ಬೀದಿ ವ್ಯಾಪಾರಿಗಳ ಬಲಾತ್ಕಾರದ ಎತ್ತಂಗಡಿಗೆ ವ್ಯಾಪಕ ಆಕ್ರೋಶ

| Published : Oct 31 2025, 03:15 AM IST

ಸಾರಾಂಶ

ಕುಂದಾಪುರ ನಗರದ ಮುಖ್ಯ ರಸ್ತೆಗಳ ಆಸುಪಾಸಿನಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸಿ ಅನೇಕ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದರು. ಇದ್ದಕ್ಕಿದ್ದಂತೆ ಕಳೆದೊಂದು ವಾರದಿಂದ ಕುಂದಾಪುರ ಪುರಸಭೆಯ ಆಡಳಿತ ಹಗಲು ರಾತ್ರಿಯೆನ್ನದೇ ಬೀದಿ ಬದಿಯ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದೆ. ಪುರಭೆಯ ನಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನಾಕ್ರೋಶ ವ್ಯಕ್ತವಾಗಿದೆ.

ಶುಚಿತ್ವ, ವಾಹನ ನಿಲುಗಡೆ ನೆಪವೊಡ್ಡಿ ವಹಿವಾಟು ತೆರವು

ಶ್ರೀಕಾಂತ ಹೆಮ್ಮಾಡಿ

ಕನ್ನಡಪ್ರಭ ವಾರ್ತೆ ಕುಂದಾಪುರಬೀದಿ ಬದಿಯಲ್ಲಿ ಸಣ್ಣ ವಾಹನದಲ್ಲೋ, ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳಿಗೆ ಕುಂದಾಪುರ ಪುರಸಭೆ ಶಾಕ್‌ ನೀಡಿದೆ. ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಬಡ ವ್ಯಾಪಾರಿಗಳನ್ನು ವ್ಯಾಪಾರ ನಡೆಸದಂತೆ ಆಡಳಿತ ಯಂತ್ರ ಹಗಲು-ರಾತ್ರಿ ಕಾರ್ಯಾಚರಣೆ ನಡೆಸುವ ಮೂಲಕ ಎತ್ತಂಗಡಿ ಮಾಡಿದೆ. ನಗರದ ಮುಖ್ಯ ರಸ್ತೆಗಳ ಆಸುಪಾಸಿನಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸಿ ಅನೇಕ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದರು. ಇದ್ದಕ್ಕಿದ್ದಂತೆ ಕಳೆದೊಂದು ವಾರದಿಂದ ಕುಂದಾಪುರ ಪುರಸಭೆಯ ಆಡಳಿತ ಹಗಲು ರಾತ್ರಿಯೆನ್ನದೇ ಬೀದಿ ಬದಿಯ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದೆ. ಪುರಭೆಯ ನಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನಾಕ್ರೋಶ ವ್ಯಕ್ತವಾಗಿದೆ.

ಸದ್ಯ ಕುಂದಾಪುರ ಬೆಳೆಯುತ್ತಿರುವ ನಗರ. ದಿನದಿಂದ ದಿನಕ್ಕೆ ವಾಹನಗಳು ದಟ್ಟಣೆ ಹೆಚ್ಚಾಗುತ್ತಿದ್ದು ಕಳೆದ ಹಲವಾರು ವರ್ಷಗಳಿಂದ ವಾಹನಗಳ ಪಾರ್ಕಿಂಗ್‍ಗೆ ಸಾಕಷ್ಟು ಅನಾನುಕೂಲಗಳಾಗುತ್ತಿವೆ. ಪ್ರತೀ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚೆಗಳಾಗುತ್ತಿದ್ದು, ಇದಕ್ಕೊಂದು ಶಾಶ್ವತ ಪರಿಹಾರ ಇಲ್ಲಿಯ ತನಕವೂ ಸಿಕ್ಕಿಲ್ಲ. ಆದರೆ ಪಾರ್ಕಿಂಗ್ ಸಮಸ್ಯೆಯ ನೆಪವೊಡ್ಡಿ ಇದ್ದಕ್ಕಿಂತೆ ಬದಲಿ ಸ್ಥಳವೂ ನೀಡದೆ ಕುಂದಾಪುರ ಪುರಸಭೆಯ ಆಡಳಿತ ಮತ್ತು ಅಧಿಕಾರಿಗಳು ಇಲ್ಲಿನ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.11 ಬೀದಿಬದಿ ವ್ಯಾಪಾರಸ್ಥರ ಎತ್ತಂಗಡಿ:ನಗರದ ಪ್ರಮುಖ ರಸ್ತೆಗಳ ಮಗ್ಗುಲಲ್ಲಿ ಹಲವಾರು ವಾಣಿಜ್ಯ ಸಂಕೀರ್ಣಗಳಿದ್ದು, ಈ ವಾಣಿಜ್ಯ ಸಂಕೀರ್ಣಗಳ ವ್ಯಾಪಾರಸ್ಥರು ರಸ್ತೆಯ ತನಕ ತಮ್ಮ ಅಂಗಡಿಗಳ ಸಾಮಾಗ್ರಿಗಳನ್ನು ಇಡುತ್ತಿದ್ದರಿಂದ ವಾಹನಗಳ ನಿಲುಗಡೆಗೆ ಹಲವೆಡೆ ಅಡಚಣೆಯಾಗುತ್ತಿದೆ. ದೊಡ್ಡ ದೊಡ್ಡ ಕಾಂಪ್ಲೆಕ್ಸ್ ಗಳ ಎದುರು ರಸ್ತೆ ಬದಿಗೆ ಸಿಮೆಂಟ್ ಕಾಂಕ್ರೀಟ್‍ಗಳನ್ನು ಹಾಕಿ ಸುಂದರಗೊಳಿಸುವ ಪುರಸಭೆ ಮುಖ್ಯ ರಸ್ತೆಗಳ ಪಾರ್ಶ್ವಕ್ಕೆ ಅಳವಡಿಸಿದ್ದ ಇಂಟರ್ಲಾಕ್ ಕೆಲವೆಡೆ ಕಿತ್ತು ಹೋಗಿ ವಾಹನ ನಿಲುಗಡೆಗೆ ಅಡಚಣೆಯಾಗುತ್ತಿದ್ದರೂ ಈ ಬಗ್ಗೆ ಗಮನಹರಿಸಿಲ್ಲ. ಸಂಜೆ ಹೊತ್ತಿನಲ್ಲಿ ವಾಹನಗಳ ಮೂಲಕ ಕೇವಲ ನಾಲ್ಕೈದು ಗಂಟೆಗಳ ಕಾಲ ಫಾಸ್ಟ್ ಫುಡ್ ವ್ಯಾಪಾರ ನಡೆಸುವ ಮತ್ತು ತಳ್ಳುಗಾಡಿಗಳಲ್ಲಿ ಪಾನಿಪೂರಿ ಮುಂತಾದ ಆಹಾರ ತಿನಿಸುಗಳ ವಹಿವಾಟು ನಡೆಸುವ ವ್ಯಾಪಾರಿಗಳಿಂದ ವಾಹನ ನಿಲುಗಡೆಗೆ ಮತ್ತು ಶುಚಿತ್ವಕ್ಕೆ ತೊಂದರೆಗಳಾಗುತ್ತಿವೆ ಎಂದು ಸಬೂಬು ನೀಡಿ 11 ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ನಡೆಸದಂತೆ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿ ಕಾರ್ಯರೂಪಕ್ಕೆ ತರಲಾಗಿದೆ.

............................ಸಾಲ ಮಾಡಿ ವಾಹನ ಖರೀದಿಸಿ ಮೊಬೈಲ್ ಫಾಸ್ಟ್ ಫುಡ್ ಅಂಗಡಿಯನ್ನು ಇಟ್ಟು ವ್ಯಾಪಾರ ನಡೆಸಿ ಅದರಿಂದ ಜೀವನ ಸಾಗಿಸುತ್ತಿದ್ದೆವು. ಸಂಜೆ ಹೊತ್ತಿಗೆ ನಗರದಲ್ಲಿ ಯಾರಿಗೂ ತೊಂದರೆ ಕೊಡದೆ ನಾಲ್ಕೈದು ಗಂಟೆಗಳ ಕಾಲ ಶ್ರಮವಹಿಸಿ ವ್ಯಾಪಾರ ನಡೆಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೆವು. ಆದರೀಗ ಪುರಸಭೆ ಕ್ಷುಲ್ಲಕ ಕಾರಣಗಳನ್ನಿಟ್ಟುಕೊಂಡು ನಮಗೆ ವ್ಯಾಪಾರ ನಡೆಸದಂತೆ ತಡೆಯೊಡ್ಡಿದೆ. ಪುರಸಭೆಯ ಅಮಾನವೀಯ ನಡೆಯಿಂದಾಗಿ ನಮ್ಮ ಬದುಕು ಬೀದಿಗೆ ಬಂದಿದೆ.

-ಬೀದಿ ವ್ಯಾಪಾರಿಗಳು, ಕುಂದಾಪುರ.......................ಬೀದಿಬದಿ ವ್ಯಾಪರಸ್ಥರ ಸಮಸ್ಯೆಯ ಕುರಿತು ಮಾಹಿತಿ ಇದೆ. ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಬದಲಿ ಜಾಗ ಕೊಡುವ ಬಗ್ಗೆ ನಗರದಲ್ಲಿ ಸ್ಥಳಾವಕಾಶದ ಕೊರತೆ ಇದೆ. ಈ ಬಗ್ಗೆ ಪುರಸಭೆಯಲ್ಲಿ ಚರ್ಚಿಸಿ ಮುಂದಿನ ತೀಮಾನವನ್ನು ತಿಳಿಸಲಾಗುವುದು.

-ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಶಾಸಕ.

..............ಮುಖ್ಯಾಧಿಕಾರಿ ಹಾರಿಕೆಯ ಉತ್ತರ!ಕುಂದಾಪುರ ಪುರಸಭೆ ಬೀದಿಬದಿ ವ್ಯಾಪರಸ್ಥರನ್ನು ಒಕ್ಕಲೆಬ್ಬಿಸಿದ ವಿಚಾರದ ಕುರಿತಂತೆ ಬುಧವಾರ ಶಿಲನ್ಯಾಸ ಕಾರ್ಯಕ್ರಮವೊಂದಕ್ಕೆ ಮುಖ್ಯಾಧಿಕಾರಿ ಆನಂದ ಜೆ. ಆಗಮಿಸಿದ್ದ ವೇಳೆ ‘ಕನ್ನಡಪ್ರಭ’ ಮಾಹಿತಿ ಪಡೆಯಲು ಮುಂದಾದಾಗ ಹಾರಿಕೆಯ ಉತ್ತರವನ್ನು ನೀಡಿದ್ದಾರೆ. ಪೂರ್ತಿ ಮಾಹಿತಿ ಕೊಡದ ಮುಖ್ಯಾಧಿಕಾರಿ, ಬೀದಿವ್ಯಾಪಾರಿಗಳು ಸ್ವಚ್ಚತೆಯನ್ನು ಪಾಲಿಸುತ್ತಿಲ್ಲ. ಅವರಿಂದ ವಾಹನ ನಿಲುಗಡೆಗೆ ಸಮಸ್ಯೆಗಳಾಗುತ್ತಿದ್ದು, ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ 11 ಬೀದಿಬದಿ ವ್ಯಾಪರಸ್ಥರನ್ನು ಎಬ್ಬಿಸಲಾಗಿದೆ. ಅವರಿಗೆ ಬೇರೆ ಜಾಗ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.