ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಜಿಲ್ಲಾಡಳಿತ ಭವನ ಎದುರು ಕೃಷ್ಣಾ ಮೇಲ್ದಂಡೆ ಯೋಜನಾ ಬಾಧಿತ ಸಂತ್ರಸ್ತರು ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.ಕಳೆದ 6 ದಶಕಗಳಿಂದ ನಡೆಯುತ್ತಿರುವ ಈ ಯೋಜನೆಯು ಇಲ್ಲಿವರೆಗೂ ಪೂರ್ಣಗೊಂಡಿಲ್ಲ. ಅದು ರಾಜಕೀಯ ಇಚ್ಛಾಶಕ್ತಿಯ ಕೊರತೆಯಾಗಿದ್ದು, ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯವಿದ್ದು, ಎಲ್ಲ ಸರ್ಕಾರಗಳು ಯುಕೆಪಿ ಯೋಜನೆಗಳ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ ಎಂಬ ಆರೋಪ ಹೋರಾಟದಲ್ಲಿ ಬಲವಾಗಿ ಕೇಳಿಬರುತ್ತಿದೆ.ಅಧಿವೇಶನದಲ್ಲಿ ಯುಕೆಪಿ ಯೋಜನೆಗಳ ಬಗ್ಗೆ ಸಮಗ್ರ ಚರ್ಚೆ: ಪಿ.ಎಚ್. ಪೂಜಾರ
ಬೆಳಗಾವಿ ಅಧಿವೇಶನದಲ್ಲಿ ಯುಕೆಪಿ ಯೋಜನೆಗಳ ಬಗ್ಗೆ ಸಮಗ್ರ ಚರ್ಚೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಭರವಸೆ ನೀಡಿದರು.ನವನಗರದ ಜಿಲ್ಲಾಡಳಿತ ಭವನ ಎದುರು ಕೃಷ್ಣಾ ಮೇಲ್ದಂಡೆ ಯೋಜನಾ ಬಾಧಿತ ಸಂತ್ರಸ್ತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಸಂತ್ರಸ್ತರ ಗೋಳಾಟ ಹೇಳ ತೀರದಾಗಿದ್ದು, ನಾನು ಶಾಸಕನಾಗಿದ್ದಾಗ ಬಾಗಲಕೋಟೆ ಪುನರುತ್ಥಾನ ಹೋರಾಟ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದು, ಆಗ ಸಾಕಷ್ಟು ಹೋರಾಟಗಳನ್ನು ಮಾಡಿ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಯತ್ನ ಮಾಡಿದ್ದೇನೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಹೋರಾಟವು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿದ್ದು, ಹೋರಾಟದ ಮೂಲಕ ಸರ್ಕಾರವನ್ನು ಎಚ್ಚರಿಸುವಂತ ಕೆಲಸ ಮಾಡಬೇಕಾಗಿದೆ. ಎಲ್ಲ ಸರ್ಕಾರಗಳು ಕೆಲಸಗಳು ಮಾಡಿದ್ದರೂ ಇನ್ನೂವರೆಗೂ ಯೋಜನೆ ಪೂರ್ಣಗೊಂಡಿಲ್ಲ. ಅದು ನಮ್ಮ ದೌಭಾಗ್ರ್ಯ ಎಂದರು.ಬಿಜೆಪಿ ಮುಖಂಡ ಡಾ.ಶೇಖರ ಮಾನೆ ಮಾತನಾಡಿ, ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಕೃಷ್ಣೆಯ ಬಗ್ಗೆ ಧ್ವನಿ ಎತ್ತದೆ ಕಾಲಹರಣ ಮಾಡಿದ್ದಾರೆ. ಎಲ್ಲರೂ ರಾಜೀನಾಮೆ ಕೊಟ್ಟು ನೋಡಿ ಆಗ ಸರ್ಕಾರ ಏನು ಮಾಡುತ್ತದೆ ನೋಡೋಣ ಎಂದು ಸವಾಲು ಹಾಕಿದರು.ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ನಡೆದ 2ನೇ ದಿನದ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಭಾಗವಹಿಸುವ ಮೂಲಕ ಬೆಂಬಲ ಸೂಚಿಸಿದರು.ಕೃಷ್ಣಾ ಮೇಲ್ದಂಡೆ ಸಂತ್ರಸ್ತರ ಹೋರಾಟ ಸಮಿತಿಯು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಬಾಗಲಕೋಟೆ ವಕೀಲರ ಸಂಘದ ಆಡಳಿತ ಮಂಡಳಿ ಹಾಗೂ ಸಂಘದ ಸರ್ವಸದಸ್ಯರು ಇಂದು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.ರವಿ ಕುಮಟಗಿ, ಮಲ್ಲಿಕಾರ್ಜುನ ಚರಂತಿಮಠ, ಕುಮಾರ ಗಿರಿಜಾ, ಅರುಣ ಕಾರಜೋಳ ಮಾತನಾಡಿದರು. ಸತ್ಯಾಗ್ರಹದಲ್ಲಿ ಸಮಿತಿಯ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂತರಗೊಂಡ, ಚಂದ್ರಕಾಂತ ಕೇಸನೂರ,ಸಂಗನಗೌಡ ಗೌಡ ರ, ಶೈಲು ಅಂಗಡಿ ಇದ್ದರು.ಕೃಷ್ಣ ಮೇಲ್ದಂಡೆ ಯೋಜನೆ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ: ಮಾಜಿ ಸಚಿವ ನಿರಾಣಿಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ರಾಜ್ಯದ ಬೃಹತ್ ನೀರಾವರಿ ಯೋಜನೆಯಾಗಿದೆ.ಆರು ದಶಕಗಳಾದರೂ ಯೋಜನೆ ಮುಕ್ತಾಯವಾಗಿಲ್ಲ ಎನ್ನೋದು ವಿಪರ್ಯಾಸ. ಕೃಷ್ಣಾ ತೀರದ ವ್ಯಾಪ್ತಿಗೆ ಬರುವ ರೈತರಲ್ಲಿ ನಾನು ಒಬ್ಬ ರೈತ ಕುಟುಂಬದವನಾಗಿದ್ದು, ಯೋಜನೆ ತ್ವರಿತಗತಿಯಲ್ಲಿ ಮುಗಿಯಬೇಕೆಂದು ನಾನು ಕೂಡ ಆಗ್ರಹ ಮಾಡುತ್ತೇನೆ. ಪಕ್ಷದ ಕಾರ್ಯ ನಿಮಿತ್ತ ರಾಜ್ಯ ಪ್ರವಾಸದಲ್ಲಿರುವುದರಿಂದ ಹೋರಾಟದ ಸ್ಥಳಕ್ಕೆ ಬಂದು ಬೆಂಬಲ ಕೊಡಲು ಸದ್ಯಕ್ಕೆ ಆಗುತ್ತಿಲ್ಲ. ಮುಂದೆ ನಾನು ಕೂಡ ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸುತ್ತೇನೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಿಂದೆ ವಿಜಯಪುರದಲ್ಲಿ ನೀಡಿದ 6ನೇ ಗ್ಯಾರಂಟಿ ನೀರಾವರಿ ಗ್ಯಾರಂಟಿ ಆಶ್ವಾಸನೆಯಂತೆ ಸಿಎಂ, ಡಿಸಿಎಂ ಕೃಷ್ಣಾ ಮೇಲ್ದಂಡೆ ಯೋಜನೆ ಮುಕ್ತಾಯಗೊಳಿಸಲಿ ಎಂದು ಆಗ್ರಹಿಸಿದರು.
ಮುಳುಗಡೆ ಸಂತ್ರಸ್ತರು ಪರಿಹಾರ ಕೇಳಿ ದಾಖಲಿಸಿದ ಸುಮಾರು 19 ಸಾವಿರಕ್ಕೂ ಅಧಿಕ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ 6 ಹೆಚ್ಚುವರಿ ವಿಶೇಷ ಜಿಲ್ಲಾ ನ್ಯಾಯಾಲಯಗಳನ್ನು ಸ್ಥಾಪಿಸಲು ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ ಶಿಫಾರಸ್ ಮಾಡಿದೆ. ಆದರೂ ಸರ್ಕಾರದ ಹಣಕಾಸು ಇಲಾಖೆ ಅನುಮೋದನೆ ನೀಡುತ್ತಿಲ್ಲ ಎಂದಾದರೇ ಸಂತ್ರಸ್ತರ ಕುರಿತು ನ್ಯಾಯಾಂಗ ಇಲಾಖೆ/ ನ್ಯಾಯಾಧೀಶರಿಗೆ ಇರುವ ಕಳಕಳಿ ಪ್ರಜೆಗಳಿಂದ ಆಯ್ಕೆಯಾದ ಪ್ರಜಾ ಸರ್ಕಾರಕ್ಕೆ ಇಲ್ಲ ಎನ್ನುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಲ್ಲದೇ ಮತ್ತೇನು?. ಆಳುವ ಸರ್ಕಾರಗಳಿಗೆ ನಾಚಿಕೆ ಬರಬೇಕು.-ರಮೇಶ್ ಆರ್.ಬದ್ನೂರ, ಅಧ್ಯಕ್ಷರು, ವಕೀಲರ ಸಂಘ ಬಾಗಲಕೋಟೆ.