ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ (ಉಡುಪಿ)
ಸ್ಲೋಪಾಯಿಸನ್ ನೀಡಿ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆಗೈದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದೆ.ಬಾಲಕೃಷ್ಣ ಪೂಜಾರಿ (44) ಕೊಲೆಯಾದ ದುರ್ದೈವಿ. ಅವರ ಪತ್ನಿ ಪ್ರತಿಮಾ ಹಾಗೂ ಕಾರ್ಕಳದ ದಿಲೀಪ್ ಹೆಗ್ಡೆ ಕೊಲೆ ಆರೋಪಿಗಳಾಗಿದ್ದು, ಅವರನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ. ಕೊರೋನಾ ವೇಳೆ ಮುಂಬೈನಿಂದ ಊರಿಗೆ ಬಂದಿದ್ದ ಬಾಲಕೃಷ್ಣ ದಂಪತಿ, ನಿಟ್ಟೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು.
ಪ್ರತಿಮಾ ಹಾಗೂ ಬಾಲಕೃಷ್ಣ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ವೈರಲ್ ಆಗಿದ್ದರು. ಆದರೆ ಪ್ರತಿಮಾಳಿಗೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳದ ಬಾಲಾಜಿ ಹೋಟೆಲ್ ಮಾಲಿಕನ ಪುತ್ರ ದಿಲೀಪ್ ಹೆಗ್ಡೆ (28) ಪರಿಚಯವಾಗಿ ಪ್ರೇಮಾಂಕುರವಾಗಿತ್ತು. 2 ತಿಂಗಳ ಹಿಂದೆ ಪತ್ನಿ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ ಪ್ರೇಮದ ವಿಷಯ ತಿಳಿದ ಬಾಲಕೃಷ್ಣ ಪೂಜಾರಿ, ಅಜೆಕಾರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ದಿಲೀಪ್ ಹೆಗ್ಡೆ ಹಾಗೂ ಪ್ರತಿಮಾ ಅವರನ್ನು ಕರೆಸಿ ಮುಚ್ಚಳಿಕೆ ಬರೆಸಿದ್ದರು.ಆದರೆ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಲೆ ಮಾಡಬೇಕೆಂದು ಯೋಜನೆ ರೂಪಿಸಿದ ಪ್ರತಿಮಾ, ‘ರೋಸಿಯಂ’ ಎಂಬ ವಿಷ ಪದಾರ್ಥವನ್ನು ಆಹಾರದಲ್ಲಿ ಬೆರೆಸಿ 20 ದಿನಗಳಿಂದ ನೀಡುತ್ತಿದ್ದಳು. ಇದರಿಂದಾಗಿ ಬಾಲಕೃಷ್ಣ ಪೂಜಾರಿ, ಕಾಮಾಲೆ ಸೇರಿ ಅನೇಕ ಅನಾರೋಗ್ಯಕ್ಕೀಡಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅ.20 ಮುಂಜಾನೆ ಬಾಲಕೃಷ್ಣ ಮೃತಪಟ್ಟಿದ್ದರು. ಅ.20ರಂದು ಪ್ರತಿಮಾ ಆಕೆ ಪ್ರಿಯಕರರನ್ನು ಮನೆಗೆ ಕರೆದಿದ್ದು, ಮುಂಜಾನೆ ತಲೆದಿಂಬಿನಿಂದ ಒತ್ತಿಹಿಡಿದು ಉಸಿರುಗಟ್ಟಿಸಿ ಪತಿಯನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ----------ಪ್ರತಿಮಾ ತನ್ನ ಅಣ್ಣನ ಬಳಿ ತನ್ನ ಪತಿಯನ್ನು ತಾನೇ ಕೊಲೆ ಮಾಡಿದ್ದು ಎಂದು ಗುರುವಾರ ಮಾಹಿತಿ ನೀಡಿದ್ದಾಳೆ. ಆತ ತಡಮಾಡದೆ ತಂಗಿಯನ್ನು ನೇರವಾಗಿ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.