ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ತುಳಿದಿದ್ದರಿಂದ ವ್ಯಕ್ತಿ ಮೃತಪಟ್ಟಿದ್ದಾನೆ. ಹನೂರು ಕ್ಷೇತ್ರ ವ್ಯಾಪ್ತಿಯ ಕೊರಮನಕತ್ತರಿ ಗ್ರಾಮದ ರೈತ ನಂಜಪ್ಪ (60) ಮೃತಪಟ್ಟ ಹಿರಿಯ ರೈತ. ಈ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.ಘಟನೆ ವಿವರ:
ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವ್ಯಾಪ್ತಿಯ ಪಿಜಿ ಪಾಳ್ಯ ಸಮೀಪದ ಕೊರಮನಕತ್ತರಿ ಗ್ರಾಮದ ರೈತ ನಂಜಪ್ಪ ತಮ್ಮ ಜಮೀನಿನಲ್ಲಿ ಅರಿಶಿಣವನ್ನು ಕಾವಲು ಕಾಯುತ್ತಿದ್ದ ಸಂದರ್ಭದಲ್ಲಿ ಅರಣ್ಯ ಪ್ರದೇಶದಿಂದ ಬಂದ ಕಾಡಾನೆ ಒಕ್ಕಣೆ ಕಣದಲ್ಲಿದ್ದ ರೈತ ನಂಜಪ್ಪನನ್ನು ತುಳಿದ ಪರಿಣಾಮ ಸ್ಥಳದಲ್ಲಿ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.ಕುಟುಂಬಸ್ಥರ ಆಕ್ರಂದನ:
ಜಮೀನಿನ ಅರಿಶಿಣ ಒಕ್ಕಣೆ ಕಣದಲ್ಲಿ ಕಾವಲು ಕಾಯುತ್ತಿದ್ದ ವಯೋವೃದ್ಧ ನಂಜಪ್ಪನ ಮೇಲೆ ಕಾಡಾನೆ ದಾಳಿ ನಡೆಸಿ ಸಾವನ್ನಪ್ಪಿರುವುದರಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಹೀಗಾಗಿ ಅರಣ್ಯ ಪ್ರದೇಶದಿಂದ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ಜೀವಗಳು ಬಲಿಯಾಗುತ್ತಿರುವುದನ್ನು ರೈತರು ಬೆಳೆ ನಷ್ಟದ ಜೊತೆಗೆ ಜೀವ ಹಾನಿ ಉಂಟಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.ಡಿಸಿಎಫ್ ಭೇಟಿ, ಪರಿಹಾರಕ್ಕೆ ಭರವಸೆ:ಮಲೆಮಾದೇಶ್ವರ ವನ್ಯಜೀವಿ ಕೊಳ್ಳೇಗಾಲ ಉಪ ವಿಭಾಗದ ಡಿಸಿಎಫ್ ಚಕ್ರಪಾಣಿ ಭೇಟಿ ನೀಡಿ ರೈತ ಆನೆ ದಾಳಿಯಿಂದ ಮೃತಪಟ್ಟಿರುವುದನ್ನು ಪರಿಶೀಲಿಸಿ ರೈತನ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಸಿಗುವ ಪರಿಹಾರವನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಮುಂದೆ ಕಾಡಾನೆಗಳು ರೈತರ ಜಮೀನಿಗೆ ಬರದಂತೆ ತಡೆಗಟ್ಟುತ್ತೇವೆ. ಮೊದಲ ಹಂತವಾಗಿ ಮೃತಪಟ್ಟ ನಂಜಪ್ಪನ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಲಾಗುವುದು ಉಳಿದಂತೆ ಹಣವನ್ನು ಶೀಘ್ರದಲ್ಲೇ ಕೊಡಿಸಲು ಸರ್ಕಾರದ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಎಫ್ ಶಿವರಾಂ ಹನೂರು ಇನ್ಸ್‌ಪೆಕ್ಟರ್ ಪಿ.ಆನಂದ್‌ಮೂರ್ತಿ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.ರೈತ ಸಂಘಟನೆಯಿಂದ ರಸ್ತೆತಡೆದು ಪ್ರತಿಭಟನೆ
ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು. ರೈತ ಮುಖಂಡರು ಸರ್ಕಾರದ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯತನದಿಂದ ರೈತನೊಬ್ಬ ಬಲಿಯಾಗಿದ್ದು ಈ ಸಂಬಂಧ ಸಂಬಂಧಪಟ್ಟ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ರೈತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಶಾಶ್ವತ ಪರಿಹಾರ ನೀಡಿ:
ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ರೈತರು ದಿನನಿತ್ಯ ಬೆಳೆ ನಷ್ಟದ ಜೊತೆಗೆ ಕಾಡುಪ್ರಾಣಿಗಳ ಕಾಟ, ಕಾಡಾನೆ ಹಾಗೂ ಹಂದಿಗಳು ಸೇರಿದಂತೆ ಕ್ರೂರ ಚಿರತೆ ಕಾಟ ಸಹ ಉಂಟಾಗಿ ರೈತರ ಸಾಕು ಪ್ರಾಣಿಗಳು ದಿನದಿಂದ ದಿನಕ್ಕೆ ಬಲಿಯಾಗುತ್ತಿವೆ. ಅರಣ್ಯ ಇಲಾಖೆ ರೈತರ ಸುರಕ್ಷಿತ ಹಿತದೃಷ್ಟಿಯಿಂದ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆ ಕಾಡಾನೆ ದಾಳಿಯಿಂದ ಮೃತಪಟ್ಟ ರೈತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಅರಣ್ಯದಂಚಿನ ಭಾಗಗಳಲ್ಲಿ ಕಾಡುಪ್ರಾಣಿಗಳ ಉಪಟಳ ತಪ್ಪಿಸಲು ಇಲಾಖೆ ಶಾಶ್ವತ ಪರಿಹಾರ ನೀಡಬೇಕು ಎಂದು ಪ್ರತಿಭಟನೆ ನಡೆಸಿ ಒತ್ತಾಯಿಸಿದರು. ಇದೇ ವೇಳೆ ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಹಾಗೂ ರೈತ ಮುಖಂಡರಾದ ಮಾದಪ್ಪ ಹಾಗೂ ದೊಡ್ಡ ಮಂಚ ವೆಂಕಟೇಶ್ ನಾರಾಯಣಸ್ವಾಮಿ ಇನ್ನಿತರ ರೈತ ಮುಖಂಡರು ಇದ್ದರು.ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ?ಉಗ್ರಗಾಮಿಗಳ ದಾಳಿಗೆ 26 ಜನರು ಬಲಿಯಾಗಿರುವುದರಿಂದ ಇಡೀ ದೇಶವೇ ಯುದ್ಧಕ್ಕೆ ನಿಂತಿದೆ. ಆದರೆ ಇಲ್ಲಿನ ಅಧಿಕಾರಿಗಳು ರೈತನೋರ್ವ ಸಾವನ್ನಪ್ಪಿರುವುದರಿಂದ ಇಲ್ಲಿನ ಅಧಿಕಾರಿಗಳಿಗೆ ರೈತನ ಬೆಲೆ ಗೊತ್ತಿಲ್ಲವೇ ಜೊತೆಗೆ ಕಾಡು ಪ್ರಾಣಿಗಳ ದಾಳಿಗೆ ರೈತ ಜೀವವನ್ನು ಕಳೆದುಕೊಂಡಿದ್ದಾನೆ. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿ ಜೊತೆಗೆ ಕಾಡು ಪ್ರಾಣಿಗಳ ಉಪಟಳ ತಪ್ಪಿಸಲು ಶಾಶ್ವತ ಪರಿಹಾರ ನೀಡಬೇಕು.
ಹೊನ್ನೂರ್ ಪ್ರಕಾಶ್, ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾಧ್ಯಕ್ಷ