ಸಾರಾಂಶ
ಬೆಂಗಳೂರು : ಕೌಟುಂಬಿಕ ವಿಚಾರಕ್ಕೆ ತವರು ಮನೆ ಸೇರಿದ್ದ ಪತ್ನಿಯನ್ನು ಹಾಡಗಲೇ ಬರ್ಬರವಾಗಿ ಕೊಲೆ ಮಾಡಿ ಕೋಲಾರದ ಚಿಕ್ಕಮ್ಮನ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯು ಪೊಲೀಸರ ಬಂಧನದ ಭೀತಿಯಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ 12 ಅಡಿ ಎತ್ತರದ ಕಟ್ಟಡದ ಮಹಡಿಯಿಂದ ಜಿಗಿದು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿನ ಸಿದ್ದಾಪುರ ನಿವಾಸಿ ತಬ್ರೇಜ್ ಪಾಷಾ (37) ಮೃತ ಆರೋಪಿ. ಆ.2ರಂದು ಬೆಳಗ್ಗೆ ಸುಮಾರು 8.30ಕ್ಕೆ ಚಾಮರಾಜಪೇಟೆ ಎಂ.ಡಿ.ಬ್ಲಾಕ್‌ನ ಅತ್ತೆ ಮನೆಗೆ ತೆರಳಿ ಅನಾರೋಗ್ಯಪೀಡಿತ ಅತ್ತೆಯ ಎದುರೇ ಪತ್ನಿ ಸೈಯಿದಾ ಫಾಜೀಯಾ ಫಾತೀಮಾ(34)ಗೆ ಚಾಕುವಿನಿಂದ ಹಲವು ಬಾರಿ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ಚಾಮರಾಪೇಟೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದರು.
ಚಿಕ್ಕಮ್ಮನ ಮನೆಯಲ್ಲಿ ತಲೆಮರೆಸಿಕೊಂಡಿದ್ದ:
ಮತ್ತೊಂದೆಡೆ ಆರೋಪಿ ಪತ್ನಿ ಕೊಲೆಗೈದ ಬಳಿಕ ಕೋಲಾರಕ್ಕೆ ತೆರಳಿ ಮೂರು ದಿನ ಮಸೀದಿವೊಂದರಲ್ಲಿ ಆಶ್ರಯ ಪಡೆದಿದ್ದ. ಬಳಿಕ ಕೋಲಾರದ ಹೊರವಲಯದ ಜೂಹಳ್ಳಿಯ ಚಿಕ್ಕಮ್ಮನ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಈ ನಡುವೆ ಚಾಮರಾಜಪೇಟೆ ಠಾಣೆ ಪೊಲೀಸರು, ಆರೋಪಿ ಕೋಲಾರದಲ್ಲಿರುವ ಸುಳಿವು ಆಧರಿಸಿ ಕೋಲಾರಕ್ಕೆ ತೆರಳಿ ಹುಡುಕಾಟ ನಡೆಸುತ್ತಿದ್ದರು. ಮಂಗಳವಾರ ಪೊಲೀಸರು ತನ್ನನ್ನು ಹುಡುಕಿಕೊಂಡು ಕೋಲಾರಕ್ಕೆ ಬಂದಿರುವ ವಿಚಾರ ತಿಳಿದ ಆರೋಪಿ ತಬ್ರೇಜ್ ಪಾಷಾ, ಬಂಧನದ ಭೀತಿಯಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ 12 ಅಡಿ ಎತ್ತರದ ಕಟ್ಟಡದ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ.
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ತಬ್ರೇಜ್ ಪಾಷಾನನ್ನು ಸ್ಥಳೀಯರು ಕೂಡಲೇ ಆತನನ್ನು ಸಮೀಪದ ಕರೆದೊಯ್ದಿದ್ದಾರೆ. ಆದರೆ, ಗಂಭೀರ ಗಾಯ ಹಾಗೂ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಈ ಸಂಬಂಧ ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನನಗೆ ಬದುಕಲು ಇಷ್ಟವಿಲ್ಲ: ಆರೋಪಿ ಸೆಲ್ಫಿ ವಿಡಿಯೋ
ಪತ್ನಿಯ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ತಬ್ರೇಜ್ ಪಾಷಾ, ಉರ್ದುವಿನಲ್ಲಿ 7 ನಿಮಿಷಗಳ ಸೆಲ್ಫಿ ವಿಡಿಯೋ ಮಾಡಿ ಪತ್ನಿ ಕೊಲೆಗೆ ಕಾರಣ ಸೇರಿದಂತೆ ಹಲವು ವಿಚಾರಗಳನ್ನು ಮಾತನಾಡಿದ್ದಾನೆ. ಸೈಯಿದಾ ಫಾಜೀಯಾ ಫಾತೀಮಾಳನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದೆ. ಆದರೆ ಪತ್ನಿ ಮತ್ತು ಆಕೆಯ ಮನೆಯವರು ನನಗೆ ಸಾಕಷ್ಟು ಅವಮಾನ ಮಾಡಿದರು. ಪತ್ನಿ ಕೂಡ ನನ್ನನ್ನು ತೊರೆದು ತವರು ಮನೆ ಸೇರಿಕೊಂಡಿದ್ದಳು. ಮನೆಗೆ ವಾಪಾಸ್ ಬರುವಂತೆ ಹಲವು ಬಾರಿ ಕೇಳಿಕೊಂಡೂ ಆಕೆ ಬರಲಿಲ್ಲ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಸಹ ಆಕೆ ತೆಗೆದುಕೊಂಡು ಹೋಗಿದ್ದಳು. ನಾನು ಮಾಡುತ್ತಿರುವುದು ತಪ್ಪು ಎಂಬುದು ನನಗೆ ಗೊತ್ತು. ಆದರೂ ನನಗೆ ಬದುಕಲು ಇಷ್ಟವಿಲ್ಲ ಎಂದು ತಬ್ರೇಜ್ ಪಾಷಾ ಆ ಸೆಲ್ಫಿ ವಿಡಿಯೋದಲ್ಲಿ ತಿಳಿಸಿದ್ದಾನೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))