ಸಾರಾಂಶ
ಎಸ್ಟೇಟಿನಲ್ಲಿ ಕಾಫಿ ತೋಟದ ನಿರ್ವಹಣೆ ಸಮಯದಲ್ಲಿ ಏಕಾಏಕಿ ಬಂದ ಒಂಟಿ ಕಾಡಾನೆ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 46 ವರ್ಷದ ಲಕ್ಷ್ಮಣ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಅರೇಹಳ್ಳಿ ಹೋಬಳಿಯ ವಾಟೆಹಳ್ಳಿ ಗ್ರಾಮದ ಐಬಿಸಿ ಎಸ್ಟೇಟಿನಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 46 ವರ್ಷದ ಲಕ್ಷ್ಮಣ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿದೆ.ಎಸ್ಟೇಟಿನಲ್ಲಿ ಕಾಫಿ ತೋಟದ ನಿರ್ವಹಣೆ ಸಮಯದಲ್ಲಿ ಏಕಾಏಕಿ ಬಂದ ಒಂಟಿ ಕಾಡಾನೆ ಕಂಡು ಭಯಭೀತರಾಗಿದ್ದಾರೆ. ಆನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಲಕ್ಷ್ಮಣರನ್ನು ಹಿಂಬಾಲಿಸಿದ ಕಾಡಾನೆ ಸೊಂಡಿಲಿನಿಂದ ಗುದ್ದಿದ ಪರಿಣಾಮ ಬೆನ್ನಿಗೆ, ಕತ್ತಿನ ಹಿಂಭಾಗ ಹಾಗು ಕಾಲಿನ ಹಲವೆಡೆ ಗಾಯಗಳಾಗಿವೆ.
ಅರೇಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಲಕ್ಷ್ಮಣರನ್ನು ಕರೆದೊಯ್ಯಲಾಗಿದೆ.ಈ ಹಿಂದೆ ಪಟ್ಟಣದ ರೋಟರಿ ಶಾಲೆಯಲ್ಲಿ ವಾಚ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುವಹಿಸುತ್ತಿದ್ದ ಡೇಸಿನ್ ಡಿಸೋಜಾ ರವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.