ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸ್ವತಂತ್ರ ಭಾರತದ ಬಲಾಡ್ಯ ಸೈನ್ಯವನ್ನು ಕಟ್ಟಿದ ವೀರ ಸೇನಾನಿಗಳಾದ ಫೀ.ಮಾ. ಕೊಡಂದೇರ ಕಾರ್ಯಪ್ಪ ಮತ್ತು ಜನರಲ್ ಕೊಡಂದೇರ ತಿಮ್ಮಯ್ಯ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ನಿಂದಿಸಿರುವ ದೇಶದ್ರೋಹಿಯನ್ನು ತಕ್ಷಣ ಬಂಧಿಸಿ ಗರಿಷ್ಠ ಪ್ರಮಾಣದ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಎಲ್ಲಾ ಸಂಘಟನೆ ಮತ್ತು ನಾಗರಿಕರ ಸಹಕಾರದೊಂದಿಗೆ ಕೊಡಗು ಬಂದ್‌ಗೆ ಕರೆ ನೀಡುವುದಾಗಿ, ಕೊಡವಾಮೆರ ಕೊಂಡಾಟ ಸಂಘಟನೆ ಎಚ್ಚರಿಸಿದೆ.ಶುಕ್ರವಾರ ಮಡಿಕೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರನ್ನು ಭೇಟಿಯಾಗಿ ದೂರು ನೀಡಿದ ಸಂಘಟನೆ ಪದಾಧಿಕಾರಿಗಳು, ಈ ಇಬ್ಬರೂ ಸೇನಾನಿಗಳ ದೇಶ ಸೇವೆ ಮತ್ತು ದೇಶಭಕ್ತಿಯನ್ನು ಇಡೀ ವಿಶ್ವವೇ ಕೊಂಡಾಡಿದೆ. ಅಂದಿನಿಂದ ಇಂದಿನವರೆಗೂ, ಮುಂದೇಯೂ ಕೂಡ ಭಾರತೀಯ ಸೇನೆಯ ಮಾದರಿ ನೇತಾರರಾಗಿ ನಿಲ್ಲುವ, ಈ ಇಬ್ಬರು ಮಹನೀಯರ ಬಗ್ಗೆ, ಅತ್ಯಂತ ತುಚ್ಛವಾಗಿ ನಿಂದಿಸಿರುವ ಕ್ರಮವನ್ನು ದೇಶ ಭಕ್ತರು ಯಾರೂ ಕೂಡ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ. ದೇಶ ಉಳಿಸಿದ ಮಹಾನ್ ಚೇತನಗಳ ವಿರುದ್ಧ ಮಾತನಾಡುವುದು ಸಂಪೂರ್ಣ ದೇಶದ್ರೋಹಿ ಚಟುವಟಿಕೆಗೆ ಸಮ. ಹಾಗಾಗಿ ಆರೋಪಿಯನ್ನು ತಕ್ಷಣ ಬಂಧಿಸಿ, ಕಾನೂನಿನ ಮೂಲಕ ಅತ್ಯಂತ ಕಠಿಣ ಶಿಕ್ಷೆ ವಿಧಿಸುವಂತಾಗಬೇಕು. ಈಗಾಗಲೆ ಕೊಡಗು ಪೋಲೀಸ್ ವರಿಷ್ಠಾಧಿಕಾರಿಗೆ ವಾಟ್ಸಾಪ್ ಮೂಲಕ, ಸಂಘಟನೆಯು ದೂರು ಸಲ್ಲಿಸಲಾಗಿದ್ದು, ಪ್ರತಿಗಳನ್ನು, ಗೃಹಸಚಿವರು, ಪೋಲೀಸ್ ಮಹಾ ನಿರ್ದೇಶಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕರು, ಸಂಸದರಿಗೂ ರವಾನಿಸಲಾಗಿದೆ. ಯಾವುದೇ ರಾಜಕೀಯ ಶಕ್ತಿ ಆರೋಪಿಯ ರಕ್ಷಣೆಗೆ ನಿಲ್ಲಬಾರದು. ಒಂದು ವೇಳೆ ಆರೋಪಿಯ ರಕ್ಷಣೆಯ ಸುಳಿವು ಸಿಕ್ಕರೆ ಅಥವಾ ವಿಳಂಬ ಧೋರಣೆಯಾದರೆ, ಕೊಡಗಿನ ಎಲ್ಲರ ಸಹಕಾರದಿಂದ ಜಿಲ್ಲಾ ಬಂದ್‌ಗೆ ಕರೆ ಕೊಡುತ್ತೇವೆ. ನಂತರ ಆಗಬಹುದಾದ ಎಲ್ಲಾ ಘಟನೆಗಳಿಗೂ ಸಂಭಂದಿಸಿದವರೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಲಾಗಿದೆ.
ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಇಂತ ಘಟನೆಗಳು ನಡೆದಿದ್ದು, ಪ್ರತೀ ಬಾರಿಯೂ ಕೇವಲ ತೇಪೆ ಹಚ್ಚುವ ಮತ್ತು ಕ್ಷಮೆ ಕೇಳಿ ಬಿಟ್ಟುಬಿಡುವುದರಿಂದ ಇಂತವರ ಸಂಖ್ಯೆ ಏರುತ್ತಿದೆ. ಹಾಗಾಗಿ ಈ ವಿಚಾರದಲ್ಲಿ ಯಾರೂ ಕೂಡ ಮೃದುಧೋರಣೆ ತೋರದೆ, ಆರೋಪಿಗೆ ಗರಿಷ್ಠ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಮತ್ತು ಜಿಲ್ಲೆಯ ಪ್ರತೀ ಮೂಲೆಗಳಲ್ಲೂ ಈತನ ವಿರುದ್ಧ ದೂರು ದಾಖಲಿಸುವಂತೆ ಎಲ್ಲಾ ದೇಶಭಕ್ತರಲ್ಲೂ ಮನವಿ ಮಾಡುವುದಾಗಿ ಸಂಘಟನೆ ತಿಳಿಸಿದೆ.ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಸಂಘಟನಾ ಕಾರ್ಯದರ್ಶಿ ತೀತಿಮಾಡ ಸೋಮಣ್ಣ, ಅಜ್ಜಮಕ್ಕಡ ವಿನು ಕುಶಾಲಪ್ಪ. ಸಾಮಾಜಿಕ ಕಾರ್ಯಕರ್ತರಾದ ಮಂಞಿರ ಕುಟ್ಟಪ್ಪ, ಮಾದಂಡ ತಿಮ್ಮಯ್ಯ, ಚೋವಂಡ ವಿಷ್ಣು ಪೊನ್ನಣ್ಣ, ಕರಿನೆರವಂಡ ಡ್ಯಾನಿ ಕುಶಾಲಪ್ಪ, ಅಯ್ಯರಣಿಯಂಡ ಸುಬ್ರಮಣಿ ಹಾಜರಿದ್ದರು.
ಶಾಸಕ ಖಂಡನೆ:ಕೊಡಗಿನ ಸೇನಾನಿಗಳು ಹಾಗೂ ಭಾಷಾ ಅಲ್ಪಸಂಖ್ಯಾತರಾದ ಆದಿವಾಸಿ ಬುಡಕಟ್ಟು ಕೊಡವ ಜನಾಂಗದ ಬಗ್ಗೆ ವಾಟ್ಸಪ್ ಮೂಲಕ ಅವಹೇಳನಕಾರಿ ಸಂದೇಶ ಹರಿಬಿಟ್ಟ ಕಿಡಿಗೇಡಿ ಕೃತ್ಯವನ್ನು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಖಂಡಿಸಿದ್ದಾರೆ. ಇದೊಂದು ರಾಜಕೀಯ ಪಿತೂರಿ ಎಂದು ಹೇಳಿರುವ ಅವರು, ಕಿಡಿಗೇಡಿ ಕೃತ್ಯ ಎಸಗಿದ ವ್ಯಕ್ತಿ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಂಸದ ಖಂಡನೆ:ಸೇನಾನಿಗಳ ವಿರುದ್ಧ ಕೆಲವರು ತೀವ್ರ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಗಮನಕ್ಕೆ ಬಂದಿದೆ. ಇಂತಹ ಹೇಳಿಕೆಗಳು ಸಂಪೂರ್ಣವಾಗಿ ವಿರೋಧಿಸುತ್ತೇನೆ ಮತ್ತು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದಾರೆ.
ಈ ವರ್ತನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಚಿಂತೆಗೊಳಗಾದ ನಾಗರಿಕರಿಂದ ಸಲ್ಲಿಸಲಾದ ಅಧಿಕೃತ ದೂರುಗಳಲ್ಲಿ ಉಲ್ಲೇಖಿಸಿರುವಂತೆ, ನಾನು ಅಧಿಕಾರಿಗಳಿಗೆ ಒತ್ತಾಯಿಸಿದ್ದೇನೆ. ಇಂತಹ ಕೃತ್ಯಗಳು ನೆಡೆಯುತ್ತಿರುವುದು ಅತೀವ ನೋವಿನ ಸಂಗತಿ ಎಂದು ಯದುವೀರ್ ಒಡೆಯರ್ ತಿಳಿಸಿದ್ದಾರೆ.