ಇಲಿಯಾಸ್‌ ಕೊಲೆ ಪ್ರಕರಣ: ಪತಿ ಬಲಿ ಪಡೆದ ಪತ್ನಿ, ಪ್ರಿಯಕರ ಸೆರೆ

| Published : Sep 27 2024, 01:20 AM IST

ಸಾರಾಂಶ

ಅನೈತಿಕ ಸಂಬಂಧ ಹಿನ್ನೆಲೆ ಬಸವಾಪಟ್ಟಣದಲ್ಲಿ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದ ಪ್ರಕರಣವನ್ನು ಬಸವಾಪಟ್ಟಣ ಪೊಲೀಸರು ಮಂಗಳವಾರ ಬೇಧಿಸಿದ್ದಾರೆ. ಮೃತ ಚನ್ನಗಿರಿ ಪಟ್ಟಣದ ಇಲಿಯಾಸ್ ಅಹಮ್ಮದ್‌ನ ಪತ್ನಿ ಆಯೇಷಾ ಬೀಬಿ ಹಾಗೂ ಆಕೆಯ ಪ್ರಿಯಕರ ಮಂಜುನಾಥನನ್ನು ಬಂಧಿಸಿದ್ದಾರೆ.

- ಆಯೇಷಾ, ಪ್ರಿಯಕರ ಮಂಜುನಾಥಗೆ ನ್ಯಾಯಾಂಗ ಬಂಧನ - - -

ದಾವಣಗೆರೆ: ಅನೈತಿಕ ಸಂಬಂಧ ಹಿನ್ನೆಲೆ ಬಸವಾಪಟ್ಟಣದಲ್ಲಿ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದ ಪ್ರಕರಣವನ್ನು ಬಸವಾಪಟ್ಟಣ ಪೊಲೀಸರು ಮಂಗಳವಾರ ಬೇಧಿಸಿದ್ದಾರೆ. ಮೃತ ಚನ್ನಗಿರಿ ಪಟ್ಟಣದ ಇಲಿಯಾಸ್ ಅಹಮ್ಮದ್‌ನ ಪತ್ನಿ ಆಯೇಷಾ ಬೀಬಿ ಹಾಗೂ ಆಕೆಯ ಪ್ರಿಯಕರ ಮಂಜುನಾಥನನ್ನು ಬಂಧಿಸಿದ್ದಾರೆ. ಬಸವಾಪಟ್ಟಣದ ಆಯೇಷಾ ಗಂಡ ಇಲಿಯಾಸ್‌ ಅಹಮ್ಮದ್‌ 2023ರ ಫೆ.23ರಂದು ಕಾಣೆಯಾಗಿದ್ದರು. 2023ರ ಮಾ.11ರಂದು ಈ ಬಗ್ಗೆ ಬಸವಾಪಟ್ಟಣ ಠಾಣೆಗೆ ಆಯೇಷಾ ದೂರು ನೀಡಿದ್ದರು. ಈ ಮಧ್ಯೆ 2023ರ ಫೆ.26ರಂದು ಹರಿಹರ ತಾಲೂಕು ಮಲೇಬೆನ್ನೂರು ಠಾಣೆ ವ್ಯಾಪ್ತಿಯ ಭದ್ರಾ ಕಾಲುವೆಯಲ್ಲಿ ಪತ್ತೆಯಾಗಿದ್ದ ಅನಾಮಧೇಯ ಶವದ ಚಹರೆ ಹಾಗೂ ಇಲಿಯಾಸ್‌ ಮಕ್ಕಳ ರಕ್ತದ ಡಿಎನ್‌ಎಗೆ ಹೊಂದಿಕೆ ಕಂಡುಬಂದಿತು. ಸದರಿ ಶವ ಕಾಣೆಯಾಗಿದ್ದ ಇಲಿಯಾಸ್‌ನದಾಗಿದ್ದು, ಆತನೇ ಮಕ್ಕಳ ಜೈವಿಕ ತಂದೆ ಎಂಬುದಾಗಿ ವರದಿ ಪೊಲೀಸರ ಕೈಸೇರಿತು.

ಇತ್ತ ಮೃತ ಇಲಿಯಾಸ್‌ ತಮ್ಮ ಫೈರೋಜ್ ಅಹಮ್ಮದ್‌ ಅತ್ತಿಗೆ ಆಯೇಷಾಳೇ ಅಣ್ಣನ ಕೊಲೆ ಮಾಡಿಸಿರುವುದಾಗಿ ಆರೋಪಿಸಿ ದೂರು ನೀಡಿದ್ದರಿಂದ ಬಸವಾಪಟ್ಟಣ ಪೊಲೀಸರು ತನಿಖೆಗೆ ಮುಂದಾದರು. ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಚನ್ನಗಿರಿ ಎಎಸ್‌ಪಿ ಸ್ಯಾಮ್‌ ವರ್ಗೀಸ್‌ ಮಾರ್ಗದರ್ಶನದಲ್ಲಿ ತನಿಖೆ ಶುರುವಾಯಿತು.

ಸಂತೇಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಸವಾಪಟ್ಟಣ ಪಿಎಸ್ಐ ಭಾರತಿ, ಸಿಬ್ಬಂದಿ ತಂಡ 2024ರ, ಸೆ.24ರಂದು ಆಯೇಷಾ ಬೀಬಿಯನ್ನು ವಿಚಾರಣೆಗೆ ಒಳಪಡಿಸಿದಾಗ ಇಲಿಯಸ್‌ ಕೊಲೆ ಪ್ರಕರಣ ಸಂಪೂರ್ಣ ಬಯಲಾಗಿದೆ. ಆಯೇಷಾ ಹಾಗೂ ಅದೇ ಊರಿನ ಮಂಜುನಾಥನ ಮಧ್ಯೆ ಅಕ್ರಮ ಸಂಬಂಧ, 2023ರ ಫೆ.23ರಂದು ಬೈಕ್‌ನಲ್ಲಿ ಸಾಗರಪೇಟೆ ಕ್ಯಾಂಪ್‌ನ ಮುಕುಂದ ಡಾಬಾದಲ್ಲಿ ಮದ್ಯದೊಳಗೆ ನಿದ್ದೆ ಮಾತ್ರೆ ಸೇರಿಸಿದ್ದು, ಅಲ್ಲಿಯ ಭದ್ರಾ ಕಾಲುವೆಯಲ್ಲಿ ಈಜಾಡುವಂತೆ ಮಾಡಿ, ಕೊಂದಿದ್ದ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಹಂತಕ ಮಂಜುನಾಥ ಹಾಗೂ ಆಯೇಷಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಬೇಧಿಸಿದ ಅಧಿಕಾರಿ, ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ಎಸ್‌ಪಿ ಶ್ಲಾಘಿಸಿದ್ದಾರೆ.

- - -

(ಸಾಂದರ್ಭಿಕ ಚಿತ್ರ)