ರೈಲು ಮಾರ್ಗದ ಹೋರಾಟಕ್ಕೆ ವ್ಯಾಪಕ ಬೆಂಬಲ

| Published : Nov 13 2024, 12:45 AM IST

ಸಾರಾಂಶ

ರಾಮದುರ್ಗ: ಲೋಕಾಪುರ-ರಾಮದುರ್ಗ-ಧಾರವಾಡ ರೈಲು ಮಾರ್ಗಕ್ಕೆ ಒತ್ತಾಯಿಸಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಲೋಕಾಪುರ-ರಾಮದುರ್ಗ-ಧಾರವಾಡ ರೈಲು ಮಾರ್ಗಕ್ಕೆ ಒತ್ತಾಯಿಸಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬೆಳಗ್ಗೆ 11 ಗಂಟೆಗೆ ನಗರದ ವೇಂಕಟೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತೇರಬಜಾರ, ಹಳೆಪೊಲೀಸ್ ಠಾಣೆ, ಹುತಾತ್ಮ ವೃತ್ತ, ಜುನಿಪೇಟೆ, ಅಂಬೇಡ್ಕರ್ ಮಾರ್ಗ, ಹಳೆಬಸ್ ನಿಲ್ದಾಣ, ಬದಾಮಿ ರಸ್ತೆ ಮುಖಾಂತರ ಮಿನಿವಿಧಾನಸೌಧ ಎದುರು ಸಮಾವಗೊಂಡಿತು. ಮೆರವಣಿಗೆಯುದ್ದಕ್ಕೂ ರಾಮದುರ್ಗಕ್ಕೆ ರೈಲು ಮಾರ್ಗ ಬೇಕು ಎಂಬ ಘೋಷಣೆಗಳು ಮೊಳಗಿದವು.

ಹೋರಾಟ ಬೆಂಬಲಿಸಿ ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗ್ರಾಮೀಣ ಪ್ರದೇಶದಿಂದ ಜನರು ಸಹ ಆಗಮಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಮಿನಿವಿಧಾನಸೌಧ ಎದುರು ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಾಗಲಕೋಟೆಯ ರೈಲ್ವೆ ಹೋರಾಟಗಾರ ಕುತುಬುದ್ಧೀನ್ ಖಾಜಿ, ಲೋಕಾಪುರ-ರಾಮದುರ್ಗ-ಸವದತ್ತಿ ಮಾರ್ಗವಾಗಿ ರೈಲು ಮಾರ್ಗದ ಹೋರಾಟಕ್ಕೆ ರಾಮದುರ್ಗದಲ್ಲಿ ಜನರು ನೀಡಿರುವ ಬೆಂಬಲ ಇದೇ ರೀತಿ ಮುಂದೆಯೂ ದೊರಕಿದರೆ ಆದಷ್ಟು ಶೀಘ್ರ ರೈಲು ಮಾರ್ಗದ ಕಾರ್ಯ ಆರಂಭವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ರೈಲ್ವೆ ಸಂಪರ್ಕ ಹೊಂದಲು ಎಲ್ಲ ರೀತಿಯಿಂದಲೂ ಅರ್ಹತೆ ಹೊಂದಿದ್ದು, ವಾಣಿಜ್ಯ ಸಮೀಕ್ಷೆ, ಪ್ರಯಾಣಿಕರ ಸಮೀಕ್ಷೆ ಮತ್ತು ತಾಂತ್ರಿಕ ಸಮೀಕ್ಷೆಗಳಲ್ಲಿ ಯೋಗ್ಯವಾಗಿದೆ. ಈ ಬೇಡಿಕೆ ನಿರಾಕರಿಸಲು ಯಾವುದೇ ಕಾರಣಗಳಿಲ್ಲ. ಈ ಹೋರಾಟಕ್ಕೆ ರಾಮದುರ್ಗದ ಜನಪ್ರತಿನಿಧಿಗಳಿಗೆ ಅಗತ್ಯವಾದ ಮಾಹಿತಿ ನೀಡಲು ನಾನು ಸಿದ್ಧನಿದ್ದೇನೆ. ಅಧಿಕಾರಿಗಳು, ಜನಪ್ರತಿನಿಧಿಗಳ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಕಾರಣ ಜನಪ್ರತಿನಿಧಿಗಳಿಗೆ ಸರಿಯಾದ ಮತ್ತು ಸಮರ್ಪಕ ಮಾಹಿತಿ ನೀಡುವ ಕೆಲಸವನ್ನು ಹೋರಾಟಗಾರರು ಮಾಡಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ, ಬಟಕುರ್ಕಿಯ ಬಸವಲಿಂಗ ಸ್ವಾಮೀಜಿ, ಹರ್ಲಾಪುರದ ಅಭಿನವ ರೇಣುಕಶಿವಯೋಗಿಗಳು, ಮೌಲಾನಾ ಮುಫ್ತೀಜಹೂರಾ ಹಾಜಿ, ಮೌಲಾನಾ ಇಮಾಮ್‌ ಹುಸೇನ್ ಮಾತನಾಡಿ, ಸರ್ಕಾರದ ಕಣ್ತೆರೆಸಲು ಮತ್ತು ಬೇಡಿಕೆ ಈಡೇರಿಕೆಗೆ ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ಕೆಲಸಗಳಾಗುತ್ತವೆ. ಜನಪರ, ಪಕ್ಷಾತೀತ, ಜ್ಯಾತ್ಯತೀತ ಹೋರಾಟಕ್ಕೆ ತಾಲೂಕಿನ ಧರ್ಮಗುರುಗಳ ಬೆಂಬಲ ಸದಾ ಇರುತ್ತದೆ, ಯಾವುದೇ ಯಾವತ್ತಿಗೂ ಇದ್ದು ಜನರೊಂದಿಗೆ ಎಲ್ಲ ಹೋರಾಟಕ್ಕೆ ಬರುವದಾಗಿ ಭರವಸೆ ನೀಡಿದರು.

ವೀರಕ್ತಮಠ ಟ್ರಷ್ಠ ಅಧ್ಯಕ್ಷ ಪ್ರದೀಪಕುಮಾರ ಪಟ್ಟಣ, ಶ್ರೀ ಧನಲಕ್ಷ್ಮೀ ಶುಗರ್ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಬಿಜೆಪಿ ಮಂಡಲ ಅಧ್ಯಕ್ಷ ಡಾ. ಕೆ. ವಿ. ಪಾಟೀಲ, ಬಸೀರಹ್ಮದ ಬೈರೆಕದಾರ ಮಾತನಾಡಿದರು.

ಪ್ರತಿಭಟನೆಯಲ್ಲಿ ರೈಲ್ವೆ ಹೋರಾಟ ಕ್ರೀಯಾ ಸಮಿತಿಯ ಸದಸ್ಯರಾದ ಮಹ್ಮದಶಫಿ ಬೆಣ್ಣಿ, ಡಾ. ಎಂ. ಕೆ. ಯಾದವಾಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಬಿ. ರಂಗನಗೌಡ್ರ, ದಲಿತ ಮುಖಂಡ ಬಿ. ಆರ್. ದೊಡಮನಿ, ಪರುತಗೌಡ ಪಾಟೀಲ, ಸುಭಾಷ ಘೋಡಕೆ ಸೇರಿದಂತೆ ಹಲವರು ನೇತೃತ್ವ ವಹಿಸಿದ್ದರು. ಪ್ರತಿಭಟನಾಕಾರರು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.

ವೆಂಕಟೇಶ ಹಿರೇರಡ್ಡಿ ಸ್ವಾಗತಿಸಿದರು. ಗೈಬು ಜೈನೆಖಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ನಾಯ್ಕ, ಪವನ ದೇಶಪಾಂಡೆ ನಿರೂಪಿಸಿದರು.ಸಿಎಂ ಉತ್ತರ ಕರ್ನಾಟಕದ ಋಣ ತೀರಿಸಲು ಈ ಯೋಜನೆಗೆ ಭೂಮಿ ಕೊಡಿ: ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ೨೦೧೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ನಿಮ್ಮ ಕ್ಷೇತ್ರದ ಮತದಾರ ನಿಮ್ಮನ್ನು ತೀರಸ್ಕರಿಸಿದ್ದ ಆಸಂದರ್ಭದಲ್ಲಿ ನಿಮಗೆ ರಾಜಕೀಯ ಪುನರ್‌ಜನ್ಮ ನೀಡಿದ ಉತ್ತರ ಕರ್ನಾಟಕ (ಬದಾಮಿ) ಜನರ ಋಣ ತೀರಿಸಲು ಲೋಕಾಪೂರ , ರಾಮದುರ್ಗ ಧಾರವಾಡ ರೈಲ್ವೆ ಮಾರ್ಗಕ್ಕೆ ಭೂಮಿ ನೀಡಿ ಈ ಜನರ ಋಣ ತೀರಿಸಲು ಉತ್ತಮ ಅವಕಾಶವಿದೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಭೂಮಿ ನೀಡುವದಾಗಿ ತಿಳಿಸಿದರೆ ನಮ್ಮ ಈ ರೈಲ್ವೆ ಮಾರ್ಗ ಆಗುವದರಲ್ಲಿ ಸಂಶಯವಿಲ್ಲ.

ಕುತುಬುದ್ದೀನ್ ಖಾಜಿ, ರೈಲ್ವೆ ಹೋರಾಟಗಾರ