ಸಾರಾಂಶ
ಪಾಲಿಬೆಟ್ಟ ಸಮೀಪ ಚೆನ್ನಂಗಿ ಬಸವನಹಳ್ಳಿ ಹಾಡಿ ನಿವಾಸಿ ಮೇಲೆ ಕಾಡಾನೆ ದಾಳಿ ನಡೆಸಿದ್ದು ಬಲಕೈಮುರಿತ ಉಂಟಾಗಿದೆ. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪಾಲಿಬೆಟ್ಟ ಸಮೀಪ ಚೆನ್ನಂಗಿ ಬಸವನಹಳ್ಳಿ ಹಾಡಿ ನಿವಾಸಿ ಮೇಲೆ ಕಾಡಾನೆ ದಾಳಿ ನಡೆಸಿದ್ದು ಬಲಕೈಮುರಿತ ಉಂಟಾಗಿದೆ. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವನಹಳ್ಳಿಯ ಪೊನ್ನ ಅವರ ಪುತ್ರ 52 ವರ್ಷದ ಜೆ.ಹೆಚ್. ಚಂದ್ರ ಕಾಡಾನೆ ದಾಳಿಗೆ ತುತ್ತಾದ ವ್ಯಕ್ತಿಯಾಗಿದ್ದಾರೆ. ಹಾಡಿಯ ಸಮೀಪ ಇದ್ದ ಸಂದರ್ಭ ಏಕಾಏಕಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.ವಿಷಯ ತಿಳಿದ ತಕ್ಷಣ ಮಡಿಕೇರಿ ಜಿಲ್ಲಾಸ್ಪತ್ರೆಗೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿ ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದರು. ವೈದ್ಯರ ತಂಡದೊಂದಿಗೆ ಮಾತುಕತೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವಂತೆ ಚರ್ಚಿಸಿದರು. ಬಲಕೈ ಮುರಿತವಾಗಿದ್ದು ನಾಳೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ವೈದ್ಯರ ತಂಡ ತಿಳಿಸಿದೆ.ಇದೇ ಸಂದರ್ಭ ಚೆನ್ನಂಗಿ ಬಸವನಹಳ್ಳಿಯ ವ್ಯಾಪ್ತಿಯಲ್ಲಿ ಕಾಡಾನೆ ಕಾರ್ಯಚರಣೆಯನ್ನು ಕೈಗೊಳ್ಳುವಂತೆ ತ್ ಪೂವಯ್ಯ ಅವರು ಸೂಚಿಸಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಅವರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ ಸಂಕೇತ್ ಪೂವಯ್ಯ ಅವರು ಸರಕಾರದಿಂದ ಗಾಯಾಳುವಿಗೆ ಸೂಕ್ತ ಪರಿಹಾರಕ್ಕೆ ಹಾಗೂ ಕೂಡಲೇ ಕಾಡಾನೆ ಕಾರ್ಯಾಚರಣೆ ಮತ್ತು ಉನ್ನತ ಮಟ್ಟದ ಚಿಕಿತ್ಸೆಯನ್ನು ಗಾಯಾಳುವಿಗೆ ನೀಡುವಂತೆ ಅಧಿಕಾರಿಗಳಿಗೆ ಪೊನ್ನಣ್ಣ ಅವರು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.