ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲಾದ್ಯಂತ ಅಬಕಾರಿ ಇಲಾಖೆಯಿಂದ ವಿವಿಧ ಆಯಾಮಗಳಲ್ಲಿ ಅಕ್ರಮ ನಡೆಯುತ್ತಿದೆ. ಇದರಲ್ಲಿಯೇ ಅತ್ಯಂತ ಪ್ರಮುಖವಾದದ್ದು ಎಂದು ಪರಿಗಣಿಸಲ್ಪಡುವ ಬಾರ್ ಲೈಸೆನ್ಸ್ ನವೀಕರಣ ಪ್ರಕ್ರಿಯೆ ಜೂ. 30ಕ್ಕೆ ಕೊನೆಗೊಂಡಿದೆ. ಈ ಪ್ರಕ್ರಿಯೆಯಲ್ಲಿಯೇ ವ್ಯಾಪಕ ಅಕ್ರಮ ನಡೆದಿದೆ ಎನ್ನುವ ಚರ್ಚೆಗಳು ಹರಿದಾಡುತ್ತಿವೆ. ಇದಕ್ಕೆ ಇಲಾಖೆ ಅಧಿಕಾರಿಗಳ ಮೌನವೇ ಪರೋಕ್ಷ ಉತ್ತರವಾಗಿದೆ.ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 127 ಬಾರ್‌ಗಳಿಗೆ ಅನುಮತಿ ಇದೆ. ಹೀಗೆ ಅನುಮತಿ ಹೊಂದಿರುವ ಪ್ರತಿಯೊಂದು ಅಂಗಡಿಗಳ ಮಾಲೀಕರು ಪ್ರತಿ ವರ್ಷ ಜೂ. 30ರೊಳಗಾಗಿ ತಮ್ಮ ಅಂಗಡಿಗಳ ನವೀಕರಣ ಮಾಡುವುದು ಕಡ್ಡಾಯ. ಆದರೆ ಇದನ್ನೇ ಲಾಭವನ್ನಾಗಿ ಮಾಡಿಕೊಂಡಿರುವ ಇಲಾಖೆ ಅಧಿಕಾರಿಗಳು ಬಾರ್ ಮಾಲೀಕರಣವನ್ನು ಇನ್ನಿಲ್ಲದಂತೆ ಶೋಷಣೆ ಮಾಡಿದರಂತೆ.
ಹಬ್ಬವೋ ಹಬ್ಬ: ಬಾರ್‌ಗಳ ನವೀಕರಣ ಎನ್ನುವುದು ಅಬಕಾರಿ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಹಬ್ಬವಿದ್ದಂತೆ. ಗದಗ ಜಿಲ್ಲೆಯಲ್ಲಿ ಪ್ರತಿ ಬಾರ್ ನವೀಕರಣಕ್ಕಾಗಿ ₹80 ಸಾವಿರದಿಂದ ₹1 ಲಕ್ಷದ ವರೆಗೂ ದರ (ಅನಧಿಕೃತವಾಗಿ) ನಿಗದಿ ಮಾಡಲಾಗಿದೆಯಂತೆ! ನವೀಕರಣದ ಹೆಸರಿನಲ್ಲಿಯೇ ₹1 ಕೋಟಿಗೂ ಹೆಚ್ಚಿನ ವಹಿವಾಟು ಜಿಲ್ಲೆಯಲ್ಲಿ ನಡೆಯುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಬಾರ್ ಮಾಲೀಕರು ''''''''''''''''ಕನ್ನಡಪ್ರಭ''''''''''''''''ಕ್ಕೆ ಮಾಹಿತಿ ನೀಡಿದ್ದು, ಪ್ರತಿಯೊಂದು ಅಂಗಡಿಗಳ ಮಾಲೀಕರು ಜೂ. 30ರೊಳಗೆ ಅಗತ್ಯ ದಾಖಲೆಗಳನ್ನು ನವೀಕರಣಕ್ಕಾಗಿ ಸಲ್ಲಿಸದೇ ಇದ್ದರೂ ಪರವಾಗಿಲ್ಲ, ಅಧಿಕಾರಿಗಳಿಗೆ ಹಣ ಕೊಡಲು ಒಪ್ಪಿಗೆ ಸೂಚಿಸಿ, ನವೀಕರಣಕ್ಕಾಗಿ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಹಣವನ್ನು ಮುಂಗಡವಾಗಿ ಸಂದಾಯ ಮಾಡದರೆ ಸಾಕು, ಆ ಬಾರ್ ಲೈಸೆನ್ಸ್ ನವೀಕರಣವಾದಂತೆಯೇ, ತಡವಾಗಿ ದಾಖಲೆಗಳನ್ನು ಸಲ್ಲಿಸಿದ ಬಾರ್ ಲೈಸೆನ್ಸ್ ಗಳು ನವೀಕರಣ ಖಂಡಿತ ಎನ್ನುವ ಮಾತುಗಳು ಕೇಳಿಬರುತ್ತಿವೆ.ಹೊಸ ವೆಬ್‌ಸೈಟ್: ಈ ಬಾರಿ ಬಾರ್ ಲೈಸೆನ್ಸ್ ನವೀಕರಣಕ್ಕಾಗಿ ಇಲಾಖೆ ಹೊಸ ವೆಬ್‌ಸೈಟ್ ಪ್ರಾರಂಭಿಸಿದೆ. ಇದರಲ್ಲಿ ಕನಿಷ್ಠ 17 ದಾಖಲಾತಿಗಳನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಬಾರ್ ಮಾಲೀಕರನ್ನೇ ವಿಪರೀತ ಸತಾಯಿಸುತ್ತಿದ್ದಾರೆ. ನಾವೆಲ್ಲ ಏನೂ ಮಾಡಲು ಆಗದಂತಾಗಿದೆ. ಅವರ ವಿರುದ್ಧ ಮಾತನಾಡಿದರೆ, ತಮ್ಮ ಲೈಸೆನ್ಸ್ ನವೀಕರಣವಾಗುವುದಿಲ್ಲ ಎನ್ನುವುದು ಕೂಡಾ ಅಂಗಡಿ ಮಾಲೀಕರ ಅಭಿಪ್ರಾಯವಾಗಿದೆ.
ಅಧಿಕಾರಿಗಳ ನಡುವೆ ಸಂಘರ್ಷ: ಗದಗ ಜಿಲ್ಲೆಯಲ್ಲಿ ಬಾರ್ ಲೈಸೆನ್ಸ್ ನವೀಕರಣದ ಗೊಂದಲ ಎಷ್ಟೊಂದು ಜೋರಾಗಿದೆ ಎಂದರೆ ಇದೇ ವಿಷಯವಾಗಿ ಇಬ್ಬರು ಮಹಿಳಾ ಅಧಿಕಾರಿಗಳ ನಡುವೆ ತೀರಾ ದೊಡ್ಡ ಮಟ್ಟದ ಸಂಘರ್ಷ ನಡೆದು, ಒಬ್ಬ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಪ್ರಕರಣವನ್ನು ಅದೇ ಇಲಾಖೆಯ ಅಧಿಕಾರಿಗಳ ಮಧ್ಯಸ್ಥಿತಿಯಲ್ಲಿ ರಾಜಿ ಸಂಧಾನ ಮಾಡಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಅಧಿಕಾರಿ ಇಂದಿಗೂ ರಜೆ ಮೇಲಿದ್ದಾರಂತೆ.ತನಿಖೆ ನಡೆಯಲಿ: ದೇವಸ್ಥಾನ, ಶಾಲೆಗಳು, ಮಠಗಳ ಸಮೀಪದಲ್ಲಿ ಮದ್ಯದಂಗಡಿ ಇರಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ಕಾರ ನಿಯಮ ರೂಪಿಸಿದೆ. ಆದರೆ, ಜಿಲ್ಲೆಯಲ್ಲಿ 10ಕ್ಕೂ ಹೆಚ್ಚಿನ ಬಾರ್‌ಗಳು ಈ ನಿಯಮ ಉಲ್ಲಂಘಿಸಿ ಸ್ಥಾಪನೆಯಾಗಿ ಮದ್ಯದ ವ್ಯಾಪಾರ ಮಾಡುತ್ತಿವೆ. ಅವುಗಳ ಲೈಸೆನ್ಸ್ ನವೀಕರಣ ಆಗಬಾರದು ಎಂದು ಹಲವಾರು ಸಂಘಟನೆಗಳು ಪ್ರತಿ ವರ್ಷವೂ ಹೋರಾಟ ಮಾಡುತ್ತಲೇ ಬಂದಿದ್ದರೂ ಅಬಕಾರಿ ಅಧಿಕಾರಿಗಳು ಮಾತ್ರ ಇದ್ಯಾವುದಕ್ಕೂ ಕಿವಿಗೊಟ್ಟಿಲ್ಲ. ಈ ಬಗ್ಗೆಯೂ ತನಿಖೆ ನಡೆಯಬೇಕು ಎನ್ನುತ್ತಿವೆ ವಿವಿಧ ಸಂಘಟನೆಗಳ ಮುಖಂಡರು. ದಾಖಲಾತಿ ಪರಿಶೀಲನೆ: ಬಾರ್ ಲೈಸೆನ್ಸ್ ನವೀಕರಣಕ್ಕಾಗಿ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ, ಇದೆಲ್ಲ ಸತ್ಯಕ್ಕೆ ದೂರವಾದ ಮಾತಾಗಿದೆ. ಇದನ್ನು ಕೆಲವು ಬಾರ್ ಮಾಲೀಕರು ಸೃಷ್ಟಿಸುತ್ತಿದ್ದಾರೆ. ಅಧಿಕಾರಿಗಳ ಆತ್ಮಹತ್ಯೆ ಪ್ರಯತ್ನದ ವಿಷಯದಲ್ಲಿ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದುಕೊಂಡು ಉತ್ತರಿಸುತ್ತೇನೆ. ಬಹುತೇಕ ಎಲ್ಲ ಬಾರ್ ಲೈಸೆನ್ಸ್ ನವೀಕರಣ ಪ್ರಕ್ರಿಯೆ ಮುಗಿದಿದೆ, ಅಂದರೆ ಸರ್ಕಾರಕ್ಕೆ ಹಣ ಭರಿಸಿದ್ದಾರೆ, ದಾಖಲಾತಿಗಳ ಪರಿಶೀಲನೆಯೂ ನಡೆಯುತ್ತಿದೆ ಎಂದು ಅಬಕಾರಿ ಉಪ ಆಯುಕ್ತ ಲಕ್ಷ್ಮಿ ನಾಯಕ ತಿಳಇಸಿದರು.
;Resize=(128,128))
;Resize=(128,128))