ಸಾರಾಂಶ
ಗಣಿ ಧೂಳು ತಡೆಯಲು ರಸ್ತೆಗೆ ಹಾಕಿದ ನೀರಿಂದ ಬಾಯಾರಿಸಿಕೊಳ್ಳುತ್ತಿರುವ ಕಾಡು ಹಂದಿಗಳ ಹಿಂಡು
ವಿ.ಎಂ. ನಾಗಭೂಷಣಕನ್ನಡಪ್ರಭ ವಾರ್ತೆ ಸಂಡೂರು
ತಾಲೂಕಿನ ರಾಮಘಡ ಅರಣ್ಯ ಪ್ರದೇಶದಲ್ಲಿ ಗಣಿ ಧೂಳು ಏಳದಂತೆ ತಡೆಯಲು ರಸ್ತೆಗೆ ಹಾಕಿದ ನೀರನ್ನು ಕಾಡುಹಂದಿಗಳ ಹಿಂಡೊಂದು ಕುಡಿದು ಬಾಯಾರಿಸಿಕೊಳ್ಳುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿಕೊಂಡಿದ್ದಾರೆ. ಇದು ಸದ್ಯ ಸಂಡೂರಿನ ಪರಿಸ್ಥಿತಿ ಬಿಂಬಿಸುವಂತಿದೆ. ಇಲ್ಲಿ ಬಿಸಿಲಿನ ತಾಪಮಾನ ಕಾಡುಪ್ರಾಣಿಗಳಿಗೂ ಸಂಕಷ್ಟ ತಂದಿದೆ.ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ಕಾಡಿನಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆ ಉಂಟಾಗಿದೆ. ಬೇಸಿಗೆಯಲ್ಲಿ ಕಾಡಿನಲ್ಲಿ ನೀರಿನ ಕೊರತೆಯಾದರೆ ವನ್ಯಜೀವಿಗಳು ಆಹಾರ ಹಾಗೂ ನೀರನ್ನು ಅರಸಿ ನಾಡಿಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ಹೆಚ್ಚಲಿದೆ. ಅರಣ್ಯದಲ್ಲಿ ವನ್ಯಜೀವಿಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವವಾಗದಂತೆ ಗಣಿ ಕಂಪನಿಗಳವರು ಹಾಗೂ ಅರಣ್ಯ ಇಲಾಖೆಯವರು ಕ್ರಮಕೈಗೊಳ್ಳಬೇಕಿದೆ ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಉಪಾಧ್ಯಕ್ಷ ಶ್ರೀಶೈಲ ಆಲ್ದಳ್ಳಿ ''''ಕನ್ನಡಪ್ರಭ''''ದೊಂದಿಗೆ ಮಾತನಾಡಿ, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ಅರಣ್ಯ ಪ್ರದೇಶದಲ್ಲಿ ಗಣಿ ಧೂಳು ತಡೆಯಲು ರಸ್ತೆಗೆ ಹಾಕಿದ ನೀರನ್ನು ಕಾಡು ಹಂದಿಗಳು ಕುಡಿಯುತ್ತಿರುವ ದೃಶ್ಯವನ್ನು ನೋಡಿದರೆ ಪರಿಸ್ಥಿತಿ ಅರ್ಥವಾಗುತ್ತದೆ. ಕಾಡಿನಲ್ಲಿ ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ. ಗಣಿ ಕಂಪನಿಗಳವರು ಹಾಗೂ ಅರಣ್ಯ ಇಲಾಖೆಯವರು ತಾಲೂಕಿನ ನಾಲ್ಕು ವಲಯಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿ, ಕಾಡಿನಲ್ಲಿ ವನ್ಯಜೀವಿಗಳಿಗೆ ನೀರಿನ ವ್ಯವಸ್ಥೆ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ, ವನ್ಯಜೀವಿಗಳು ನೀರನ್ನು ಅರಸಿ, ನಾಡಿಗೆ ಬರುವ ಸಂಭವವಿದೆ ಎಂದು ಹೇಳಿದ್ದಾರೆ.ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ನೀರಿಗೆ ಬೇಡಿಕೆ ಹೆಚ್ಚಲಿದೆ. ವನ್ಯಜೀವಿಗಳು ಇದಕ್ಕೆ ಹೊರತಲ್ಲ. ತಾಲೂಕಿನಲ್ಲಿ ಜಲಾಶಯ, ಸ್ವಾಭಾವಿಕ ಜಲ ಮೂಲಗಳು ಅಲ್ಲಲ್ಲಿ ವನ್ಯಜೀವಿಗಳ ನೀರಿನ ದಾಹವನ್ನು ತಣಿಸಲಿವೆ. ಆದಾಗ್ಯೂ ಜಲಮೂಲಗಳು ಇಲ್ಲದ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯಾಗದಂತೆ ಕ್ರಮಕೈಗೊಳ್ಳುವುದು ಅಗತ್ಯವಿದೆ. ಕಾಡಿನಲ್ಲಿ ವನ್ಯಜೀವಿಗಳ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಹಾಗೂ ಗಣಿ ಕಂಪನಿಗಳಿಂದ ತಾಲೂಕಿನ ನಾಲ್ಕು ಅರಣ್ಯ ವಲಯಗಳಲ್ಲಿ ನೀರಿನ ತೊಟ್ಟಿ (ವಾಟರ್ ಹೋಲ್), ಸಿಮೆಂಟಿನ ತೊಟ್ಟಿಗಳನ್ನಿಟ್ಟು ಅವುಗಳಲ್ಲಿ ನೀರನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ವನ್ಯಜೀವಿಗಳಿಗೆ ಬಾಯಾರಿಕೆ ತಣಿಸಿಕೊಳ್ಳಲು ಅನುಕೂಲವಾಗಲಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ದಾದಾ ಖಲಂದರ್.