ಹೀಗಿರುವಾಗ ಮತ್ತೊಂದು ದೇಶ ಏಕೆ ಮಧ್ಯಪ್ರವೇಶಿಸಿತು ಎಂದು ಪ್ರಶ್ನಿಸಿದರು.

ಡೋನಾಲ್ಡ್ ಟ್ರಂಪ್ ಈಗ ಮತ್ತೊಂದು ಹೇಳಿಕೆ ನೀಡಿರಬಹುದು. ಆದರೆ, ಈ ಎಲ್ಲ ಗೊಂದಲಗಳಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಉತ್ತರಿಸಬೇಕು. ಮನ ಕಿ ಬಾತ್‌ನಲ್ಲಾದರೂ ಅವರು ಉತ್ತರಿಸಲಿ ಎಂದ ಅವರು, ಬಿಜೆಪಿಯವರು ವಿಶ್ವಗುರು ಯಾರು? ಎಂದು ಹೇಳಬೇಕು ಎಂದರು.

ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿಯವರು ಕಪ್ಪುಬಾವುಟ ಪ್ರದರ್ಶನ ಮಾಡಿದ್ದು ಅವರ ಹತಾಶೆ ಆಗಿರುವುದನ್ನು ತೋರಿಸುತ್ತದೆ. ಈಗ ಹೊಸಪೇಟೆಯಲ್ಲಿ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಹೇಳಿದರು.

ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಕಾಮಗಾರಿ ಈಗಾಗಲೇ ಸ್ಥಗಿತ ಮಾಡಲಾಗಿದೆ. ಈ ಕುರಿತು ಸರ್ಕಾರವು ಆದೇಶಿಸಿದೆ. ಆದರೂ ಸಹ ಶಾಸಕರು ಸೇರಿಕೊಂಡು ಮತ್ತೊಮ್ಮೆ ಮುಖ್ಯಮಂತ್ರಿ ಭೇಟಿಯಾಗಿ, ಯಾವುದೇ ಕಾರಣಕ್ಕೂ ಕಾರ್ಖಾನೆ ಸ್ಥಾಪಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗುವುದು ಹೇಳಿದರು.