ಸಾರಾಂಶ
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುಮಾರು ೪ ಕಾಡಾನೆಗಳ ಹಿಂಡಿನಲ್ಲಿ ಒಂದು ಆನೆ ದಾಳಿ ಮಾಡಿದ ಪರಿಣಾಮ ರೈತನೋರ್ವ ಗಾಯಗೊಂಡಿರುವ ಘಟನೆ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಜೆ ಸೂರಾಪುರ ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆಯವರು ಸೇರಿ ಆನೆಯನ್ನು ಇಲ್ಲಿಂದ ಓಡಿಸಿದ್ದರೂ ಮತ್ತೆಮತ್ತೆ ಬರುತ್ತಿವೆ. ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಮಂಗಳವಾರ ಮುಂಜಾನೆ ಕಾಡಾನೆಯೊಂದು ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಜೆ ಸೂರಾಪುರ ಗ್ರಾಮದ ಮಲ್ಲಿಕಾರ್ಜುನ ಎಂಬ ರೈತನ ಮೇಲೆ ದಾಳಿ ನಡೆಸಿದೆ.ಮಲ್ಲಿಕಾರ್ಜುನ ತಮ್ಮ ಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುಮಾರು ೪ ಕಾಡಾನೆಗಳ ಹಿಂಡಿನಲ್ಲಿ ಒಂದು ಆನೆ ದಾಳಿ ಮಾಡಿದ ಪರಿಣಾಮ ಮಲ್ಲಿಕಾರ್ಜುನರ ತೊಡೆ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದೆ. ಅವರ ಕೂಗಾಟ ಕೇಳಿ ಅಕ್ಕಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರು ಕಾಡಾನೆಯನ್ನು ಬೆದರಿಸಿ ಕಳುಹಿಸಿದ್ದಾರೆ. ತೀವ್ರವಾಗಿ ಪೆಟ್ಟುಬಿದ್ದಿದ್ದ ಇವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವೇಳೆ ಮಾತನಾಡಿದ ಪ್ರತ್ಯಕ್ಷದರ್ಶಿಗಳಾದ ಸೋಮಣ್ಣ ಹಾಗೂ ಮಂಜುನಾಥ್ ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಣಿಸುತ್ತಿರುವ ಕಾಡಾನೆಗಳು ಏಕಾಏಕಿ ನಮ್ಮ ಗ್ರಾಮಗಳಿಗೆ ಬಂದು ದಾಳಿ ನಡೆಸುತ್ತಿದೆ. ಬೆಳೆ ಹಾನಿ ಮಾಡುತ್ತಿರುವ ಜೊತೆಗೆ ರೈತರ ಮೇಲೂ ದಾಳಿ ಮಾಡುತ್ತಿದೆ. ಬೆಳಗ್ಗೆ ಕೆಲಸಕ್ಕೆಂದು ಬಂದಂತಹ ರೈತನ ಮೇಲೆ ಏಕಾಏಕಿ ದಾಳಿ ಮಾಡಿದ ಪರಿಣಾಮ ಅವರಿಗೆ ತೀವ್ರತರವಾಗಿ ಪೆಟ್ಟು ಬಿದ್ದಿದ್ದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರು ಸೇರಿ ಆನೆಯನ್ನು ಇಲ್ಲಿಂದ ಓಡಿಸಿದ್ದರೂ ಮತ್ತೆಮತ್ತೆ ಬರುತ್ತಿವೆ. ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿಗಟ್ಟುವಂತೆ ಮನವಿ ಮಾಡಿದರು.