ಕನ್ನಡಪ್ರಭದಿಂದ ಕುಶಾಲನಗರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಗೆ ವ್ಯಾಪಕ ಸ್ಪಂದನೆ

| Published : Nov 19 2025, 03:30 AM IST

ಕನ್ನಡಪ್ರಭದಿಂದ ಕುಶಾಲನಗರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಗೆ ವ್ಯಾಪಕ ಸ್ಪಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 124 ಮಂದಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಚಿತ್ರಕಲಾ ಸ್ಪರ್ಧೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ನಮ್ಮಂತೆ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ, ಅವುಗಳನ್ನೂ ಕೂಡ ಬದುಕಲು ಬಿಡಿ. ಅರಣ್ಯ ಪ್ರದೇಶವನ್ನು ಹೆಚ್ಚಿಸಿ... ಪ್ರಾಣಿ ಸಂತತಿಯನ್ನು ಉಳಿಸಿ... ಗಿಡ ಮರಗಳನ್ನು ಸಂರಕ್ಷಿಸಿ... ಸೇರಿದಂತೆ ವಿವಿಧ ಸಂದೇಶಗಳ ಮೂಲಕ ಚಿತ್ರಗಳನ್ನು ರಚಿಸುವ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು.

ಕನ್ನಡಪ್ರಭ ದಿನ ಪತ್ರಿಕೆ, ವಿವೇಕಾನಂದ ಎಜುಕೇಷನಲ್ ಟ್ರಸ್ಟ್ ಕುಶಾಲನಗರ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕುಶಾಲನಗರ ತಾಲೂಕು ಘಟಕದ ಸಹಯೋಗದಲ್ಲಿ ಕುಶಾಲನಗರದ ವಿವೇಕಾನಂದ ಪಿಯು ಕಾಲೇಜು ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಜರುಗಿತು. ಸುಮಾರು 124 ಮಂದಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಚಿತ್ರಕಲಾ ಸ್ಪರ್ಧೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು.

ನಿಯಂತ್ರಣ ಆಗಬೇಕಿದೆ:

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕುಶಾಲನಗರ ಉಪ ವಲಯ ಅರಣ್ಯಾಧಿಕಾರಿ ಕೆ.ಎನ್. ದೇವಯ್ಯ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲೂ ಕೂಡ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಇದರ ನಿಯಂತ್ರಣ ಆಗಬೇಕಿದೆ. ಆದ್ದರಿಂದ ಮಕ್ಕಳಲ್ಲಿ ಅರಣ್ಯ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ಅರಿವು ಮೂಡಿಸುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.

ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲರಾದ ಕ್ಲಾರಾ ರೇಷ್ಮಾ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಇದು ಉತ್ತಮ ವೇದಿಕೆಯಾಗಿದೆ. ಅರಣ್ಯ ಸಂರಕ್ಷಣೆ ಬಗ್ಗೆ ಅರಿವು ಮಕ್ಕಳಲ್ಲಿ ಮೂಡಿಬರಲು ಸಹಕಾರಿ ಎಂದರು.

ವಿದ್ಯಾರ್ಥಿಗಳಿಗೆ ಅನಿವಾರ್ಯ:

ವಿವೇಕಾನಂದ ಏಜುಕೇಷನ್ ಟ್ರಸ್ಟ್ ನ ಆಡಳಿತ ಅಧಿಕಾರಿ ಮಹೇಶ್ ಅಮೀನ್ ಮಾತನಾಡಿ, ಚಿತ್ರಗಳು ಮಾತನಾಡುತ್ತದೆ. ಆದ್ದರಿಂದ ಇಂತಹ ಸ್ಪರ್ಧಾ ಕಾರ್ಯಕ್ರಮ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನಿವಾರ್ಯ ಎಂದರು.

ಚಿತ್ರಕಲಾ ಶಿಕ್ಷಕರಾದ ಉರಾ ನಾಗೇಶ್ ಮಾತನಾಡಿ ಭಾಷೆ ಬಾರದವನೂ ಕೂಡ ಚಿತ್ರವನ್ನು ನೋಡಿದರೆ ಅದರಲ್ಲಿನ ವಿಷಯ ಅರ್ಥವಾಗುತ್ತದೆ. ಒಂದು ಚಿತ್ರ ಸಾವಿರ ಪದಗಳ ಅರ್ಥವನ್ನು ನೀಡುತ್ತದೆ. ಕನ್ನಡಪ್ರಭ ಸಂಪಾದಕರಾದ ರವಿ ಹೆಗಡೆ ನೇತೃತ್ವದಲ್ಲಿ ಈ ಚಿತ್ರಕಲಾ ಸ್ಪರ್ಧೆ ನಡೆಯುತ್ತಿರುವುದು ಮಕ್ಕಳಿಗೆ ದೊರಕಿರುವ ಸುವರ್ಣವಕಾಶ ಎಂದರು.

ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಭೂತನಕಾಡು ಪ್ರಾಸ್ತಾವಿಕ ಮಾತನಾಡಿ ಕನ್ನಡಪ್ರಭ ದಿನ ಪತ್ರಿಕೆ ಮಕ್ಕಳಲ್ಲಿ ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷೆ ಚೈತನ್ಯ ಸಿ. ಮೋಹನ್ ಇದ್ದರು.

ಕನ್ನಡ ಉಪನ್ಯಾಸಕ ಗಂಗಾಧರ ನಿರೂಪಿಸಿದರು. ಕುಶಾಲನಗರ ತಾಲೂಕು ವರದಿಗಾರ ಎಂ.ಎನ್. ಚಂದ್ರಮೋಹನ್ ಸ್ವಾಗತಿಸಿದರು. ಸುಂಟಿಕೊಪ್ಪ ವರದಿಗಾರ ವಿನ್ಸೆಂಟ್ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸಾಲು ಮರದ ತಿಮ್ಮಕ್ಕ ಅವರ ನೆನಪಿಗೆ ಮೌನಾಚರಣೆ ಸಲ್ಲಿಸಲಾಯಿತು. ಪೊಲೀಸ್ ಇಲಾಖೆಯ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರಲು ಇಂತಹ ವೇದಿಕೆಗಳು ಅಗತ್ಯವಾಗಿದೆ. ವಿಶೇಷವಾಗಿ ಮಕ್ಕಳಿಗೆ ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳ ಮೇಲೆ ಕಾಳಜಿ ಇರಬೇಕು. ಈ ಚಿತ್ರಕಲಾ ಸ್ಪರ್ಧೆಯ ಮೂಲಕ ಮಕ್ಕಳಲ್ಲಿ ಮತ್ತಷ್ಟು ಜಾಗೃತಿ ಮೂಡುವಂತಾಗಬೇಕು.

-ದಿನೇಶ್ ಕುಮಾರ್, ಪೊಲೀಸ್ ವೃತ್ತ ನಿರೀಕ್ಷಕರು ಕುಶಾಲನಗರ ವೃತ್ತಸಾಲು ಮರದ ತಿಮ್ಕಕ್ಕ ನೆನಪಿಗೆ ಗಿಡ ನೆಡುವ ಕಾರ್ಯಕ್ರಮ

ಇತ್ತೀಚೆಗೆ ನಿಧನರಾದ ಸಾಲು ಮರದ ತಿಮ್ಮಕ್ಕ ಅವರ ನೆನಪಿಗಾಗಿ ಕುಶಾಲನಗರ ವಿವೇಕಾನಂದ ಪಿಯು ಕಾಲೇಜಿನ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಅವರಿಗೆ ನಮನ ಸಲ್ಲಿಸಲಾಯಿತು. 114 ವರ್ಷಗಳ ಕಾಲ ಜೀವನ ನಡೆಸಿದ ತಿಮ್ಮಕ್ಕ ಅವರ ನೆನಪಿಗಾಗಿ ಪ್ರತಿಯೊಬ್ಬರೂ ಕೂಡ ಗಿಡ ನೆಡುವ ಮೂಲಕ ಅವರಿಗೆ ನಮನ ಸಲ್ಲಿಸಬೇಕೆಂದು ಗಣ್ಯರು ಈ ಸಂದರ್ಭ ಕರೆ ನೀಡಿದರು. ಪ್ರಶಸ್ತಿ ವಿಜೇತರ ವಿವರ

ಕುಶಾಲನಗರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ 4ನೇ ಹಾಗೂ 5ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕುಶಾಲನಗರ ಫಾತಿಮಾ ಶಾಲೆಯ ಗುರು ಪ್ರೀತ್ ಪಿ. (ಪ್ರ), ಫಾತಿಮಾ ಶಾಲೆಯ ವಾಗ್ಮಿ ಆರ್. (ದ್ವಿ), ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಫಿಹ ಖಾನ್(ತೃ), ಯೂನಿಕ್ ಅಕಾಡೆಮಿಯ ಆರ್ಥಿಕಾ ಹಾಗೂ ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ಹೆಚ್.ಆರ್. ಅಕ್ಷರಾ ಸಮಾಧಾನಕರ ಬಹುಮಾನ ಗಳಿಸಿದರು.

6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ಪ್ರಜ್ಞಾ ಎಸ್.(ಪ್ರ), ಶಾಂತಿನಿಕೇತನ ಶಾಲೆಯ ಪ್ರಜ್ಞಾ ಪ್ರಕಾಶ್ (ದ್ವಿ), ಕ್ರಿಸ್ಟ್ ಶಾಲೆಯ ಭುವನ್ ಸೋಮಯ್ಯ(ತೃ), ಕ್ರಿಸ್ಟ್ ಶಾಲೆಯ ತರುಣ್ ತಿಮ್ಮಯ್ಯ ಹಾಗೂ ಮೊಹಮ್ಮದ್ ಅರ್ಫತ್ ಸಮಾಧಾನಕರ ಬಹುಮಾನ ಗಳಿಸಿದರು.

8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕುಶಾಲನಗರದ ಫಾತಿಮಾ ಕಾನ್ವೆಂಟ್ ನ ಬಿ.ಎಂ. ನಿಕಿತಾ(ಪ್ರ), ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸ್ವಾತಿ(ದ್ವಿ), ಫಾತಿಮಾ ಶಾಲೆಯ ಬಿ.ಎಸ್. ತೇಜಸ್ (ತೃ), ಜ್ಞಾನಗಂಗಾ ಶಾಲೆಯ ಯಶಿಕಾ ರಾಜ್ ಆರ್ ಹಾಗೂ ಕೂಡಿಗೆ ಮೊರಾರ್ಜಿ ಶಾಲೆಯ ವಿಜಾಶ್ ಕೆ.ಎಂ.ಸಮಾಧಾನಕರ ಬಹುಮಾನ ಗಳಿಸಿದರು.