ಸಾರಾಂಶ
ಗದ್ದೆ-ತೋಟಗಳಿಗೆ ನುಗ್ಗಿ, ಭತ್ತ, ಜೋಳ, ಅಡಕೆ, ಬಾಳೆ ಬೆಳೆಗಳನ್ನು ಹಾನಿಪಡಿಸುತ್ತಿವೆ.
ಶಿರಸಿ: ತಾಲೂಕಿನ ಬನವಾಸಿ ಸಮೀಪದ ಕನಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಕಾಡಾನೆ ಹಾವಳಿ ತೀವ್ರವಾಗಿದೆ. ಇಲ್ಲಿಯ ಹೊಲಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು, ಜೋಳ, ಕಬ್ಬು ಬೆಳೆಗಳನ್ನು ನಾಶಪಡಿಸಿದ್ದು, ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ಕಳೆದ ವಾರದ ಹಿಂದೆ ಕಾಣಿಸಿಕೊಂಡಿದ್ದ ಐದಕ್ಕೂ ಅಧಿಕ ಆನೆಗಳು ಶನಿವಾರ ಮತ್ತೆ ಕೆಲವೆಡೆ ದಾಳಿ ನಡೆಸಿವೆ. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ತಾಲೂಕಿನ ಪೂರ್ವಭಾಗದ ರೈತರು ಬರಗಾಲದ ಸ್ಥಿತಿ ಎದುರಿಸುತ್ತಿದ್ದಾರೆ. ಬೊರ್‌ವೆಲ್‌ಗಳ ನೀರು ಬಳಸಿ, ಜೋಳ, ಕಬ್ಬು,ಅಡಕೆ ಬೆಳೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರ ಮಧ್ಯೆ ಕಾಡಾನೆಗಳ ಹಿಂಡು ಹೊಲಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿರುವುದರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗುವಂತಾಗಿದೆ.ಪ್ರತಿ ವರ್ಷ ಈ ಸಮಯದಲ್ಲಿ ಕಾಡಾನೆಗಳ ಹಿಂಡು ಕಿರವತ್ತಿ, ಮಳಗಿ ಭಾಗದಿಂದ ಬನವಾಸಿವರೆಗೆ ಆಹಾರ ಹುಡುಕುತ್ತ ಆಗಮಿಸುತ್ತವೆ. ಈ ಪ್ರದೇಶದಲ್ಲಿ ಗದ್ದೆ-ತೋಟಗಳಿಗೆ ನುಗ್ಗಿ, ಭತ್ತ, ಜೋಳ, ಅಡಕೆ, ಬಾಳೆ ಬೆಳೆಗಳನ್ನು ಹಾನಿಪಡಿಸುತ್ತಿವೆ. ಮಹೇಶ ನಾಯ್ಕ ಎಂಬುವವರ ಜೋಳ, ದೇವೇಂದ್ರ ನಾಯ್ಕ ಅವರ ಕಬ್ಬು, ಮಂಜಪ್ಪ ನಾಯ್ಕರ ಅಡಿಕೆ ಸಸಿ ಹಾಗೂ ಸತೀಶ ನಾಯ್ಕರ ಕಬ್ಬು ಬೆಳೆಗಳಿಗೆ ಹಾನಿಪಡಿಸಿವೆ. ಆನೆಗಳ ಹಿಂಡು ಕಂಡು ನಾವೆಲ್ಲರೂ ಸೇರಿ ಓಡಿಸಿದ್ದೇವೆ ಎಂದು ಅಣ್ಣಪ್ಪ ಹಾಡಲಿಗಿ ತಿಳಿಸಿದರು.
ಕಳೆದ ಆರೇಳು ವರ್ಷಗಳಿಂದ ಬೆಳೆ ಹಾನಿ ಹೆಚ್ಚುತ್ತಲೇ ಇದೆ. ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಿನ ಕೆಲಸವಾಗಿದೆ. ಕಾಡಾನೆಗಳ ಹಿಂಡು ಹೊಲಗಳಿಗೆ ನುಗ್ಗಿದರೆ ಸಂಪೂರ್ಣ ಬೆಳೆಗಳನ್ನು ನಾಶಪಡಿಸುತ್ತವೆ. ಗ್ರಾಮೀಣ ಭಾಗಗಳಿಗೆ ಆನೆ ಹಿಂಡು ಬರುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಮುಂದಾಗಬೇಕು ಎಂಬುದು ರೈತಾಪಿ ಸಮುದಾಯದ ಒತ್ತಾಯವಾಗಿದೆ.