ಕಾಡಿನ ಹಾದಿ ತಪ್ಪಿ ನಗರಕ್ಕೆ ಬಂದ ಕಾಡಾನೆ; ಜನರಲ್ಲಿ ಭೀತಿ

| Published : Mar 13 2024, 02:05 AM IST

ಕಾಡಿನ ಹಾದಿ ತಪ್ಪಿ ನಗರಕ್ಕೆ ಬಂದ ಕಾಡಾನೆ; ಜನರಲ್ಲಿ ಭೀತಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಡಿನೊಳಗಿನ ಸಂಚಾರ ಪಥದಲ್ಲಿ ದಿಕ್ಕು ತಪ್ಪಿಸಿಕೊಂಡು ಬಂದಿರುವ ಈ ಆನೆಯು ದಿನದುದ್ದಕ್ಕೂ ಶಾಂತಯುತವಾಗಿಯೇ ವರ್ತಿಸಿದ್ದು, ಕಾಡಿನ ದಾರಿ ತಿಳಿಯದೆ ನದಿ ತಟದಲ್ಲಿ ಸಂಚರಿಸಿತ್ತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕಾಡಾನೆಯೊಂದು ಮೊಗ್ರು, ಬೆದ್ರೋಡಿ, ನೀರಕಟ್ಟೆ ಪರಿಸರದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿಯನ್ನು ಮೂಡಿಸಿದ ಘಟನೆ ಮಂಗಳವಾರ ನಡೆದಿದೆ.

ಮಂಗಳವಾರ ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದಲ್ಲಿ ಕಾಣಿಸಿಕೊಂಡ ಒಂಟಿ ಸಲಗವು ನೇತ್ರಾವತಿ ನದಿಯಲ್ಲಿ ವಿಹರಿಸುತ್ತಾ ಬೆದ್ರೋಡಿ, ವಳಾಲು, ನೀರಕಟ್ಟೆ ಪರಿಸರದಲ್ಲಿ ಸಂಚರಿಸಿತ್ತು. ನದಿಯಲ್ಲಿ ಸಂಚರಿಸುತ್ತಿದ್ದ ವೇಳೆ ನದಿಯ ನೀರನ್ನು ತನ್ನ ಸೊಂಡಿಲಿನಿಂದ ತನ್ನ ಮೈಗೆಲ್ಲಾ ಸಿಂಪಡಿಸುತ್ತಾ ಬಿಸಿಲ ಝಳಕ್ಕೆ ತಂಪೆರೆಯುತ್ತಿತ್ತು. ನದಿ ಪಾತ್ರದಲ್ಲಿ ತನ್ನ ಸಂಚಾರದ ವೇಳೆ ಒಂದು ಪಂಪು ಶೆಡ್ ಹಾಗೂ ಕೆಲ ಬಾಳೆ ಗಿಡಗಳಿಗೆ ಹಾನಿಯಾಗಿರುವುದನ್ನು ಹೊರತು ಪಡಿಸಿ ಬೇರಾವುದೇ ಹಾನಿಯುಂಟಾಗಲಿಲ್ಲ.

ಕಾಡಿನೊಳಗಿನ ಸಂಚಾರ ಪಥದಲ್ಲಿ ದಿಕ್ಕು ತಪ್ಪಿಸಿಕೊಂಡು ಬಂದಿರುವ ಈ ಆನೆಯು ದಿನದುದ್ದಕ್ಕೂ ಶಾಂತಯುತವಾಗಿಯೇ ವರ್ತಿಸಿದ್ದು, ಕಾಡಿನ ದಾರಿ ತಿಳಿಯದೆ ನದಿ ತಟದಲ್ಲಿ ಸಂಚರಿಸಿತ್ತು. ಮಂಗಳವಾರ ಸಾಯಂಕಾಲದಿಂದ ಮತ್ತೆ ನೀರಕಟ್ಟೆಯಿಂದ ವಳಾಲಿನತ್ತ ಪ್ರಯಾಣ ಬೆಳೆಸಿದ ಈ ಆನೆಯು ರಾತ್ರಿ ವೇಳೆ ಕಾಡಿನೊಳಗೆ ಪ್ರವೇಶಿಸಿದೆ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ತಿಳಿಸಿದ್ದಾರೆ. ಕಡಿನೊಳಗೆ ದಿಕ್ಕು ತಪ್ಪಿ ಜನವಸತಿ ಪ್ರದೇಶದೊಳಗೆ ಬರುವ ಆನೆಯನ್ನು ಜನರು ಪಟಾಕಿ ಸಿಡಿಸಿ ,ಭೀತಿ ಹುಟ್ಟಿಸಿ ಓಡಿಸುವ ಯತ್ನ ಮಾಡುವುದರಿಂದಲೇ ಈ ರೀತಿ ಆನೆಗಳು ತನ್ನ ನೈಜ ಪಥವನ್ನು ಬಿಟ್ಟು ಎಲ್ಲೆಲ್ಲೋ ಅಲೆಯುವಂತಾಗುವುದು. ಆನೆಗಳೊಂದಿಗೆ ಶಾಂತಚಿತ್ತವಾಗಿ ವರ್ತಿಸುವುದರಿಂದ ಆನೆಗಳಿಗೆ ಒಮ್ಮೆ ದಿಕ್ಕ್ಕು ತಪ್ಪಿದರೂ ಮತ್ತೆ ಅದರ ನೈಜ ಪಥವನ್ನು ಹಿಡಿಯಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಮಂಗಳವಾರ ಆನೆಯತ್ತ ಜನ ಜಮಾಯಿಸದಂತೆ ಪೊಲೀಸರ ಸಹಕಾರ ಪಡೆಯಲಾಗಿದೆ. ಅರಣ್ಯ ಸಿಬ್ಬಂದಿ ಆನೆಯ ಚಲನವಲನದ ಬಗ್ಗೆ ನಿಗಾವಿರಿಸಿ ಆನೆಯನ್ನು ಕಾಡಿನತ್ತ ಸಾಗಲು ಪೂರಕ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಅರಣ್ಯಾಧಿಕಾರಿ ಜಯಪ್ರಕಾಶ್ ವಿವರಿಸಿದರು. ನ್ಯಾಯತರ್ಪು ಒಂಟಿ ಸಲಗದ ದಾಂದಲೆ

ಬೆಳ್ತಂಗಡಿ: ನ್ಯಾಯತರ್ಪು ಗ್ರಾಮದ ಕೇಲ್ದಡ್ಕ, ಒಂಜಾರೆ ಮುದ್ದುಂಜ, ಹಾಕೋಟೆ, ಕಲಾಯಿತೊಟ್ಟು, ಕಜೆ, ಕೆಳಗಿನಬೆಟ್ಟು ಮತ್ತು ನಾಳ ಸಮೀಪದ ಪಾಂಡಿಬೆಟ್ಟು ಗ್ರಾಮಸ್ಥರ ಕೃಷಿ ತೋಟಕ್ಕೆ ತಡರಾತ್ರಿ ನುಗ್ಗಿದ ಒಂಟಿಸಲಗದಿಂದ ಬಾಳೆ ಕೃಷಿ ನಾಶವಾಗಿದೆ. ಗ್ರಾಮಸ್ಥರು ತಡ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ತಕ್ಷಣ ರಾತ್ರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.ಸ್ಥಳೀಯ ಕೃಷಿಕರ ಜೊತೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದರೂ ಸುಳಿವು ಸಿಗಲಿಲ್ಲ. ಕೊಯ್ಯೂರು ಗ್ರಾಮದಲ್ಲಿ ಕಳೆದ 2 ದಿನಗಳಿಂದ ಕೊಯ್ಯೂರು ಪರಿಸರದಲ್ಲಿ ರಾತ್ರಿ 2 ಆನೆಗಳು ಕೃಷಿ ತೋಟಕ್ಕೆ ನುಗ್ಗಿ ದಾಂದಲೆ ಮಾಡಿದ ಬಗ್ಗೆ ಕೃಷಿಕರು ಆತಂಕದಲ್ಲಿದ್ದಾರೆ.