ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ವ್ಯಾಪಕ ಭ್ರಷ್ಟಾಚಾರ: ಘೋಟ್ನೇಕರ

| Published : Jan 05 2025, 01:33 AM IST

ಸಾರಾಂಶ

ಬಸ್ ಪ್ರಯಾಣ ದರ ಏರಿಕೆ, ರಾಜ್ಯದಲ್ಲಿ ನಡೆದ ಬಾಣಂತಿಯರ ಸಾವು ಹಾಗೂ ಗುತ್ತಿಗೆದಾರನ ಆತ್ಮಹತ್ಯೆ ಖಂಡಿಸಿ ಶನಿವಾರ ಪಟ್ಟಣದಲ್ಲಿ ಬಿಜೆಪಿ ಹಳಿಯಾಳ ಮಂಡಲ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ವಿಪ ಸದಸ್ಯ ಎಸ್.ಎಲ್. ಘೋಟ್ನೇಕರ ಮುಂದಾಳತ್ವ ವಹಿಸಿದ್ದರು.

ಹಳಿಯಾಳ: ಬಸ್ ಪ್ರಯಾಣ ದರ ಏರಿಕೆ, ರಾಜ್ಯದಲ್ಲಿ ನಡೆದ ಬಾಣಂತಿಯರ ಸಾವು ಹಾಗೂ ಗುತ್ತಿಗೆದಾರನ ಆತ್ಮಹತ್ಯೆ ಖಂಡಿಸಿ ಶನಿವಾರ ಪಟ್ಟಣದಲ್ಲಿ ಬಿಜೆಪಿ ಹಳಿಯಾಳ ಮಂಡಲ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ವಿಪ ಸದಸ್ಯ ಎಸ್.ಎಲ್. ಘೋಟ್ನೇಕರ ಮುಂದಾಳತ್ವ ವಹಿಸಿದ್ದರು.

ನೂತನ ಬಸ್ ಸ್ಟ್ಯಾಂಡ್ ಎದುರಿನ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಖಾನಾಪುರ-ತಾಳಗುಪ್ಪ ಹಾಗೂ ಗಣೇಶಗುಡಿ-ಹೆಬಸೂರ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ರಾಜ್ಯದಲ್ಲಿ ಪ್ರತಿಯೊಂದು ಹಂತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಇದೊಂದು ಪರ್ಸೆಂಟೇಜ್ ಸರ್ಕಾರವಾಗಿದೆ ಎಂದು ಆರೋಪಿಸಿದರು. ಮುದ್ರಾಂಕ ಶುಲ್ಕ, ಆಸ್ತಿ ಮಾರ್ಗಸೂಚಿ ದರ, ಸೇರಿದಂತೆ ಜನಸಾಮಾನ್ಯರಿಗೆ ಅವಶ್ಯಕವಾಗಿರುವ ವಸ್ತುಗಳ ಬೆಲೆಯೆರಿಕೆ ಮಾಡಿದ ಕಾಂಗ್ರೆಸ್ ಸರ್ಕಾರ ಅಷ್ಟಕ್ಕೂ ಸಮಾಧಾನಗೊಳ್ಳದೇ ಈಗ ಬಸ ದರ್ ಏರಿಕೆ ಮಾಡಿ ಜನಸಾಮಾನ್ಯರ ತಲೆಗೆ ಟೋಪಿ ಹಾಕಲು ಹೊರಟಿದೆ, ಈ ಸರ್ಕಾರ ತೊಲಗಲೇಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ರಾಜ್ಯ ಸರ್ಕಾರ ನೂತನ ವರ್ಷದ ಆರಂಭದಲ್ಲಿಯೇ ಬಸ್ ದರ ಏರಿಕೆ ಮಾಡಿ ಜನಸಾಮಾನ್ಯರನ್ನು ಶೋಷಿಸಲು ಹೊರಟಿದೆ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳಿಂದಾಗಿ ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ. ಮಹಿಳೆಯರಿಗೆ ಉಚಿತ್ ಬಸ್ ಹಾಗೂ ಗೃಹಲಕ್ಷ್ಮೀ ಯೋಜನೆಯ ಹೆಸರಲ್ಲಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಸಿದು ಕೊಳ್ಳುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ನಡೆದ ಬಾಣಂತಿಯರ ಸಾವು ಹಾಗೂ ಗುತ್ತಿಗೆದಾರನ ಆತ್ಮಹತ್ಯೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಅಧ್ಯಕ್ಷ ವಿಠ್ಠಲ ಸಿದ್ಧನ್ನವರ, ಪ್ರಮುಖರಾದ ಸಂತೋಷ ಘಟಕಾಂಬ್ಳೆ, ತಾನಾಜಿ ಪಟ್ಟೇಕರ, ಹನುಮಂತ ಚಿನಗಿನಕೊಪ್ಪ, ಉದಯ ಹೂಲಿ, ಸಂತಾನ ಸಾವಂತ, ಯಲ್ಲಪ್ಪ ಹೆಳವರ, ಮೋಹನ ಬೆಳಗಾಂವಕರ, ಚೂಡಪ್ಪ ಬೊಬಾಟೆ, ಪಾಂಡು ಪಾಟೀಲ, ಇಲಿಯಾಸ್ ಬಳಗಾರ, ಪ್ರಮೋದ ಹುನ್ಸವಾಡಕರ, ಜ್ಞಾನೇಶ ಮಾನಗೆ, ಹನುಮಂತ ಚಲವಾದಿ, ಪ್ರಕಾಶ ಬೊಬಾಟ, ರವಿ ಚಿಬುಲಕರ, ಜಯಲಕ್ಷ್ಮೀ ಚವ್ಹಾಣ, ಮಾಲಾ ಹುಂಡೇಕರ, ರಂಜನಾ ನಡಕಟ್ಟಿ, ಸಂಜನಾ ಮೋರೆ, ವೀಣಾ ಮುಂಬಾರ ಹಾಗೂ ಇತರರು ಇದ್ದರು.