ಆನೂರ ಗ್ರಾ.ಪಂನಲ್ಲಿ ವ್ಯಾಪಕ ಭ್ರಷ್ಟಾಚಾರ: ರಾಜಶೇಖರ

| Published : May 23 2024, 01:07 AM IST

ಸಾರಾಂಶ

14-15ನೇ ಹಣಕಾಸು ಯೋಜನೆ, ಉದ್ಯೋಗ ಖಾತ್ರಿ, ಕರವಸೂಲಿ ಸೇರಿದಂತೆ ವಿವಿಧ ಯೋಜನೆಗಳ ಹೆಸರಲ್ಲಿ ನಕಲಿ ಬಿಲ್ ಸೃಷ್ಟಿಸಿ ವಿವಿಧ ಏಜೆನ್ಸಿಗಳಿಗೆ ಹಣ ಸಂದಾಯ ಮಾಡಿ ಲಕ್ಷಾಂತರ ರುಪಾಯಿ ಅವ್ಯವಹಾರ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಚವಡಾಪುರ

14-15ನೇ ಹಣಕಾಸು ಯೋಜನೆ, ಉದ್ಯೋಗ ಖಾತ್ರಿ, ಕರವಸೂಲಿ ಸೇರಿದಂತೆ ವಿವಿಧ ಯೋಜನೆಗಳ ಹೆಸರಲ್ಲಿ ನಕಲಿ ಬಿಲ್ ಸೃಷ್ಟಿಸಿ ವಿವಿಧ ಏಜೆನ್ಸಿಗಳಿಗೆ ಹಣ ಸಂದಾಯ ಮಾಡಿ ಲಕ್ಷಾಂತರ ರುಪಾಯಿ ಅವ್ಯವಹಾರ ಮಾಡಲಾಗಿದೆ ಎಂದು ಅಫಜಲ್ಪುರ ತಾಲೂಕಿನ ಆನೂರ ಗ್ರಾ.ಪಂ ಸದಸ್ಯ ರಾಜಶೇಖರ ಸರ್ವೋದಯ ಆರೋಪಿಸಿದ್ದಾರೆ.

ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಕಲಬುರಗಿ ಕನೆಕ್ಟ್ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸಿ ಮಾತನಾಡಿದ ಅವರು ಆನೂರ ಗ್ರಾ.ಪಂ ಅಧ್ಯಕ್ಷ ಹಾಗೂ ಪಿಡಿಒ ಕೂಡಿಕೊಂಡು ಪಂಚಾಯಿತಿಗೆ ಬಂದ ಸರ್ಕಾರದ ವಿವಿಧ ಅನುದಾನ ನುಂಗಿ ಹಾಕಿದ್ದಾರೆ. ಗ್ರಾಮದಲ್ಲಿ ತೆರೆದ ಬಾವಿಗೆ ಗ್ರಿಲ್ ಅಳವಡಿಕೆ, ಅಂಗವಿಕಲರ ಅನುದಾನ, ಮುರುಮ ರಸ್ತೆಗಳು, ನರೇಗಾ, ಕರವಸೂಲಿ ಸೇರಿ ಅನೇಕ ಯೋಜನೆಗಳ ಹೆಸರಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ಮಾಡಿದ್ದಾರೆ. ಕಾಮಗಾರಿಗಳನ್ನೇ ಮಾಡದೆ ನಕಲಿ ಬಿಲ್ ಸೃಷ್ಟಿಸಿ ವಿವಿಧ ಏಜೆನ್ಸಿಗಳ ಹೆಸರಲ್ಲಿ ಹಣ ಸಂದಾಯ ಮಾಡಿ ವ್ಯಾಪಕ ಭ್ರಷ್ಟಾಚಾರ ಮಾಡುತ್ತಿದ್ದಾರೆ. 2022ರಿಂದ24ನೇ ಸಾಲಿನ ಅವಧಿಯಲ್ಲಿ 14 ಮತ್ತು 15ನೇ ಹಣಕಾಸು ಯೋಜನೆ ಅನುದಾನ ನುಂಗಿ ಹಾಕಿದ್ದಾರೆ. ಅಲ್ಲದೆ ಅಂಗವಿಕಲರ ಅನುದಾನದಲ್ಲಿ 60 ಸಾವಿರ,ಕರ ವಸೂಲಿಯ 2.5 ಲಕ್ಷ, ಮನೆಗಳ ಜಿಪಿಎಸ್ ಮಾಡಿಸಲು ತಲಾ ಮನೆಗೆ 2500 ರುಪಾಯಿ, ಬಾವಿಗೆ ಗ್ರಿಲ್ ಅಳವಡಿಕೆಯ ಹೆಸರಿನಲ್ಲಿ 1 ಲಕ್ಷ ಸೇರಿ ಹೀಗೆ ಹತ್ತು ಹಲವು ಕೆಲಸಗಳ ಹೆಸರಿನಲ್ಲಿ ಅನುದಾನದ ದುರ್ಬಳಕೆಯಾಗುತ್ತಿದೆ.

ಅಧ್ಯಕ್ಷ, ಪಿಡಿಒ ಹಣಬಾಕತನಕ್ಕೆ ಯಾರು ಕೇಳುವವರಿಲ್ಲದಂತಾಗಿದ್ದು ಸ್ವತಃ ನಾನು ಕೂಡ ಗ್ರಾಪಂ ಸದಸ್ಯನಾಗಿದ್ದರೂ ಕೂಡ ನಮ್ಮ ಬಡಾವಣೆಗಳಲ್ಲಿ ಜನಸೇವೆ ಮಾಡಲಾಗುತ್ತಿಲ್ಲ. ಅಭಿವೃದ್ದಿ ಕೆಲಸಗಳಿಗೆ ಇಬ್ಬರು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು ಅಧ್ಯಕ್ಷ, ಪಿಡಿಒ ಇಬ್ಬರ ಭ್ರಷ್ಟಾಚಾರದ ಕುರಿತು ಸಂಬಂಧ ಪಟ್ಟವರಿಗೆ ದೂರು ದಾಖಲಿಸಿದ್ದೇನೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣುವ ತನಕ ಹೋರಾಟ ಮುಂದುವರೆಸುತ್ತೇನೆ ಎಂದರು.