ಸಾರಾಂಶ
ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪುದುಕೊಟೆ ಗ್ರಾಮದ ನಿವಾಸಿ ಮಂಡೆಪಂಡ ಜಾಲಿ ಹಾಗೂ ಸಮೀಪದ ಗದ್ದೆಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಭತ್ತದ ಬೆಳೆಗೆ ಹಾನಿ ಉಂಟಾಗಿದೆ. ಕೈಗೆ ಬರಲು ಸಿದ್ದಗೊಂಡಿದ್ದ ಫಸಲು ಕಾಡಾನೆಗಳ ಪಾಲಾಗಿದೆ.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿರಾಜಪೇಟೆಯ ಪುದುಕೊಟೆಯ ಗದ್ದೆಯಲ್ಲಿ ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದಲ್ಲಿ ಫಸಲು ಹಾನಿಯಾಗಿದೆ. ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪುದುಕೊಟೆ ಗ್ರಾಮದ ನಿವಾಸಿ ಮಂಡೆಪಂಡ ಜಾಲಿ ಹಾಗೂ ಸಮೀಪದ ಗದ್ದೆಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಭತ್ತದ ಬೆಳೆಗೆ ಹಾನಿ ಉಂಟಾಗಿದೆ. ಕೈಗೆ ಬರಲು ಸಿದ್ದಗೊಂಡಿದ್ದ ಫಸಲು ಕಾಡಾನೆಗಳ ಪಾಲಾಗಿದೆ.ಈ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳಿಂದ ಸಮಸ್ಯೆಗಳು ಎದುರಾಗಿದ್ದ ಸಂಧರ್ಭ ಅರಣ್ಯ ಇಲಾಖೆಯು ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದ್ದರು. ಅದರೆ ಕಾಡಾನೆಗಳು ಒಂದು ಭಾಗದಿಂದ ತೆರಳಿ ಮತ್ತೊಂದು ಭಾಗದಲ್ಲಿ ಮರಳಿ ದಾಂದಲೆ ನಡೆಸುತ್ತಿರುವುದು ನಿತ್ಯ ಗೋಳಾಗಿದೆ.
ಕಳೆದ ವರ್ಷ ಕಾಡಾನೆಗಳ ದಾಳಿಯಿಂದಾಗಿ ಗದ್ದೆ ಮತ್ತು ಕಾಫಿ ತೋಟ ಹಾನಿಗೊಳಿಸಿತ್ತು. ಅರಣ್ಯ ಇಲಾಖೆಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು ಅದರೆ ವರ್ಷ ಕಳೆದರೂ ಪರಿಹಾರ ಹಣ ಕೈಸೇರಲಿಲ್ಲ. ನಾಟಿ ಕಳೆದು ಮರುದಿನವೇ ಕಾಡಾನೆಗಳ ದಾಳಿಯಿಂದ ನಷ್ಟ ಉಂಟಾಗಿತ್ತು. ಮರು ನಾಟಿ ಮಾಡಿ ಫಸಲು ಕೈಬರುವ ಹೊತ್ತಿನಲ್ಲಿ ಕಾಡಾನೆಗಳು ದಾಂದಲೆ ನಡೆಸಿವೆ. ಇದಲ್ಲದೆ ಕೆ. ಕುಮಾರ್ ಮತ್ತು ಪೊರ್ಕಂಡ ನಾಚಪ್ಪ ಅವರ ಗದ್ದೆ ಗಳಿಗೂ ಕಾಡಾನೆಗಳು ದಾಳಿ ನಡೆಸಿದ್ದು ಬೆಳೆ ಹಾನಿಯಾಗಿದೆ ಎಂದು ಮಂಡೆಪಂಡ ಜಾಲಿ ಅಳಲು ತೋಡಿಕೊಂಡಿದ್ದಾರೆ.ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಗಳ ದಾಳಿಗೆ ಸಿಲುಕಿ ಹಾನಿಗೊಂಡಿರುವ ಬೆಳೆಗಳನ್ನು ಪರಿಶೀಲನೆ ನಡೆಸಿದ್ದರು.
ಈ ಭಾಗದಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದಾಗಿ ನೆಮ್ಮದಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕಾಡಾನೆಗಳ ಹಾವಳಿ ತಡೆಗಟ್ಟಲು ಶಾಸ್ವತ ಯೋಜನೆಯನ್ನು ಸರ್ಕಾರ ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.