ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೃಷ್ಣಾನದಿ ನೀರಿನಲ್ಲಿ ಮುಳುಗಿಸಿ ಪತ್ನಿಯೇ ಹತ್ಯೆ ಮಾಡಿದ ಘಟನೆ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಡೆದಿದ್ದು, ಘಟನೆ 11 ತಿಂಗಳ ಬಳಿಕ ಬೆಳಕಿಗೆ ಬಂದಿದೆ.ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ಇಟ್ನಾಳ ಗ್ರಾಮದ ಮಲ್ಲಪ್ಪ ಕಂಬಾರ ಹತ್ಯೆಗೀಡಾದ ವ್ಯಕ್ತಿ. ಪ್ರಕರಣ ಸಂಬಂಧ ಮಲ್ಲಪ್ಪನ ಪತ್ನಿ ದಾನವ್ವ ಕಂಬಾರ, ಪ್ರಕಾಶ ಉರ್ಫ್ ಶಿವಬಸವ ಬೆನ್ನಾಳಿ ಮತ್ತು ರಾಮಪ್ಪ ಮಾದರ ಎಂಬುವವರನ್ನು ಬಂಧಿಸಲಾಗಿದೆ ಎಂದು ಎಂದು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಅಂದು ನಡೆದಿದ್ದೇನು?:
2023ರ ಡಿಸೆಂಬರ್ 27ರಂದು ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಹಾರೂಗೇರಿ ಪೊಲೀಸರು ಇದೊಂದು ಸಹಜ ಸಾವು ಎಂದು ಪ್ರಕರಣ ದಾಖಸಿಕೊಂಡಿದ್ದರು. ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ಸುತ್ತಮುತ್ತಲಿನ ಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ವಿಚಾರಿಸಿದರೂ ಆತನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆದರೆ, ಇಟ್ನಾಳ ಗ್ರಾಮದ ಮಲ್ಲಪ್ಪ ಕಂಬಾರ ಕಾಣೆಯಾಗಿದ್ದರೂ ಈತನ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿರಲಿಲ್ಲ.ಈ ಸಂಶಯದ ಮೇಲೆ ಪೊಲೀಸರು ಆಕೆಯನ್ನು ವಿಚಾರಿಸಿದಾಗ ಸಮರ್ಪಕ ಮಾಹಿತಿ ನೀಡಲಿಲ್ಲ. ಒಂದೂವರೆ ವರ್ಷದ ಹಿಂದೆ ಮಕ್ಕಳೊಂದಿಗೆ ದಾನವ್ವ ಪತಿಯ ಮನೆ ತೊರೆದು ಮಕ್ಕಳೊಂದಿಗೆ ಬೇರೆ ಕಡೆ ತೆರಳಿದ್ದಳು. ಕೆಲ ದಿನಗಳ ಬಳಿಕ ಮತ್ತೆ ಮನೆಗೆ ಮಕ್ಕಳೊಂದಿಗೆ ಮರಳಿದ್ದಳು. ಅದೇ ಗ್ರಾಮದ ಪ್ರಕಾಶ ಅಲಿಯಾಸ್ ಶಿವಬಸವ ಬೆನ್ನಾಳಿ ಜೊತೆಗೆ ಅನೈತಿಕ ಸಂಬಂಧ ಹೊಂದಿರುವುದು ಗೊತ್ತಾಗಿ ಪತಿ ಪ್ರಕಾಶ ಮಲ್ಲಪ್ಪನಿಗೆ ಎಚ್ಚರಿಕೆ ನೀಡಿದ್ದ. ತನ್ನ ಕಾರ್ಯಕ್ಕೆ ಅಡ್ಡಿಯಾಗಿದ್ದಾನೆಂದು ಪ್ರಕಾಶ ಹಾಗೂ ಆತನ ಸ್ನೇಹಿತ ರಾಮಪ್ಪ ಮಾದರ ಸೇರಿ ಮಲ್ಲಪ್ಪನನ್ನು ಕೃಷ್ಣಾ ನದಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದರು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಮಹಿಳೆ ಪತಿಯನ್ನು ಕೃಷ್ಣಾ ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಪ್ರಕರಣವನ್ನು ಹಾರೂಗೇರಿ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ಹತ್ಯೆಗೀಡಾದ ವ್ಯಕ್ತಿಯ ಪತ್ನಿ ಸೇರಿ ಮೂವರನ್ನು ಬಂಧಿಸಲಾಗಿದೆ.
-ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ