ಕಾಡಾನೆ ದಾಳಿ: ತುಪ್ಪೂರಲ್ಲಿ ಡಿಎಫ್‌ಒ ಪರಿಶೀಲನೆ

| Published : Sep 04 2025, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಕಳೆದ ಒಂದು ವಾರದಿಂದ ಕಾಡಾನೆ ದಾಳಿಗೆ ಒಳಗಾದ ಸಮೀಪದ ತುಪ್ಪೂರು ಗ್ರಾಮಕ್ಕೆ ಮಂಗಳವಾರ ಡಿಎಫ್‌ಒ ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಳೆದ ಒಂದು ವಾರದಿಂದ ಕಾಡಾನೆ ದಾಳಿಗೆ ಒಳಗಾದ ಸಮೀಪದ ತುಪ್ಪೂರು ಗ್ರಾಮಕ್ಕೆ ಮಂಗಳವಾರ ಡಿಎಫ್‌ಒ ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದರು.ಕಾಡಾನೆ ದಾಳಿಗೆ ಒಳಗಾದ ವಿವಿಧ ರೈತರ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಬಳಿಕ ಸ್ಥಳೀಯರೊಂದಿಗೆ ಮಾತನಾಡಿದ ಡಿಎಫ್‌ಒ ಶಿವಶಂಕರ್, ಕಳೆದ ತಿಂಗಳು ಮೂಡಿಗೆರೆ ಭಾಗದಿಂದ ಎರಡು ಕಾಡಾನೆಗಳು ಆಲ್ದೂರು ಮಾರ್ಗವಾಗಿ ಬಾಳೆಹೊನ್ನೂರು ವ್ಯಾಪ್ತಿಗೆ ಬಂದಿದ್ದು, ಅಲ್ಲಿಂದ ಕೊಪ್ಪ, ಶೃಂಗೇರಿ ತಾಲೂಕಿನ ವಿವಿಧೆಡೆ ಸಂಚರಿಸಿದ್ದವು.

ಶೃಂಗೇರಿಯಿಂದ ಬಳಿಕ ಆ ಎರಡು ಆನೆಗಳು ಹೋದ ದಾರಿಯಲ್ಲಿಯೇ ವಾಪಾಸ್ ಬಂದಿದ್ದು, ಅರಣ್ಯ ಇಲಾಖೆಯಿಂದ ಆ ಆನೆಗಳನ್ನು ಮೂಲಸ್ಥಾನಕ್ಕೆ ಅಟ್ಟುವ ಕಾರ್ಯ ಮಾಡಲಾಗುತಿತ್ತು. ಆದರೆ ಕೆಲವು ಕಡೆಗಳಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿರು ವುದರಿಂದ ಅವುಗಳು ಭಯಗೊಂಡು ದಾರಿ ತಪ್ಪಿ ತುಪ್ಪೂರು ಗ್ರಾಮಕ್ಕೆ ಬಂದಿವೆ. ಇಲ್ಲಿ ಕೆಲವು ರೈತರ ಜಮೀನಿಗೆ ನುಗ್ಗಿ ಹಾನಿ ಮಾಡಿವೆ.ಅರಣ್ಯ ಇಲಾಖೆ ಟಾಸ್ಕ್ ಪೋರ್ಸ್ ಸಿಬ್ಬಂದಿ ಅವುಗಳನ್ನು ಮೂಲಸ್ಥಾನಕ್ಕೆ ಕಳುಹಿಸುವ ಕಾರ್ಯ ಮಾಡಲಿದ್ದು, ಶೀಘ್ರ ದಲ್ಲಿಯೇ ಬಾಳೆಹೊನ್ನೂರು, ಆಲ್ದೂರು ಮಾರ್ಗವಾಗಿ ಮೂಡಿಗೆರೆ ಕಡೆಗೆ ಅಟ್ಟುವ ಕೆಲಸವಾಗಲಿದೆ. ರೈತರ ಗದ್ದೆ, ತೋಟಗಳಿಗೆ ಹಾನಿಯಾಗಿರುವುದಕ್ಕೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡಲಿದ್ದು, ಹಾನಿಗೊಳಗಾದ ರೈತರು ಇಲಾಖೆಗೆ ಕೂಡಲೇ ಅರ್ಜಿ ಸಲ್ಲಿಸಬೇಕು. ರೈತರು ಆಧಾರ್‌ಕಾರ್ಡ್, ಪಹಣಿ, ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲನ್ನು ನೀಡಬೇಕು. ಆನೆ ದಾಳಿಯ ತಡೆಗೆ ರೈತರಿಗೆ ಇಲಾಖೆಯಿಂದ ಸೋಲಾರ್ ಬ್ಯಾಟರಿ ಚಾಲಿತ ಬೇಲಿ ಅಳವಡಿಸಲು ಅವಕಾಶ ವಿದ್ದು, ಇದನ್ನು ಉಪಯೋಗಿಸಬೇಕು ಎಂದು ಕೋರಿದರು.

ಕಳೆದ ಒಂದು ವಾರದಿಂದ ತುಪ್ಪೂರು ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಬುಧವಾರದ ವೇಳೆಗೆ ಕಾಡುಸಿಗಸೆ ಬಳಿಯ ಹುಲಿಖಾನ್ ಗುಡ್ಡ ಎಂಬ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಆನೆಗಳು ಅಲ್ಲಿಂದ ಬಾಳೆಹೊನ್ನೂರು ಕಡೆಗೆ ವಾಪಾಸ್ ತೆರಳುವ ಸಾಧ್ಯತೆಯಿದೆ.೦೩ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಹುಲಿಖಾನ್ ಗುಡ್ಡ ಎಂಬಲ್ಲಿ ಎರಡು ಕಾಡಾನೆಗಳು ಅರಣ್ಯದಲ್ಲಿ ಬೀಡು ಬಿಟ್ಟಿರುವುದು.