ದಾಬಸ್‍ಪೇಟೆ: ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವ ಘಟನೆ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಂಪುರ ಹೋಬಳಿಯ ಬೈಲಪ್ಪನಪಾಳ್ಯ ಗ್ರಾಮದ ಪುನೀತ್ ಕುಮಾರ್ ಹಾಗೂ ಪವಿತ್ರಾ ವಿವಾಹ 5 ವರ್ಷಗಳ ಹಿಂದೆ ನಡೆದಿತ್ತು. ಪವಿತ್ರಾ ಪೋಷಕರು ಮದುವೆ ವೇಳೆ ಮಗಳಿಗೆ 200 ಗ್ರಾಂ ಚಿನ್ನಾಭರಣ ನೀಡಿ ಅದ್ಧೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಮದುವೆಯಾದ ಒಂದು ವರ್ಷ ದಂಪತಿ ಅನ್ಯೋನ್ಯವಾಗಿದ್ದರು. ನಂತರದ ದಿನಗಳಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳ ಶುರುವಾಗಿದ್ದು, ಪುನೀತ್ ಪತ್ನಿ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದ ಎಂದು ಪವಿತ್ರ ತನ್ನ ಪತಿಯ ವಿರುದ್ಧ ಆರೋಪಿಸಿ ದೂರು ನೀಡಿದ್ದಾರೆ.ಈ ಮಧ್ಯೆ ಪುನೀತ್ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದು, ಇದೇ ಕಾರಣಕ್ಕೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದ್ದು, ಪತಿಯ ಕಿರುಕುಳ ತಾಳಲಾರದೆ ಪವಿತ್ರಾ ಕಳೆದ ನಾಲ್ಕು ವರ್ಷಗಳಿಂದ ದಾಬಸ್‍ಪೇಟೆಯಲ್ಲಿರುವ ತನ್ನ ಅಜ್ಜಿ-ತಾತನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ನಡುವೆ ಪುನೀತ್ ಪತ್ನಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದಾನೆ ಎನ್ನಲಾಗಿದೆ.
ಪವಿತ್ರಾ ಅವರ 200 ಗ್ರಾಂ ಚಿನ್ನಾಭರಣ ಪತಿಯ ಮನೆಯಲ್ಲೇ ಇವೆ. ಸಮಾರಂಭಗಳಿಗೆ ಹೋಗಲು ಒಡವೆ ಕೇಳಿದಾಗ ಪುನೀತ್ ಮತ್ತು ಆತನ ಕುಟುಂಬಸ್ಥರು ಒಡವೆ ನೀಡದೆ ಗಲಾಟೆ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಪವಿತ್ರಾ ದೂರಿದ್ದಾರೆ. ಈ ಬಗ್ಗೆ ದಾಬಸ್‍ಪೇಟೆ ಪೊಲೀಸರಿಗೆ ದೂರು ನೀಡಿದ್ದರೂ ಸ್ಪಂದಿಸದ ಕಾರಣ, ಅನಾಥೆಯಾಗಿರುವ ತನಗೆ ನ್ಯಾಯ ಕೊಡಿಸುವಂತೆ ಪವಿತ್ರಾ ನೆಲಮಂಗಲ ಡಿವೈಎಸ್ಪಿ ಕಚೇರಿಮೆಟ್ಟಿಲೇರಿದ್ದಾರೆ. ಡಿವೈಎಸ್ ಪಿ ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.