ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಫೆಂಗಲ್ ಚಂಡಮಾರುತದ ಪರಿಣಾಮ ಕೊಡಗು ಜಿಲ್ಲೆಯಲ್ಲಿ ಸೋಮವಾರ ಇಡೀ ರಾತ್ರಿ ಭಾರಿ ಮಳೆ ಸುರಿಯಿತು. ಮಳೆಯಿಂದಾಗಿ ಜಿಲ್ಲೆಯ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದು, ಸಂಚಾರಕ್ಕೆ ತೊಂದರೆಯಾಯಿತು.ಮಳೆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಕೊಡಗಿನಾದ್ಯಂತ ಮಂಗಳವಾರ ಭಾರಿ ಶೀತ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಬರಲು ಭಯಪಡುವಂತಾಯಿತು.
ಮಂಗಳವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದೊಂದಿಗೆ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆ ಮಳೆಯಾಯಿತು. ಸಂಜೆ ವೇಳೆಗೆ ಮಳೆ ಕೊಂಚ ಬಿಡುವು ನೀಡಿತು.ಭಾರಿ ಮಳೆಗೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಭತ್ತದ ಬೆಳೆ ನೀರು ಪಾಲಾಗಿದೆ. ಕೊಯ್ಲು ಮಾಡಿ ಗದ್ದೆಯಲ್ಲಿ ಬಿಟ್ಟಿದ್ದ ಭತ್ತದ ಬೆಳೆ ನೀರು ಪಾಲಾಗಿದ್ದು, ಫಸಲು ಸಂಪೂರ್ಣ ನೆನೆದು ಹಾಳಾಯಿತು.
ಕುಶಾಲನಗರ ತಾಲೂಕಿನ ಹುದುಗೂರು, ಕೂಡಿಗೆ, ಹಾರಂಗಿ ವ್ಯಾಪ್ತಿಯಲ್ಲಿ ನೂರಾರು ರೈತರ ಭತ್ತದ ಬೆಳೆ ನಷ್ಟವಾಗಿದೆ. ಮಡಿಕೇರಿ, ನಾಪೋಕ್ಲು ಸೇರಿದಂತೆ ಹಲವೆಡೆ ಭತ್ತದ ಬೆಳೆ ನೀರಿನಲ್ಲಿ ಮುಳುಗಿ ಹಾಳಾಗಿದೆ.ಅಸಹಾಯಕ ರೈತರು ಚರಂಡಿ ನಿರ್ಮಿಸಿ ಗದ್ದೆಗಳಿಂದ ನೀರು ಹೊರ ಹಾಕುವ ಪ್ರಯತ್ನ ಮಾಡಿದರು.ಮಳೆಯಿಂದಾಗಿ ನೀರು ನಿಂತು ನೀರಿನಲ್ಲಿ ಭತ್ತ ಮೊಳಕೆ ಬರುವ ಸಾಧ್ಯತೆ ಇರುವುದರಿಂದ
ರೈತರು ಕೊಯ್ದ ಪೈರು ಒಣಗಿಸುವ ಉದ್ದೇಶದಿಂದ ಬದುಗಳಲ್ಲಿ ಇರಿಸುವ ಪ್ರಯತ್ನ ಮಾಡಿದರು.ಇದೀಗ, ಅಕಾಲಿಕ ಮಳೆಯಿಂದಾಗಿ, ನಾಲ್ಕೈದು ತಿಂಗಳು ಕಷ್ಟಪಟ್ಟು ಬೆಳೆದಿದ್ದ ಭತ್ತದ ಬೆಳೆ ನೀರು ಪಾಲಾಗಿ ರೈತರು ಕಂಗಾಲಾಗಿದ್ದಾರೆ.
ಭಾರಿ ಗಾಳಿ, ಮಳೆಗೆ ಜಿಲ್ಲೆಯ ಕೆಲವೆಡೆ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ.ಸುಂಟಿಕೊಪ್ಪ- ಪನ್ಯ ರಸ್ತೆಯಲ್ಲಿ ಮರ ಉರುಳಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು.
ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 44.93 ಮಿ.ಮೀ. ಮಳೆಯಾಗಿದೆ.ಮಡಿಕೇರಿ ತಾಲೂಕಿನಲ್ಲಿ 74.30 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 48.20 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 36.94 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 28.70 ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ 36.50 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ಕಸಬಾ 56, ನಾಪೋಕ್ಲು 57.20, ಸಂಪಾಜೆ 94, ಭಾಗಮಂಡಲ 90, ವಿರಾಜಪೇಟೆ 52.40, ಅಮ್ಮತ್ತಿ 44, ಹುದಿಕೇರಿ 30.50, ಶ್ರೀಮಂಗಲ 49.20, ಪೊನ್ನಂಪೇಟೆ 35, ಬಾಳೆಲೆ 33.07, ಸೋಮವಾರಪೇಟೆ 24, ಶನಿವಾರಸಂತೆ 25, ಶಾಂತಳ್ಳಿ 37, ಕೊಡ್ಲಿಪೇಟೆ 28.80, ಕುಶಾಲನಗರ 31, ಸುಂಟಿಕೊಪ್ಪ 42 ಮಿ.ಮೀ.ಮಳೆಯಾಗಿದೆ.ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಮಂಗಳವಾರದ ನೀರಿನ ಮಟ್ಟ 2835.21 ಅಡಿಗಳು. ನೀರಿನ ಒಳಹರಿವು 651 ಕ್ಯುಸೆಕ್. ಹೊರ ಹರಿವು ನದಿಗೆ 200 ಕ್ಯುಸೆಕ್.