ನಿದ್ದೆ ಮಾತ್ರೆ ಕೊಟ್ಟು ಪತಿಗೆ ಬೆಂಕಿ ಹಚ್ಚಿದ ಪತ್ನಿ

| Published : Apr 07 2025, 12:37 AM IST

ಸಾರಾಂಶ

ತಾಲೂಕಿನ ಮೂಡುಗೂರು ಗ್ರಾಮದಲ್ಲಿ ಪತ್ನಿಯೇ ಗಂಡನಿಗೆ ಬೆಂಕಿ ಹಚ್ಚಿ ಸಾಯಿಸಿದ್ದಾರೆಂಬ ಅನುಮಾನವಿದೆ, ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತನ ತಾಯಿಯಿಂದ ತೆರಕಣಾಂಬಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಮೂಡುಗೂರು ಗ್ರಾಮದಲ್ಲಿ ಪತ್ನಿಯೇ ಗಂಡನಿಗೆ ಬೆಂಕಿ ಹಚ್ಚಿ ಸಾಯಿಸಿದ್ದಾರೆಂಬ ಅನುಮಾನವಿದೆ, ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತನ ತಾಯಿಯಿಂದ ತೆರಕಣಾಂಬಿ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂಡುಗೂರು ಗ್ರಾಮದ ಸಿದ್ದೇಶ್‌(41) ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮೃತನ ತಾಯಿಯು ಸೊಸೆ ಸವಿತ ಹಾಗೂ ಸವಿತಾಳ ತಂಗಿಯ ಗಂಡ ಸಿದ್ದು ಅಲಿಯಾಸ್‌ ಸಿದ್ದರಾಜು, ತಮ್ಮ ಮಗನಿಗೆ ಬೆಂಕಿ ಹಚ್ಚಿ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ. ದೂರಿನ ಪ್ರಕಾರ ಸಿದ್ದೇಶನ ಪತ್ನಿ ಸವಿತ ಗಂಡನಿಗೆ ರಾತ್ರಿ ಊಟಕ್ಕೆ ನಿದ್ರೆ ಮಾತ್ರೆ ಕೊಟ್ಟಿದ್ದಾರೆ. ನಂತರ ಗಂಡ ನಿದ್ರೆಗೆ ಜಾರಿದಾಗ ಮಧ್ಯ ರಾತ್ರಿ ಪೆಟ್ರೋಲ್‌ ಅಥವಾ ಡಿಸೇಲ್‌ ಸುರಿದು ಬೆಂಕಿ ಹಾಕಿದ್ದಾಳೆ. ಬೆಂಕಿ ತಾಕಿದ ಬಳಿಕ ಸಿದ್ದೇಶ್‌ ಕೂಗಿ ಕೊಂಡಾಗ, ಮೊಬೈಲ್‌ ಬ್ಲಾಸ್ಟ್‌ ಆಗಿದೆ ಎಂದು ಪತ್ನಿ ಸವಿತ ನೆರೆ ಹೊರೆಯವರಿಗೆ ಸುದ್ದಿ ಹರಡಿದ್ದಾರೆ. ಆಸ್ಪತ್ರೆಗೆ ಆ್ಯಂಬುಲೆನ್ಸ್‌ ನಲ್ಲಿ ಗಾಯಾಳು ಕರೆದುಕೊಂಡು ಹೋಗುವಾಗ ಪತ್ನಿ ಸವಿತ ಜೊತೆ ಹೋಗಿರಲಿಲ್ಲ. ಮಾರನೇ ದಿನ ಮನೆಯಲ್ಲಿದ್ದ ಒಡವೆ, ಹಣ ತೆಗೆದುಕೊಂಡು ತವರು ಮನೆಗೆ ಹೋಗಿದ್ದಾಳೆ ಎಂದು ಮೃತರ ತಾಯಿ ದೂರಿದ್ದಾರೆ. ಈ ಸಂಬಂಧ ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.