ಕಾಡಾನೆಯೊಂದು ಚಲಿಸುತ್ತಿದ್ದ ಕಾರು ಮತ್ತು ಬೈಕಿನ ಮೇಲೆ ದಾಳಿ ಮಾಡಿರುವ ಘಟನೆ ಶನಿವಾರ ರಾತ್ರಿ 8 ಗಂಟೆ ಸಮಯದಲ್ಲಿ ಸೋಮವಾರಪೇಟೆ ಸಮೀಪದ ಕಾಜೂರು ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾಡಾನೆಯೊಂದು ಚಲಿಸುತ್ತಿದ್ದ ಕಾರು ಮತ್ತು ಬೈಕಿನ ಮೇಲೆ ದಾಳಿ ಮಾಡಿರುವ ಘಟನೆ ಶನಿವಾರ ರಾತ್ರಿ 8 ಗಂಟೆ ಸಮಯದಲ್ಲಿ ಸೋಮವಾರಪೇಟೆ ಸಮೀಪದ ಕಾಜೂರು ಬಳಿ ನಡೆದಿದೆ. ಸೋಮವಾರಪೇಟೆ ನಾಡಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಮಾದಾಪುರ ನಿವಾಸಿ, ರುದ್ರಕುಮಾರ್ (ಸುನಿಲ್) ಪರಿಚಿತರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಸ್ನೇಹಿತರೊಂದಿಗೆ ಕಾರಿನಲ್ಲಿ ಮಾದಾಪುರದಿಂದ ಸೋಮವಾರಪೇಟೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯದಲ್ಲಿ ಕಾಡಾನೆ ಎದುರಾಗಿದೆ.

ಚಲಿಸುತಿದ್ದ ಕಾರಿನ ಮೇಲೆ ಎರಗಿ ಒದ್ದು ಕಾರನ್ನು ಜಖಂಗೊಳಿಸಿದೆ. ಕಾರಿನ ಒಳಗೆ ಒಟ್ಟು ಐದು ಜನರಿದ್ದು, ಕಾಡಾನೆ ಮುತ್ತಿಗೆ ಹಾಕಿದಾಗ ಜೋರಾಗಿ ಬೊಬ್ಬಿಟ್ಟಿದ್ದಾರೆ. ಅವರ ಬೊಬ್ಬೆ ಮತ್ತು ಹಾರನ್ ಶಬ್ದಕ್ಕೆ ಹಿಂದಕ್ಕೆ ಸರಿದ ಕಾಡಾನೆ ಸೋಮವಾರಪೇಟೆ ಕಡೆಯಿಂದ ಬರುತ್ತಿದ್ದ ಬೈಕ್ ವೊಂದರ ಮೇಲೆ ಲಗ್ಗೆಯಿಟ್ಟಿದೆ. ಕಾಡಾನೆಯ ಒದೆತಕ್ಕೆ ಬೈಕ್ ಕೆಳಗೆ ಬಿದ್ದಿದ್ದು, ಸವಾರ ಚರಂಡಿಯ ಒಳಗೆ ಹಾರಿ ಅವಿತುಕೊಂಡು ಕಾಡಾನೆ ದಾಳಿಯಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದಾನೆ. ಕಾರಿನಲ್ಲಿದ್ದ ರುದ್ರಕುಮಾರ್ (ಸುನಿಲ್) ಹಾಗೂ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆಯ ದಾಳಿಯಿಂದಾಗಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೈಕ್ ಜಖಂಗೊಂಡಿದೆ.