ಸಾರಾಂಶ
ಏ.೭ರಂದು ಕನ್ನಡಪ್ರಭದಲ್ಲಿ ನಿದ್ರೆ ಮಾತ್ರೆ ಕೊಟ್ಟು ಪತಿಗೆ ಬೆಂಕಿ ಹಚ್ಚಿದಾಳ ಪತ್ನಿ ? ಎಂದು ಸುದ್ದಿ ಪ್ರಕಟವಾಗಿತ್ತು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಮೂಡುಗೂರು ಗ್ರಾಮದಲ್ಲಿ ಗೃಹಿಣಿಯೊಬ್ಬಳು ತಾಳಿ ಕಟ್ಟಿದ ಗಂಡನನ್ನೇ ನಿದ್ರೆ ಮಾತ್ರೆ ಕೊಟ್ಟ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ತೆರಕಣಾಂಬಿ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಮೂಡುಗೂರು ಗ್ರಾಮದ ಸಿದ್ದೇಶ್‌ರ ಪತ್ನಿ ಸವಿತ ಹಾಗೂ ಸಿದ್ದೇಶ್ ಷಡ್ಡಕ ಸಿದ್ದುರನ್ನು ಪೊಲೀಸರು ಬಂಧಿಸಿದ್ದು, ಗುರುವಾರ ಸ್ಥಳ ಮಹಜರು ನಡೆಸಿದ್ದಾರೆ.ಏನಿದು ಪ್ರಕರಣ?:
ಮೂಡುಗೂರು ಗ್ರಾಮದ ಸಿದ್ದೇಶನ ಪತ್ನಿ ಸವಿತ ಹಾಗೂ ಸಿದ್ದೇಶನ ಷಡ್ಡಕ ಸಿದ್ದುಗೂ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಸಿದ್ದೇಶನಿಗೆ ಆರೋಪಿಗಳಾದ ಸವಿತ ಹಾಗೂ ಸಿದ್ದು ಜೊತೆಗೂಡಿ ಕಳೆದ ಕಳೆದ ವಾರ ಸಿದ್ದೇಶನಿಗೆ ರಾತ್ರಿ ಊಟಕ್ಕೆ ನಿದ್ರೆ ಮಾತ್ರೆ ಹಾಕಿ ಮಧ್ಯರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸಿದ್ದೇಶನ ಪತ್ನಿ ಸವಿತ ಮೊಬೈಲ್ ಬ್ಲಾಸ್ಟ್ ಆಯ್ತು ಎಂದು ನೆರೆಹೊರೆ ಜನರಿಗೆ ತಿಳಿಸಿದ್ದಾಳೆ. ತೆರಕಣಾಂಬಿ ಪೊಲೀಸರು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.ಆದರೆ, ಮೃತ ಸಿದ್ದೇಶನ ತಾಯಿ ಮಹದೇವಮ್ಮ ತೆರಕಣಾಂಬಿ ಠಾಣೆಗೆ ತೆರಳಿ ಸೊಸೆ ಸವಿತ ಹಾಗೂ ಸಿದ್ದು ಮೇಲೆ ಅನುಮಾನವಿದೆ. ನನ್ನ ಮಗನ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಸವಿತ, ಸಿದ್ದುನನ್ನು ಬಂಧಿಸಿ ವಿಚಾರಿಸಿದಾಗ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಸಂಶಯಾಸ್ದದ ಪ್ರಕರಣ ಇದೀಗ ಕೊಲೆ ಪ್ರಕರಣ ಎಂದು ದಾಖಲಾಗಿದೆ. ಬಂಧಿತ ಆರೋಪಿಗಳ ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸಿದ್ಧತೆ ನಡೆಸಿದ್ದಾರೆ.
ಕಳೆದ ಏ.೭ರಂದು ಕನ್ನಡಪ್ರಭದಲ್ಲಿ ನಿದ್ರೆ ಮಾತ್ರೆ ಕೊಟ್ಟು ಪತಿಗೆ ಬೆಂಕಿ ಹಚ್ಚಿದಾಳ ಪತ್ನಿ? ಎಂದು ಸುದ್ದಿ ಪ್ರಕಟಗೊಂಡಿತ್ತು. ಸುದ್ದಿಯ ಬಳಿಕ ಆರೋಪಿಗಳ ಬಂಧನವಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.